Advertisement

Farmer Devaraya: ಬರಿಗಾಲ ಸಂತನಿಗೆ ರಾಷ್ಟ್ರ ಪ್ರಶಸ್ತಿಯ ಗರಿ

12:38 PM Sep 17, 2023 | Team Udayavani |

“ಬರಿಗಾಲ ಸಂತ ‘ಎಂದು ಹೆಸರಾದವರು ಬೆಳ್ತಂಗಡಿಯ ಮಿತ್ತಬಾಗಿಲು ದೇವರಾಯ. 300ಕ್ಕೂ ಹೆಚ್ಚು ಅಪರೂಪದ ತಳಿಗಳನ್ನು ಸಂರಕ್ಷಿಸಿದ ಹೆಗ್ಗಳಿಕೆ ಅವರದ್ದು. ಮೊನ್ನೆಯಷ್ಟೇ ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ ಪಡೆದ ಅವರ ಕೃಷಿ ಸಾಧನೆಯ ಚಿತ್ರಣ ಇಲ್ಲಿದೆ…

Advertisement

ಕೃಷಿ ಒಂದು ಆಧ್ಯಾತ್ಮ – ಆದರ್ಶ ಅಂತ ಅನಿಸುವುದು ಈ ಮನುಷ್ಯನನ್ನು ನೋಡಿ. ಈ ಹಿಂದೆ ಚೇರ್ಕಾಡಿ ರಾಮಚಂದ್ರ ರಾಯರು; ಅದಕ್ಕಿಂದ ಹಿಂದೆ “ಒಂದು ಹುಲ್ಲಿನ ಕ್ರಾಂತಿ’ ಮಾಡಿದ ಜಪಾನಿನ ಫ‌ುಕೂವೋಕಾರನ್ನು ನೋಡಿ ಹೀಗೆಯೇ ಅನಿಸಿತ್ತು. ಕಾರಣ, ಇವರೆಲ್ಲ ಭೂಮಿಯ ಪಾಲಿಗೆ ಎಂದಿಗೂ ಎಂದೆಂದಿಗೂ ಬಕಾಸುರರಾದವರಲ್ಲ. ದುಡ್ಡಿನ ದಾರಿಯಲ್ಲಿ ಅಗೆದು ಬಗೆದು ನುಂಗಿದದರಲ್ಲ. ಭೂಮಿ ಉಳಿದಾಗ ಮಾತ್ರ ತಾನು ಉಳಿಯುತ್ತೇವೆ ಎಂಬ ಒಡಂಬಡಿಕೆಗೆ ಬದ್ಧರಾದವರು.

ಹುಡುಕಿಕೊಂಡು ಬಂತು ಪ್ರಶಸ್ತಿ:

ನಾನು ಹೇಳುತ್ತಿರುವುದು ಮಿತ್ತಬಾಗಿಲು ದೇವರಾಯರ ಬಗ್ಗೆ. ಚಪ್ಪಲಿ ಇಲ್ಲದೆ ಭೂಮಿ ಮೆಟ್ಟುವ ಬರಿಗಾಲ ಸಂತ ಇವರು. ಮುಖದ ತುಂಬಾ ಇಳಿಬಿಟ್ಟ ಕುರುಚಲು ಗಡ್ಡ. ಮೈ-ತಲೆಗೆ ಸಾದಾಸೀದ ಬಟ್ಟೆ, ಹೆಗಲಲ್ಲೊಂದು ಸರಳ ಜೋಳಿಗೆ. ಇದನ್ನು ಆಧ್ಯಾತ್ಮ ಎನ್ನದೆ ಇನ್ನೇನು ಹೇಳಲಿ? ಭೌತಿಕ ಮತ್ತು ಬೌದ್ಧಿಕವಾಗಿ ಒಂದೇ ರೀತಿ ಕಾಣಿಸುವ ದೇವರಾಯರಿಗೆ ಈಗ ರಾಷ್ಟ್ರೀಯ  “ಸಸ್ಯ ತಳಿ ಸಂರಕ್ಷಕ ರೈತ ಪ್ರಶಸ್ತಿ’ ಲಭಿಸಿದೆ. ಒಂದೂವರೆ ಲಕ್ಷ ರೂಪಾಯಿ ಮೊತ್ತದ ಆ ಪ್ರಶಸ್ತಿಯನ್ನು ಅವರು ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪಡೆದಿದ್ದಾರೆ.

