ಬೆಳ್ತಂಗಡಿ : ತಾಲೂಕಿನ ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಅಡಿಕೆ ತೋಟದಲ್ಲಿ ಕೂಲಿ ಕಾರ್ಮಿಕನೋರ್ವನನ್ನು ಕೊಲೆ ಮಾಡಿದ ಘಟನೆ ಡಿ. 18 ರಂದು ನಡೆದಿದೆ.
ಸ್ಥಳೀಯರಾದ ಶ್ರೀಧರ (30) ಮೃತಪಟ್ಟ ಕಾರ್ಮಿಕ. ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ. ಕೆ. ಆನಂದ ಗೌಡ, ಮಹೇಶ್ ಪೂಜಾರಿ ಆರೋ ಪಿ ಗ ಳೆಂದು ಗುರುತಿಸಲಾಗಿದೆ.
ಶಿಬಾಜೆ ಗ್ರಾಮದ ಗುತ್ತುಮನೆ ಎ.ಸಿ. ಕುರಿಯನ್ ಎಂಬವರ ಮಾಲಕತ್ವದ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಶ್ರೀಧರ ಅವರಿಗೆ ಡಿ. 17ರಂದು ಆರೋಪಿತರಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ.ಕೆ.ಆನಂದ ಗೌಡ ಹಾಗೂ ಮಹೇಶ್ ಎಂಬವರು ಸೇರಿ ಹೊಡೆದಿದ್ದಾರೆ. ಶ್ರೀಧರ್ ಅವರ ಬೊಬ್ಬೆ ಕೇಳಿ ಸ್ಥಳಕ್ಕೆ ತೋಟದ ಮೇಲ್ವಿಚಾರಕರಾದ ಹರೀಶ್ ಮುಗೈರ ಬಂದಾಗ ಓಡಿಹೋಗಿದ್ದಾರೆ.
ಆ ಬಳಿಕ ಶ್ರೀಧರನನ್ನು ಉಪಚರಿಸಿ ತೋಟದ ಮನೆಗೆ ಕರೆದುಕೊಂಡು ಬಂದು ವಿಶ್ರಾಂತಿ ಮಾಡುವಂತೆ ತಿಳಿಸಿದ್ದರು. ಡಿ. 18ರಂದು ಶ್ರೀಧರನನ್ನು ಕರೆದು ಹುಡುಕಾಡಿದಾಗ ಕೊಠಡಿಯಿಂದ ಸ್ವಲ್ಪ ದೂರದಲ್ಲಿ ಅನುಮಾನಾಸ್ಪದವಾಗಿ ಬಿದ್ದುಕೊಂಡಿರುವುದು ಕಂಡುಬಂದಿದೆ.
ಮಾಲಕರು ಬಂದು ಪರಿಶೀಲಿಸಿದಾಗ ತೋಟಕ್ಕೆ ಅಳವಡಿಸಿದ ತಂತಿ ಬೇಲಿಯನ್ನು ಕತ್ತರಿಸಿ ಆರೋಪಿಗಳು ಶ್ರೀಧರ್ ಅವರನ್ನು ಕೊಲೆ ಮಾಡಿ ತೋಟದ ಮಧ್ಯೆ ಹಾಕಿ ಹೋಗಿರುವುದಲ್ಲದೇ ಶ್ರೀಧರನ ಬಳಿಯಿದ್ದ 9500 ರೂ.ಗಳನ್ನು ದೋಚಿರುವುದಾಗಿ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.