ಚಾರ್ಮಾಡಿಯ ಔಟಾಜೆ ನಿವಾಸಿ ಶಕುಂತಳಾ ವಿವರಿಸಲು ಆರಂಭಿಸಿದರು.
ಪ್ರತಿವರ್ಷವೂ ನಮ್ಮ ಕೆಳಗಿನ ತೋಟದ ಭಾಗಕ್ಕೆ ನೆರೆ ನೀರು ಬಂದು ಹೋಗುತ್ತದೆ. ಸ್ವಲ್ಪ ಹೊತ್ತು ಇರುತ್ತದೆ, ಮತ್ತೆ ಇಳಿಯುತ್ತದೆ. ಅದನ್ನು ಗಂಭೀರವಾಗಿ ಪರಿಗಣಿಸಿದ್ದಿಲ್ಲ. ಆದರೆ ಆ. 9ರ ಕಥೆ ಬೇರೆಯೇ ಇತ್ತು. ಅಂದು ಬೆಳಗ್ಗೆ ನಾನು ವರಲಕ್ಷ್ಮೀ ಪೂಜೆಗೆ ಹೋಗಲು ಸಿದ್ಧಳಾಗುತ್ತಿದ್ದೆ. ನನ್ನ ಗಂಡ ನೆರೆ ನೀರು ಏರುತ್ತಿದೆ ಎಂದು ಕೂಗಿಕೊಂಡು ಅಂಗಳದಲ್ಲಿದ್ದ ಬೈಕನ್ನು ಕಂಬಕ್ಕೆ ಕಟ್ಟಲು ಹೋದರು.
Advertisement
ಅವರು ಬೈಕ್ ಕಟ್ಟಿ ಬರುವಷ್ಟರ ಹೊತ್ತಿಗೆ ಪ್ರವಾಹದ ನೀರು ಏಕಾಏಕಿ ಏರಿತ್ತು. ಬೊಬ್ಬೆ ಹೊಡೆಯುತ್ತಾ ಓಡುವವರೇ ಎಲ್ಲರೂ. ನನಗೆ ಅನ್ನದಾತ ದನಕರುಗಳ ನೆನಪಾಯಿತು. ಅವುಗಳ ಹಗ್ಗ ಬಿಚ್ಚಿಬಿಟ್ಟೆ. ಅಷ್ಟರಲ್ಲಿ ನೀರು ಆವರಿಸಿತ್ತು. ಮನೆಯ ಒಂದೇ ಒಂದು ಸಾಮಾನನ್ನೂ ಉಳಿಸಲು ಆಗಲಿಲ್ಲ. ನಾವು ಓಡಿ ಪ್ರಾಣ ಉಳಿಸಿಕೊಂಡೆವು. ಎಷ್ಟೋ ಹೊತ್ತಿನ ಬಳಿಕ ನಾವು ಹಗ್ಗ ಬಿಚ್ಚಿಬಿಟ್ಟ ದನಕರುಗಳನ್ನು ಹತ್ತಿರದ ಯುವಕರು ರಕ್ಷಿಸಿ ತಂದರು. ನೀರು ಇಳಿದ ಬಳಿಕ ನೋಡಿದರೆ ನಮ್ಮದೊಂದು ಆಸ್ತಿ, ಮನೆ ಅಲ್ಲಿತ್ತು ಅನ್ನುವುದರ ಕುರುಹು ಕೂಡ ಇಲ್ಲದ ಹಾಗೆ ಎಲ್ಲವೂ ಕಣ್ಮರೆಯಾಗಿದ್ದವು…