ಇದು ರಾಷ್ಟ್ರೀಯ- ಅಂತಾರಾಷ್ಟ್ರೀಯ ಸುದ್ದಿಯಾಗಲಿಲ್ಲ. ಅವರಿಗೇ ಪ್ರಶಸ್ತಿ ಕೊಡಬಹುದು ಎಂದು ದೆಹಲಿಗೆ ಸುದ್ದಿ ಮುಟ್ಟಿಸಿದ ಪುಣ್ಯಾತ್ಮರಿಗೆ ನೂರು ನಮ­ಸ್ಕಾರಗಳು. ಪ್ರಭಾವ, ವಶೀಲಿ, ಒತ್ತಡಗಳ ಬಳಿಗೆ ಪ್ರಶಸ್ತಿಗಳು ಸಾಗುವ ಈ ಹೊತ್ತಿನಲ್ಲಿ ನಿಜವಾದ ಸಾಧಕನಿಗೆ, ನೆಲದ ದನಿ ಆಲಿಸುವವನಿಗೆ ಪ್ರಶಸ್ತಿ ಸಿಕ್ಕಿದ್ದು ಅಭಿಮಾನದ ಸಂಗತಿ.

Advertisement

ಕೊರತೆಗಳ ಮಧ್ಯೆ ಮಹತ್ಸಾಧನೆ:

ದೇವರಾಯರಿಗೆ ಈಗ 78 ವರ್ಷ. ಅವರು ಬದುಕುತ್ತಿರುವ ಮಿತ್ತ ಬಾಗಿಲಿನ ಅಂಗಳವೋ, ಗದ್ದೆಯ ಬದುವೋ, ತೆಂಗಿನ ಬುಡವೊ, ಎಲ್ಲೆಂದರಲ್ಲಿ ಒಮ್ಮೆ ನಿಂತು ಸುತ್ತಲೂ ಕಣ್ಣು ಹಾಯಿಸಬೇಕು. ಪಶ್ಚಿಮ ಘಟ್ಟದ ದುರ್ಗಮ ಕಾಡು ಕತ್ತಲೆ ಕಣ್ಣಿಗೆ ಕುಕ್ಕುತ್ತದೆ. ನವನಾಗರಿಕ ಮನುಷ್ಯ ಬದುಕಲು ಭಯಪಡುವ, ಮೂರು ವರ್ಷಗಳ ಹಿಂದೆ ಹಠಾತ್‌ ಗುಡ್ಡ ಜರಿತದ ಇಕ್ಕಟ್ಟಿನ ಆಯಪಾಯದಲ್ಲಿ ಅವರು ಭತ್ತದ ಕೃಷಿ ಮಾಡುತ್ತಿದ್ದಾರೆ.

ಸುಮಾರು 200 -300 ಅಪ­ರೂಪದ ತಳಿಗಳನ್ನು ಉಳಿಸಿದ ಕೀರ್ತಿ ಅವರದು. ಹಾಗಂತ ಒಂದೊಂದೇ ತಳಿಯನ್ನು ಕೊಟ್ಟೆಯಲ್ಲಿಟ್ಟು ಬೆಳೆಸುವುದಲ್ಲ. ಗದ್ದೆಗಳನ್ನೇ ತುಂಡು ತುಂಡಾಗಿಸಿ ಉಳುಮೆ ಮಾಡಿ, ಬೀಜ ಹರ ಹಾಕಿ, ನೇಜಿನೆಟ್ಟು ಉಳಿಸುವ ಸಾಂಪ್ರದಾಯಿಕ ಕ್ರಮವದು. ಕೂಲಿ ಕಾರ್ಮಿಕರ ಕೊರತೆ, ಬೀಸುಮಳೆ, ಗುಡ್ಡ ಕುಸಿತ, ಕಾಡುಪ್ರಾಣಿಗಳ ಹಾವಳಿ, ಇಳಿವಯಸ್ಸು- ಎಲ್ಲಾ ಕಾರಣಗಳಿಗೆ ಸವಾಲಾಗಬಲ್ಲ ಪರಿಸರ ಮತ್ತು ಸಂದರ್ಭದಲ್ಲಿ ದೇವರಾಯರು ಈ ಸಾಧನೆ ಮಾಡಿದ್ದಾರೆ.

