Advertisement

ಬೆಳ್ತಂಗಡಿ: 6 ಗ್ರಾ.ಪಂ.ಗಳಲ್ಲಿ ಪಿಡಿಒಗಳೇ ಇಲ್ಲ

10:56 PM Jan 20, 2020 | mahesh |

ಬೆಳ್ತಂಗಡಿ: ಗ್ರಾ.ಪಂ.ಗಳಲ್ಲಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳು ಭರ್ತಿಯಾಗದೆ ಖಾಲಿಯಾಗಿರುವ ಪರಿಣಾಮ ಸರಕಾರದ ಯೋಜನೆಗಳು ಗ್ರಾಮೀಣ ಭಾಗಕ್ಕೆ ಸಮರ್ಪಕ ವಾಗಿ ತಲುಪುವಲ್ಲಿ ಬಹುತೇಕ ವಿಳಂಬವಾಗುತ್ತಿವೆ. ಇದರ ಜತೆಗೆ ಪ್ರಭಾರಿ ನೆಲೆಯಲ್ಲಿರುವ ಪಿಡಿಒಗಳು ಒತ್ತಡದ ನಡುವೆ ಕೆಲಸ ಮಾಡುತ್ತಿದ್ದು, ಅವಧಿಯೊಳಗೆ ಸೇವಾಕಾರ್ಯ ಲಭ್ಯವಾಗದೆ ಗ್ರಾಮೀಣ ಭಾಗದ ಜನರು ಗ್ರಾ.ಪಂ.ಗೆ ಅಲೆದಾಡುವಂತಾಗಿದೆ.

Advertisement

ಗ್ರಾ.ಪಂ.ಗಳ ಅಭಿವೃದ್ಧಿ ನೆಲೆಯಲ್ಲಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆ ಬಹು ಮುಖ್ಯ ಪಾತ್ರ ವಹಿಸಿದ್ದು, ಬೆಳ್ತಂಗಡಿ ತಾಲೂಕಿನ 48 ಗ್ರಾ.ಪಂ.ಗಳ ಪೈಕಿ 42 ಕಡೆಗಳಲ್ಲಷ್ಟೇ ಖಾಯಂ ಪಿಡಿಒಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ 6 ಗ್ರಾ.ಪಂ.ಗಳಿಗೆ ಪ್ರಭಾರ ನೆಲೆಯಲ್ಲಿ ಸಮೀಪದ ಗ್ರಾ.ಪಂ.ಗಳ ಪಿಡಿಒಗಳನ್ನು ನೇಮಿಸಲಾಗಿದೆ.

ಇತ್ತ ಆರೋಗ್ಯ ಸಮಸ್ಯೆಯಾದಲ್ಲಿ, ಸಭೆಗಳಿಗೆ ಹಾಜರಾಗಬೇಕಿದ್ದಾಗ ಅಥವಾ ಸರಕಾರಿ ರಜೆ ಬಂದಾಗ ವಾರದಲ್ಲಿ ಮೂರು ದಿನ ಪಿಡಿಒಗಳು ಲಭ್ಯವಾಗುವುದು ಕಷ್ಟ. ಪ್ರಭಾರ ಪಿಡಿಒಗಳಿಗೆ ತಮ್ಮ ಖಾಯಂ ಪಂಚಾಯತ್‌ ಕೆಲಸವೇ ಬೆಟ್ಟದಷ್ಟಿರುತ್ತದೆ. ಬೆಳ್ತಂಗಡಿ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಗಳು ವಿಸ್ತಾರವಾಗಿರುವುದರಿಂದ ಸರಕಾರದ ಉದ್ಯೋಗ ಖಾತರಿ, ಹಣಕಾಸು ಯೋಜನೆ ಅನುಷ್ಠಾನ ಸಹಿತ ಇತರ ಅಭಿವೃದ್ಧಿ ಕೆಲಸಗಳಲ್ಲಿ ಪಾಲ್ಗೊಳ್ಳುವಿಕೆಗೆ ಅಡ್ಡಿಯಾಗಿರುವುದರಿಂದ ಸರಕಾರ ತುರ್ತು ಕ್ರಮಕ್ಕೆ ಮುಂದಾಗಬೇಕಿದೆ.

48 ಮಂದಿ ನಿಯೋಜನೆ
ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಒಟ್ಟು 48 ಗ್ರಾ.ಪಂ.ಗಳ ಪೈಕಿ 42 ಅಭಿವೃದ್ಧಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವುಗಳಲ್ಲಿ ಅರಸಿನಮಕ್ಕಿ, ಮಚ್ಚಿನ, ಬಂದಾರು, ಮಿತ್ತಬಾಗಿಲು, ಉಜಿರೆ ಹಾಗೂ ಲಾೖಲ – ಈ 6 ಗ್ರಾ.ಪಂ.ಗಳಲ್ಲಿ ಪಿಡಿಒ ಪ್ರಭಾರ ಹುದ್ದೆಯಲ್ಲಿ ನಿಯೋಜಿಸಲಾಗಿದೆ.

