ಬೆಳ್ತಂಗಡಿ: ಅರಣ್ಯ ಸಂಪತ್ತಿನ ರಕ್ಷಣೆಗಾಗಿ ಅರಣ್ಯ ಇಲಾಖೆಯು ರಾಜ್ಯದೆಲ್ಲೆಡೆ ಪ್ರತೀ ತಾಲೂಕಿಗೊಂದರಂತೆ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಪರಿಚಯಿಸಿದಂತೆ ತಾಲೂಕಿನ ಕಲ್ಲಗುಡ್ಡೆಯಲ್ಲಿ ನಿರ್ಮಾಣ
ಗೊಂಡಿರುವ ಟ್ರೀ ಪಾರ್ಕ್ ಉದ್ಘಾಟನೆಗೆ ಸಿದ್ಧಗೊಂಡಿದೆ. ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಮೇಲಂತಬೆಟ್ಟು ಹಾಗೂ ಲಾೖಲ ಗ್ರಾಮದ ಗಡಿಯಲ್ಲಿರುವ ಕಲ್ಲಗುಡ್ಡೆ ಪ್ರದೇಶದಲ್ಲಿ ಸುಮಾರು 25 ಎಕ್ರೆ ಸ್ಥಳಾವಕಾಶದಲ್ಲಿ ಉದ್ಯಾನ ಸಿದ್ಧವಾಗಿದೆ.
ರಮಾನಾಥ ರೈ ಅರಣ್ಯ ಸಚಿವರಾಗಿದ್ದ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿದ್ದ ಈ ಯೋಜನೆಗೆ 2018ರಿಂದ ಕಾಮಗಾರಿ ಆರಂಭಗೊಂಡಿತ್ತು. ಟ್ರೀ ಪಾರ್ಕ್ ಎಂದರೆ ಕೇವಲ ವೃಕ್ಷ ರಾಶಿ ಮಾತ್ರವಿರದೆ ಅದು ಮಕ್ಕಳು, ಹಿರಿಯರು ಸಹಿತ ಪ್ರತಿಯೊಬ್ಬರಿಗೂ ಅನುಕೂಲವಾಗಬೇಕೆಂಬ ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ಅವರು ಆಕರ್ಷಕ ಕೇಂದ್ರವಾಗಿ ವಿನ್ಯಾಸ ಗೊಳಿಸಲು ಮುಂದಾಗಿ ಯೋಜನೆ ಸಿದ್ಧವಾಗಿದೆ. 2.65 ಕೋ. ರೂ. ಅನುದಾನ ಅರಣ್ಯ ಇಲಾಖೆಯಿಂದ ಈ ವರೆಗೆ ಸುಮಾರು 1.3 ಕೋ.ರೂ. ಸಹಿತ ಇತರ ಅನುದಾನ ಸೇರಿ 2.65 ಕೋ. ರೂ. ವೆಚ್ಚದಲ್ಲಿ ಮುಖ್ಯ ದ್ವಾರ, ವಾಕಿಂಗ್ ಟ್ರಾಕ್, ಮಕ್ಕಳ ಆಟದ ಸ್ಥಳ, ಶೌಚಾಲಯ, ಕುಡಿಯುವ ನೀರು, ಆಟದ ಮೈದಾನ, ಬಯಲು ವನರಂಗ ಸಹಿತ 10 ಹೆಕ್ಟೇರ್ ಪ್ರದೇಶದಲ್ಲಿ 2,000 ಹಣ್ಣಿನ ಮತ್ತು ಇತರ ಗಿಡಗಳು, ಅರಣ್ಯ ರಕ್ಷಕ ಉಳಿದುಕೊಳ್ಳುವ ಕೊಠಡಿ ಸೇರಿದಂತೆ ಅವಶ್ಯಕತೆಗಳನ್ನು ಪೂರೈಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಸಿಸಿ ಟಿವಿ ಅಳವಡಿಸಲಾಗಿದೆ.
ಇಂದು ಲೋಕಾರ್ಪಣೆ
ಉದ್ಯಾನವನ್ನು ಮಾ. 25ರಂದು ಸಂಜೆ 5 ಕ್ಕೆ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿರುವರು. ವಿ.ಪ. ಸದಸ್ಯರಾದ ಕೆ.ಪ್ರತಾಪಸಿಂಹ ನಾಯಕ್, ಕೆ.ಹರೀಶ್ ಕುಮಾರ್, ಪ.ಪಂ. ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ, ದ.ಕ. ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್., ಜಿ.ಪಂ. ಸಿಇಒ ಡಾ| ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ವಿಕ್ರಂ ಅಮಟೆ, ಮಂಗಳೂರು ಅರಣ್ಯ ಸಂರಕ್ಷಣಾಧಿಕಾರಿ ಡಾ| ವಿ.ಕರಿಕಾಳನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ.ಕೆ. ದಿನೇಶ್ ಕುಮಾರ್, ಸಹಾಯಕ ಅ.ಸಂ.ಪಿ.ಶ್ರೀಧರ್, ಬೆಳ್ತಂಗಡಿ ವ.ಅ. ತ್ಯಾಗರಾಜ್ ಎಚ್.ಎಸ್. ಸಹಿತ ಪ್ರಮುಖರು ಭಾಗವಹಿಸುವರು.