ಕೃಷಿ ಕುರಿತೇ ಧ್ಯಾನ, ಚಿಂತೆ:

ಬೆಳಗ್ಗೆ ಐದೂವರೆಗೆ ಎದ್ದು ತಡರಾತ್ರಿಯವರೆಗೆ ಕೃಷಿಯನ್ನು ತಪಸ್ಸು ಎಂದು ಅನುಭವಿಸುವ, ದುಡಿಯುವ ರಾಯರಿಗೆ ಈಗ ವಯಸ್ಸಿಗಿಂತಲೂ ತನ್ನ ಭೂಮಿಯಲ್ಲಿ ಕಾಣೆಯಾದ ನೀರಿನದೇ ಚಿಂತೆ. ಭೂಮಿ ಬಿರಿದು ಗುಡ್ಡ ಕುಸಿದು ಪ್ರಳಯ ಸೃಷ್ಟಿಯಾದ ಮೇಲೆ, ಬೇಸಿಗೆಯ ಸಹಜ ಹರಿನೀರು ಎಲ್ಲಿಗೆ ಹೋಯಿತು, ಏನಾಯಿತು? ಎಲ್ಲಿ ಇಂಗಿತು ಎಂಬುದೇ ಅವರ ಚಿಂತೆ. ರಾಯರೀಗ ಅನ್ನದ ಧ್ಯಾನದಲ್ಲಿ ಅಡಿಕೆ ಕೃಷಿಯ ಕಡೆಗೆ ಕನಿಷ್ಠ ಗಮನ ಕೊಟ್ಟಿದ್ದಾರೆ. ಆರೇಳು ವರ್ಷಗಳ ಹಿಂದೆ ನಾಲ್ಕೈದು ಖಂಡಿ ಅಡಿಕೆ ಆಗುತ್ತಿತ್ತು. ಈಗ ಅದು ಬರೀ 400 ಕೆಜಿಗೆ ಇಳಿದಿದೆ. ಕೊಯ್ಲು ಮಾಡೋದಿಲ್ಲ. ಬರಿ ಮಂಗಗಳೇ ಇಳಿಸಿ ಕೊಡುತ್ತವೆ. ಅಷ್ಟರಮಟ್ಟಿಗೆ ನನ್ನ ವಾಣಿಜ್ಯ ಕೃಷಿ ಮಿತಗೊಂಡಿದೆ. ತೆಂಗಿನ ಕುಬೆ ನೋಡಿ. ಕಾಯಿಗಳೇ ಇಲ್ಲ. ಮಂಗಗಳ ಪಾಲು. ನವಿಲು, ಕಾಡುಹಂದಿ, ಕಾಡುಕೋಣ ಹೀಗೆ ನನ್ನ ಕೃಷಿಯಲ್ಲಿ ಪಾಲು ಪಡೆಯುವ ಕಾಡು ಪ್ರಾಣಿಗಳಿಂದ ನಾನಿನ್ನೂ ಇಲ್ಲಿ ಅಸ್ತಿತ್ವ ಉಳಿಸಿಕೊಂಡಿರುವುದು ದೊಡ್ಡ ಸಾಹಸ ಎನ್ನುವ, ಈ ದೇಶದ ಸಮಸ್ತ ಅನ್ನದಾತರ ಪ್ರತಿನಿಧಿಯಾಗಿರುವ ಅವರು, ವ್ಯವಸ್ಥೆಯ ನಡುವೆ ಏಕಾಂಗಿಯಾಗಿ ಬದುಕುತ್ತಿದ್ದಾರೋ ಅನಿಸುತ್ತದೆ.

ಮುಂದಿನ ತಲೆಮಾರಿಗೆ ಅನ್ನದ ಭಾಷೆಯನ್ನು ವಿವರಿಸುವ ಈ ಅಜ್ಜನ ಕಥನಕ್ಕೆ ನಮ್ಮ ಎಳೆಯ ಮನಸುಗಳು ಕಿವಿಯಾಗಬೇಕು. ನಗರದ್ದು ಒಂದು ಬದುಕಾ? ಅದೊಂದು ಅಸ್ತಿತ್ವವಾ? ಅದೊಂದು ಜೀವನವಾ? ಎಂದು ಕಳೆದ ಏಳು ದಶಕಗಳಿಂದ ಕಾಡಿನ ಅಂಚಿನಲ್ಲಿ ಊರು ಕಟ್ಟಿಕೊಂಡು ಬದುಕುವ ಈ ಅಜ್ಜನ ಜೀವನ ವೃತ್ತಾಂತ ಹೊಸ ತಲೆಮಾರಿಗೆ ಪಾಠವಾಗಬೇಕು.