ಆ. 9ರಂದು ನಾಡಿಗೆ ವರಮಹಾಲಕ್ಷ್ಮೀ ವ್ರತದ ಸಂಭ್ರಮ ವಾದರೆ ಬೆಳ್ತಂಗಡಿ ತಾಲೂಕಿನ ಪರ್ಲಾಣಿ, ಔಟಾಜೆ, ಅಂತರ ಭಾಗದ ಹತ್ತಾರು ಮನೆಗಳ ಪಾಲಿಗೆ ವರ್ಷಾನುಗಟ್ಟಲೆ ಕರಾಳ ನೆನಪಾಗಿ ಉಳಿಯುವಂಥದ್ದು. ಕೃಷಿ ಮತ್ತು ಹೈನುಗಾರಿಕೆಯನ್ನು ನೆಚ್ಚಿದ್ದ ಈ ಭಾಗದ ಮಂದಿ ಪ್ರಸ್ತುತ ಸರ್ವಸ್ವವನ್ನೂ ಕಳೆದುಕೊಂಡಿದ್ದಾರೆ. ಶ್ರೀಕಾಂತ್, ಗಿರಿಜಾ, ಡೀಕಮ್ಮ, ಶಕುಂತಳಾ, ನಾರಾಯಣ ಪೂಜಾರಿ, ರಾಧಾಕೃಷ್ಣ ಪೂಜಾರಿ, ಗಣೇಶ್ ಅಂತರ ಮೊದಲಾದವರ ಮನೆ ಮತ್ತು ನೂರಾರು ಎಕರೆ ಕೃಷಿ ಭೂಮಿ ಸರ್ವನಾಶವಾಗಿದೆ. ದುರ್ಘಟನೆಯ ಬಳಿಕ ಸಂತ್ರಸ್ತರು ಮತ್ತೂರು ಕ್ಷೇತ್ರದಲ್ಲಿ ಆಶ್ರಯ ಪಡೆದಿದ್ದರು. ಸಾಲಮನ್ನಾವೂ ಇಲ್ಲ!
ಆ. 9ರಂದು ಏಕಾಏಕಿ ನುಗ್ಗಿದ ಭೀಕರ ನೆರೆ ನಮ್ಮ ಕೃಷಿಭೂಮಿಯನ್ನು ಸರ್ವನಾಶ ಗೊಳಿಸಿದೆ. ಮುಂದೇನು ಮಾಡಬೇಕು ಎಂದು ದಿಕ್ಕೇ ತೋಚುತ್ತಿಲ್ಲ. ನಮಗೆ ಸಾಲ ಮನ್ನಾವೂ ಆಗಿರಲಿಲ್ಲ. ಈಗ ನಮ್ಮ ಅಡಿಕೆ ತೋಟವೂ ನಾಶವಾಗಿದೆ. ಸಾಲ ಮನ್ನಾದ ಕುರಿತು ಕೇಳಿದರೆ ಸೊಸೈಟಿಯವರು ನೀವು ವಿಳಂಬವಾಗಿ ಸಾಲ ಪಡೆದಿದ್ದೀರಿ ಎನ್ನುತ್ತಾರೆ ಎಂದರು ಸಂತ್ರಸ್ತರಲ್ಲೋರ್ವರಾದ ಕೃಷಿಕ ರಾಧಾಕೃಷ್ಣ ಪೂಜಾರಿ.
Related Articles
ನಮ್ಮದು ಹೊಸ ಮನೆ. ಪ್ರವಾಹ ಹೆಚ್ಚುತ್ತಿದ್ದಂತೆ ಗೋಡೆಗಳು ಬಿರುಕು ಬಿಟ್ಟವು. ದೊಡ್ಡ ದೊಡ್ಡ ಮರಗಳೇ ಬಂದು ಅಪ್ಪಳಿಸುತ್ತಿದ್ದವು. ನೋಡುತ್ತಿದ್ದಂತೆಯೇ ಮನೆ ಪೂರ್ತಿ ಮುಳುಗಿತು. ನಮ್ಮನ್ನು ಪೈಪಿನ ಸಹಾಯದಿಂದ ರಕ್ಷಿಸಿದರು. ಪ್ರವಾಹ ಏರಿ ಬಂದಾಗ ನಮಗೆ ನಮ್ಮ ಜೀವ ಬಿಟ್ಟರೆ ರಕ್ಷಿಸಲು ಸಾಧ್ಯವಾದದ್ದು ಮೂರು ದನಗಳನ್ನು ಮಾತ್ರ ಎಂದು ಸಂತ್ರಸ್ತ ರಂಜಿತ್ ನೋವು ತೋಡಿಕೊಂಡರು.
