Advertisement

ಬಡವನ ಭಾರ ಹೊತ್ತ ನೇತ್ರಾವತಿ!  ಸೆಳೆಯುವ ನದಿನೀರಲ್ಲೇ ಮನೆ ಸಲಕರಣೆ ಸಾಗಾಟ

12:58 AM Aug 20, 2021 | Team Udayavani |

ಬೆಳ್ತಂಗಡಿ: ದೇಶ ಸ್ವಾತಂತ್ರ್ಯ ಕಂಡು ವರ್ಷಗಳು ಸಾಗಿದವೇ ವಿನಾ ಬಡತನದ ರೇಖೆಯನ್ನು ಮಾಸುವಂಥ ಸರಕಾರದ ಯೋಜನೆಗಳು ಇನ್ನೂ ತಳಮಟ್ಟದ ಜನರಿಗೆ ತಲುಪಿಲ್ಲ. ಇದಕ್ಕೆ ಪ್ರತ್ಯಕ್ಷ ನಿದರ್ಶನ ಒಂದೊಮ್ಮೆ ಕುಗ್ರಾಮ ಎಂದು ಪಟ್ಟಹೊತ್ತ ಬೆಳ್ತಂಗಡಿ ತಾಲೂಕಿನ ದಿಡುಪೆ ಗ್ರಾಮದ ಹಲವು ಊರುಗಳು.

Advertisement

ಗುಡಿಸಲಂತಿರುವ ಮನೆಯಲ್ಲಿ ಪತ್ನಿ, ಮೂವರು ಮಕ್ಕಳೊಂದಿಗೆ ವಾಸವಿರುವ ಮಲವಂತಿಗೆ ಗ್ರಾ.ಪಂ.ನ ದಿಡುಪೆ ಹೊಳೆಕೆರೆ ನಿವಾಸಿ ಚಂದ್ರಶೇಖರ್‌ ಗೌಡ ಮತ್ತು ಕಮಲಾ ದಂಪತಿ ಸೂರು ನಿರ್ಮಾಣಕ್ಕಾಗಿ ಅಪಾಯ ಲೆಕ್ಕಿಸದೆ ಸೆಳೆಯುವ ನೇತ್ರಾವತಿ ನದಿಯನ್ನೇ ಮನೆ ಸಾಮಗ್ರಿ ಹೊತ್ತು ಸಾಗಿಸಲು ಆಶ್ರಯಿಸಿದ್ದಾರೆ.

ಹಾವು, ಹುಳುಹುಪ್ಪಟೆಗಳಿಂದ ಮುಕ್ತಿ ಬೇಕೆಂದು ಆಶ್ರಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಚಂದ್ರಶೇಖರ್‌ ಅವರು ಮಲವಂತಿಗೆ ಗ್ರಾ.ಪಂ.ಗೆ 2018ರಲ್ಲಿ ಅರ್ಜಿ ಸಲ್ಲಿಸಿದ್ದರು. 2019ರ ಆ. 9ರಂದು ಪ್ರವಾಹ ಮನೆಬಾಗಿಲಿಗೆ ಬಡಿದುಹೋಗಿತ್ತು. ಹೀಗಾಗಿ ಆಶ್ರಯ ಯೋಜನೆ ವಿಳಂಬ ಸಾಧ್ಯತೆಯಿಂದ ಬರಪರಿಹಾರದಡಿ ಮನೆ ಮಂಜೂರುಗೊಳಿಸುವ ಭರವಸೆ ನೀಡಲಾಗಿತ್ತು. ಅಂದು ಬಿರುಕು ಬಿಟ್ಟ ಮನೆಗಳಿಗೆಲ್ಲ ನೂತನ ಮನೆ ಮಂಜೂರಾಗಿದ್ದರೂ ಚಂದ್ರಶೇಖರ ಗೌಡರಿಗೆ ಅದೃಷ್ಟ ಒಲಿದಿರಲಿಲ್ಲ. ಅತ್ತ ಆಶ್ರಯ ಯೋಜನೆಯೂ ಇಲ್ಲ ಇತ್ತ ಬರಪರಿಹಾರವೂ ಇಲ್ಲ ಎಂದಾಗಿತ್ತು.  ಇನ್ನು ಸರಕಾರದ ಯೋಜನೆಗಳನ್ನು ಕಾಯುವುದು ತರವಲ್ಲವೆಂದು ತಾನೇ ಸಾಲಸೋಲ ಮಾಡಿ ಮನೆ ನಿರ್ಮಿಸಲು ಮುಂದಾಗಿದ್ದರು.