ಸಂತಸ ಅರಳುವ ಸಮಯ:

ದೇವರಾಯರ ಮನೆಯ ಗೋಡೆಯಲ್ಲಿ ಪ್ರಶಸ್ತಿಗಳದ್ದೇ ಪೊರೆ -ಹೊರೆ. ಇದೊಂದು ಅಧ್ವಾನ ನೋಡಿ, ಪ್ರಶಸ್ತಿಗೆ ಎಂದು ಕರೆಯುತ್ತಾರೆ. ಒಂದು ತಗಡು ಕೊಟ್ಟು ಕಳಿಸುತ್ತಾರೆ. ಇಡೀ ದಿನವೂ ವೇಸ್ಟು. ಗಾಡಿಯೋ ಬಸೊÕà, ಅದರ ಖರ್ಚು ಬೇರೆ. ನಮ್ಮಂತಹ ಕೃಷಿಕರಿಗೆ ಅಷ್ಟೊಂದು ಸಮಯ ಎಲ್ಲಿದೆ ಹೇಳಿ? ಈ ಪ್ರಶಸ್ತಿಗಳ ಸಹವಾಸವೇ ಬೇಡ- ಎಂಬುದು ಅವರ ಅನುಭವದ ಮಾತು. ಆದರೆ ಇದೀಗ ದೆಹಲಿಯಲ್ಲಿ ಫ‌ಲಕ – ಪ್ರಶಸ್ತಿಯೊಂದಿಗೆ ಅವರಿಗೆ ಸಿಕ್ಕಿರುವ ನಗದು, ಅವರ ಭವಿಷ್ಯದ ಬದುಕಿಗೆ ಪಾಯವಾಗುವುದರಲ್ಲಿ ಅನುಮಾನವೇ ಇಲ್ಲ.

ಬೀಜ ಸಂರಕ್ಷಣೆ ಸವಾಲಿನ ಕೆಲಸ:

ಕೃಷಿಯಲ್ಲಿ ತಳಿ ಸಂರಕ್ಷಣೆ ಒಂದು ಹುಚ್ಚು. ಅದರಲ್ಲೂ ಅಲ್ಪಾವಧಿ ಬೆಳೆಯಾದ ಭತ್ತದ ಬೀಜ ಬಿತ್ತಿ, ಪೋಷಿಸಿ, ಕೊಯ್ದು ಪುನಃ ಆ ಬೀಜಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹೆಸರು ಕೊಟ್ಟು ಜತನದಿಂದ ಕಾಯ್ದಿರಿಸುವುದೆಂದರೆ ಅತ್ಯಂತ ಸೂಕ್ಷ್ಮ ಮತ್ತು ಸಮಯ ಬೇಡುವ ಸವಾಲಿನ ಕೆಲಸ. ವರ್ಷದ ಆಚೆಗಿನ ಬೀಜಗಳನ್ನು ಇಟ್ಟುಕೊಂಡು ಬಿತ್ತಿದರೆ ಅದು ಗರಿಷ್ಠ ಪ್ರಮಾಣದಲ್ಲಿ ಮೊಳೆಯಲಾರವು. ಬಂಗಾರ ಬೆಲೆಯ ಅಡಿಕೆಯನ್ನು ಗದ್ದೆಗೆ ನೆಡುವ, ತೋಟದ ಕೃಷಿ ರಭಸವಾಗಿ ಹುಬ್ಬುವ ಕಾಲದಲ್ಲಿ ಕಾಡಿನ ಅಂಚಿನಲ್ಲಿರುವ ಗದ್ದೆ – ಬೆಳೆಗಳನ್ನು ಪ್ರಾಣಿಗಳಿಂದ ಮತ್ತು, ಕೀಟಗಳಿಂದ ಉಳಿಸಿಕೊಳ್ಳುವುದು ಕಷ್ಟದ ಕೆಲಸ. ಅದರಲ್ಲೂ ದೇವರಾಯರ ಕೃಷಿ ಹಿಡುವಳಿ ಇರುವುದು ಕರಾವಳಿಯ ಮಟ್ಟಸ ಕದನ ರೇಖೆಯಿಂದ ಬಹಳ ದೂರದ ಪಶ್ಚಿಮ ಘಟ್ಟದ ಅಂಚಿನಲ್ಲಿ. ಬಹುಶ: ಅವರ ತೋಟ, ಹೊಲಗದ್ದೆ, ಮನೆಯ ಆಚೆ ಇನ್ನೊಂದು ಮನೆ ಇಲ್ಲ. ಕೃಷಿ ಭೂಮಿ ಇಲ್ಲ. ಓಡಾಡುವ ರಸ್ತೆ ಇಲ್ಲ. ಇಂಥದ್ರಲ್ಲಿ ನಂಬಿದ ಕೃಷಿಯನ್ನು ತಪಸ್ಸಿನಂತೆ ಮಾಡುತ್ತಿರುವ ರಾಯರ ಕಾರ್ಯ ಅಭಿನಂದನೀಯ.

-ನರೇಂದ್ರ ರೈ ದೇರ್ಲ

Advertisement

Udayavani is now on Telegram. Click here to join our channel and stay updated with the latest news.

Next