12 ಗ್ರಾ.ಪಂ. ಕಾಯದರ್ಶಿಗಳು
ಗ್ರಾ.ಪಂ.ಗಳ ಜನಸಂಖ್ಯೆ ಹಾಗೂ ವಿಸ್ತೀರ್ಣದ ಆಧಾರದಲ್ಲಿ ಗ್ರೇಡ್‌ 1, ಗ್ರೇಡ್‌ 2 ಗ್ರಾ.ಪಂ.ಗಳೆಂದು ಗುರುತಿಸಲಾಗಿದೆ. ಈ ಪೈಕಿ ಗ್ರೇಡ್‌ 1 ಗ್ರಾ.ಪಂ.ಗಳಲ್ಲಿ ಪಿಡಿಒಗಳ ಜತೆ ಕಾರ್ಯದರ್ಶಿಗಳು ಕರ್ತವ್ಯ ನಿರ್ವಹಿಸಬಹುದಾಗಿದ್ದು, ಆದರೆ ಪ್ರಸಕ್ತ ಬೆಳ್ತಂಗಡಿಯಲ್ಲಿ 9 ಗ್ರೇಡ್‌-1 ಆಗಿದ್ದು, 39 ಗ್ರೇಡ್‌-2ಗೆ ಸೇರಿವೆ. ಗ್ರೇಡ್‌-1ರಲ್ಲಿ 8 ಕಾರ್ಯದರ್ಶಿಗಳಿದ್ದು, 1 ಹುದ್ದೆ ಖಾಲಿ ಇದೆ. ಗ್ರೇಡ್‌-2ರಲ್ಲಿ 28 ಕಾರ್ಯದರ್ಶಿಗಳಿದ್ದು 11 ಹುದ್ದೆಗಳು ಖಾಲಿ ಇವೆ. ಈ ನಡುವೆ 7 ಮಂದಿ ಗ್ರಾ.ಪಂ. ದ್ವಿ.ದ. ಲೆಕ್ಕ ಸಹಾಯಕರ ಕೊರತೆ ಇದೆ. ಒಟ್ಟಾರೆಯಾಗಿ ತಾ.ಪಂ., ಗ್ರಾ.ಪಂ. ಸೇರಿ ಒಟ್ಟು 43 ಹುದ್ದೆಗಳು ಖಾಲಿ ಬಿದ್ದಿವೆ.

Advertisement

ತಾ.ಪಂ. ಕಚೇರಿ: 18 ಹುದ್ದೆ ಖಾಲಿ
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೊರತೆ ನಡುವೆಯೇ ತಾ.ಪಂ. ಕಚೇರಿಯೊಂದರಲ್ಲೆ 18 ಹುದ್ದೆಗಳು ಖಾಲಿ ಇವೆ. ವಿಸ್ತರಣಾಧಿಕಾರಿ 1, ಸಹಾಯಕ ಅಭಿಯಂತರರು – 1, ಸಹಾಯಕ ನಿರ್ದೇಶಕರು – 1, ಪಿಎ – 1, ಪ್ರಧಾನ ಸಹಾಯಕರು -2, ಶೀಘ್ರ ಲಿಪಿಗಾರರು – 1, ದ್ವಿ. ದರ್ಜೆ ಸಹಾಯಕರು 3, ಬೆರಳಚ್ಚುಗಾರರು – 2, ವಾಹನ ಚಾಲಕರು – 2, ಗ್ರೂಪ್‌ ಡಿ 4 ಖಾಯಂ ಹುದ್ದೆಗಳು ಖಾಲಿ ಇದ್ದು, ಕೆಲವಷ್ಟು ಹುದ್ದೆಗಳು ಪ್ರಭಾರಿಯಾಗಿ ನಿಯೋಜಿಸಲಾಗಿದೆ.

ನೇಮಕಾತಿ ಆದರೆ ಅನುಕೂಲ
ಬೆಳ್ತಂಗಡಿ ಗ್ರಾ.ಪಂ.ಗಳಲ್ಲಿ 42 ಮಂದಿ ಪಿಡಿಒಗಳು ಕಾರ್ಯ ನಿರ್ವಹಿಸುತ್ತಿದ್ದು ಉಳಿದ 6 ಗ್ರಾ.ಪಂ.ಗಳಿಗೆ ಪ್ರಭಾರ ಪಿಡಿಒಗಳು ಕರ್ತರ್ವನಿರ್ವಹಿಸುತ್ತಿದ್ದಾರೆ. ಸರಕಾರ ಹೊಸ ನೇಮಕಾತಿ ಮಾಡಿದಲ್ಲಿ ಅಭಿವೃದ್ಧಿಗೆ ವೇಗ ಸಿಗಲಿದೆ.
 - ಕೆ.ಇ.ಜಯರಾಂ, ತಾ.ಪಂ. ಇಒ

 ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next