Advertisement
ಮರುನಿರ್ಮಾಣವೊಂದು ಹೋರಾಟ“ನಾವು ಮತ್ತೆ ಅಲ್ಲಿಗೆ ಹೋಗುವುದಿಲ್ಲ, ಅಲ್ಲಿನ ಪರಿಸ್ಥಿತಿಯನ್ನು ಕಾಣುವುದಕ್ಕೆ ಸಾಧ್ಯವಾಗುತ್ತಿಲ್ಲ’ ಎನ್ನುತ್ತಿದ್ದಾರೆ ಈ ಭಾಗದ ಸಂತ್ರಸ್ತರಲ್ಲಿ ಕೆಲವರು. ಇನ್ನೊಂದೆಡೆ ಅಲ್ಲಿ ಮರಳಿ ಬದುಕು ಕಟ್ಟುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ. ಮೂರ್ನಾಲ್ಕು ಹಿಟಾಚಿ ಯಂತ್ರಗಳು ಹೂಳು ತೆಗೆದು ಹಾಕುವ ಕಾರ್ಯದಲ್ಲಿ ನಿರತವಾಗಿವೆ. ನದಿಯ ಹರಿವು ಪಥವನ್ನು ಬದಲಿಸಿ ತೋಟಗಳನ್ನು ಕೊರೆದು ಹಾಕಿದ್ದು, ಒಂದಷ್ಟು ಹಿಟಾಚಿಗಳು ಅದನ್ನು ಮತ್ತೆ ಸಹಜ ಸ್ಥಿತಿಗೆ ತರುವ ಕೆಲಸ ಮಾಡುತ್ತಿವೆ. ನದಿಯ ಪಥ ಬದಲಿಸುವ ವಿಚಾರದಲ್ಲಿ ನದಿಯ ಇಕ್ಕೆಲಗಳ ನಿವಾಸಿಗಳ ಮಧ್ಯೆ ಒಂದಷ್ಟು ಗೊಂದಲವೂ ಮೂಡಿದೆ.
ಇನ್ನೊಂದೆಡೆ ಬೇರೆ ಬೇರೆ ಕಡೆಗಳಿಂದ ಆಗಮಿಸುವ ಸ್ವಯಂಸೇವಕರು ಮನೆಗಳ ಅವಶೇಷ ತೆರವು, ಸ್ವತ್ಛಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಮೆಸ್ಕಾಂ ಸಿಬಂದಿ ಬಿದ್ದಿರುವ ಕಂಬಗಳನ್ನು ದುರಸ್ತಿಪಡಿಸಿ ವಿದ್ಯುತ್ ಸಂಪರ್ಕ ಮರಳಿ ಜೋಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪರ್ಲಾಣಿ ಸೇತುವೆ ಕೊಚ್ಚಿ ಹೋಗಿರುವ ಭಾಗಗಳಲ್ಲಿ ಮರಳಿನ ಗೋಣಿ ಚೀಲ ಜೋಡಿಸಿ ರಕ್ಷಣೆ ನೀಡಲಾಗುತ್ತಿದೆ. ಇದೆಲ್ಲ ಮತ್ತೆ ಹಿಂದಿನ ಸ್ಥಿತಿಗೆ ಬರು ವುದು ಕಷ್ಟ ಎಂಬ ಅಭಿಪ್ರಾಯ ಕೇಳಿಬರುತ್ತಿದ್ದರೂ ಇರುಳು ಹಗಲು ಶ್ರಮಿಸುತ್ತಿರುವ ಸ್ವಯಂಸೇವಕರು ಆಗ ಮುನಿದ ಪ್ರಕೃತಿ ಮುಂದಾದರೂ ಕೃಪೆ ತೋರುವುದು ಎಂಬ ದೃಢವಿಶ್ವಾಸದಿಂದ ಮುಂದೆ ಸಾಗಿದ್ದಾರೆ. ಜನಸಾಗರವೇ ಬರುತ್ತಿದೆ