6 ಲಕ್ಷ ರೂ. ಸಾಲ :

ಬಂಗಾರ ಅಡವು, ಕೈಸಾಲ ಮಾತ್ರವಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘ, ನವೋದಯ ಸ್ವಸಹಾಯ ಗುಂಪು, ಗ್ರಾಮೀಣ ಒಕ್ಕೂಟದಿಂದ ಸೇರಿದಂತೆ ಒಟ್ಟು 6 ಲಕ್ಷ ರೂ. ಸಾಲ ಮಾಡಿದ್ದರು. ಮನೆ ನಿರ್ಮಾಣವೇನೋ ಸರಿ ಸಲಕರಣೆ ಸಾಗಿಸಲು ಮನೆಗೆ ರಸ್ತೆಯೇ ಇಲ್ಲ. ದಿಡುಪೆ ಪೇಟೆಗೆ ಬರಲು ನೇತ್ರಾವತಿ ನದಿ ದಾಟಬೇಕು. ಇಲ್ಲವೇ 1 ಕಿ.ಮೀ. ಸುತ್ತಿ ಕಾಲುಸಂಕದಲ್ಲಿ ತೆರಳಬೇಕು. ಸಿಮೆಂಟ್‌, ಕಬ್ಬಿಣ, ಇತರ ಸಾಮಗ್ರಿ ಸಾಗಿಸಲು ನದಿಯೇ ಆಶ್ರಯವಾಗಿತ್ತು.

Advertisement

ನೆರವಾದ ನೆರೆಯವರು :

ಪರಿಕರಗಳ ಸಾಗಾಟಕ್ಕೆ ನೇತ್ರಾವತಿ ನದಿಯೊಂದೇ ಕೊನೆಗುಳಿದ ಮಾರ್ಗವಾಗಿತ್ತು. ಹೀಗಿರುವಾಗ ಊರಿನ ಯುವಕರೂ ನೆರವಾಗಿದ್ದಾರೆ. ಚಂದ್ರಶೇಖರ್‌ ಅವರೊಂದಿಗೆ ಕಬ್ಬಿಣ, ಸಿಮೆಂಟ್‌, ಕಾಂಕ್ರೀಟ್‌ ಕಿಟಕಿ, ಬಾಗಿಲು ಸಾಗಾಟಕ್ಕೆ ನಝೀರ್‌, ಬಶೀರ್‌, ವಿನಯಚಂದ್ರ, ಪವನ್‌, ಸಫಾನ್‌, ರವಿ, ಸುರೇಶ್‌, ನವೀನ್‌ ಜೀವದ ಹಂಗುತೊರೆದು ನದಿ ದಾಟಿಸಿ ಚಂದ್ರಶೇಖರ್‌ ಅವರ ಬದುಕಿನ ನಾವಿಕರಾಗಿದ್ದಾರೆ. ಇದೀಗ ಮನೆ ಒಂದು ಹಂತಕ್ಕೆ ಬಂದು ತಲುಪಿದ್ದು ಸರಕಾರದ ಯೋಜನೆ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಅನೇಕ ಮನೆಗಳಿಗೆ ಸಂಪರ್ಕ ಕೊರತೆ :

ದಿಡುಪೆ ಗ್ರಾಮದ ಹೊಳೆಕೆರೆ, ಕೊಂಡಾಲ, ಕುಂಬಪಾಲು, ಬಾಳೆ ಹಿತ್ತಿಲು ಪ್ರಮುಖ ಪ್ರದೇಶಗಳ 25ಕ್ಕೂ ಅಧಿಕ ಮನೆಗಳಿಗೆ ತೆರಳಲು ರಸ್ತೆ ಸಂಪರ್ಕದ ಕೊರತೆ ಇದೆ. ಸೇತುವೆ ನಿರ್ಮಾಣವೂ ಸಾಧ್ಯವಾಗಿಲ್ಲ. ಹೀಗಾಗಿ ನದಿ ದಾಟಲು ಹಗ್ಗವೇ ಆಧಾರವೆಂಬಂತಾಗಿದೆ.

ಮೂರು ವರ್ಷಗಳಿಂದ ವಸತಿ ಯೋಜನೆಗಳು ಮಂಜೂರುಗೊಂಡಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಿರುವ ಹೆಚ್ಚಿನ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಿದ್ದಾರೆ. ಗ್ರಾ.ಪಂ.ನಿಂದ ಎಲ್ಲ ದಾಖಲೆಗಳು ಸಂಬಂಧಪಟ್ಟ ಇಲಾಖೆಗೆ ಹಾಜರುಪಡಿಸಲಾಗಿದೆ.ರಶ್ಮಿ,  ಪಿಡಿಒ, ಮಲವಂತಿಗೆ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next