ಭೀಕರ ಪ್ರವಾಹದ ಆರ್ಭಟಕ್ಕೆ ತುತ್ತಾಗಿ ಪರ್ಲಾಣಿ ಪ್ರದೇಶದ ಮನೆ, ತೋಟ, ಗದ್ದೆಗಳು ಸರ್ವನಾಶವಾಗಿವೆ. ಎಲ್ಲೆಲ್ಲೂ ಕಾಣಿಸುವುದು ಬರೇ ಹೊಗೆ ರಾಶಿ. ಅಲ್ಲೊಂದು ಜನವಸತಿ ಇತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ಅಲ್ಲಲ್ಲಿ ಮನೆಯ ಅವಶೇಷಗಳು ತೋರುತ್ತಿವೆ. ಉಳಿದೆಲ್ಲವೂ ಕೊಚ್ಚಿ ಹೋಗಿವೆ. ಜಲಸ್ಫೋಟ ಎಷ್ಟು ಬಲಶಾಲಿಯಾಗಿತ್ತು ಎನ್ನುವುದಕ್ಕೆ ಸಾಕ್ಷಿ ಘಟ್ಟದ ಎತ್ತರದಿಂದ ಉರುಳಿಬಂದು ಅಲ್ಲಲ್ಲಿ ಬಿದ್ದಿರುವ ಭೀಮಗಾತ್ರದ ಮರಗಳು. ಅರಣ್ಯ ಇಲಾಖೆ ಅವುಗಳ ವಿಲೇವಾರಿ ಕಾರ್ಯ ನಡೆಸುತ್ತಿದೆ. ಅಕ್ಷರಶಃ ಸಮುದ್ರದಂತೆ ಗೋಚರಿಸುವ ಈ ಪ್ರದೇಶವನ್ನು ನೋಡುವುದಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಇಲ್ಲಿನ ಪರಿಸ್ಥಿತಿಯನ್ನು ಕಂಡು ಜನ ಮರುಕ ಪಡುತ್ತಿದ್ದಾರೆ. ಪೈಪು ಹಿಡಿದು ಪಾರು
ಪ್ರವಾಹದ ನೀರು ಹರಿದು ನಮ್ಮ ಹೊಸ ಮನೆಯ ಗೋಡೆಗಳಲ್ಲಿ ಬಿರುಕು ಬಿಟ್ಟಿತ್ತು. ಮನೆಯ ಸುತ್ತಲೂ ನೀರು ಆವರಿಸಿದ್ದರಿಂದ ಪೈಪಿನ ಮೂಲಕ ನಮ್ಮನ್ನು ರಕ್ಷಿಸಲಾಯಿತು. ಒಟ್ಟಿನಲ್ಲಿ ನಾವು ಬದುಕಿದ್ದೇ ಹೆಚ್ಚು.
-ರಂಜಿತ್ ಅಂತರ, ಸಂತ್ರಸ್ತ ದಿಕ್ಕೇ ತೋಚುತ್ತಿಲ್ಲ
ನಮ್ಮ ಅಡಿಕೆ ತೋಟ ಬಹುತೇಕ ನಾಶವಾಗಿದ್ದು, ಅಡಿಕೆೆ ಮರಗಳ ಸಹಿತ ಫಸಲು ಕೂಡ ಉಳಿದಿಲ್ಲ. ಒಂದೆಡೆ ಮಾಡಿದ ಕೃಷಿ ಸಾಲ ಮನ್ನಾವೂ ಆಗಿಲ್ಲ. ಈಗ ಸಾಲವನ್ನು ಹೇಗೆ ತೀರಿಸಲಿ ಎಂದು ದಿಕ್ಕೇ ತೋಚುತ್ತಿಲ್ಲ.
-ರಾಧಾಕೃಷ್ಣ ಪೂಜಾರಿ, ಸಂತ್ರಸ್ತ ಕಿರಣ್ ಸರಪಾಡಿ