Advertisement
ಬೇಳೂರು: ಉತ್ಪಾದನೆಗೊಂಡ ಹಾಲಿಗೆ ಸೂಕ್ತ ಬೆಲೆ ಸಿಗದಿದ್ದಾಗ, ಹೈನುಗಾರಿಕೆಯಿಂದಲೇ ಅಭಿವೃದ್ಧಿ ಹೊಂದುವ ಕನಸನ್ನು ನನಸು ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು ಬೇಳೂರು ಹಾಲು ಉತ್ಪಾದಕರ ಸಹಕಾರಿ ಸಂಘ.
ದಿ| ಶ್ರೀಪತಿ ವೆಂಕಟದಾಸ ಅಡಿಗ (ಅಂದಿನ ಸ್ಥಾಪಕಾಧ್ಯಕ್ಷರು) ವೆಂಕಟರಮಣ ಬಾಯರಿ ಹಾಗೂ ಪ್ರಸ್ತುತ ಬೇಳೂರು ಗ್ರಾ.ಪಂ.ನ ಅಧ್ಯಕ್ಷ ಬಿ.ಕರುಣಾಕರ ಶೆಟ್ಟಿ ಅವರ ದೂರದೃಷ್ಟಿತ್ವದಿಂದಾಗಿ ಸಂಘ ಹುಟ್ಟಿಕೊಂಡಿತು. 1986 ನ.25ರಂದು ಸಂಘ ಸ್ಥಾಪನೆಯಾಗಿತ್ತು. 2004ರಲ್ಲಿ ಸಂಘ ಸ್ವಂತ ಕಟ್ಟಡ ಹೊಂದಿತ್ತು.
Related Articles
ಬೇಳೂರು ಗ್ರಾಮ ಸುಮಾರು 8 ಕಿ.ಮೀ. ವ್ಯಾಪ್ತಿ ಹೊಂದಿರುವುದರಿಂದ ಗ್ರಾಮೀಣ ಭಾಗದ ಹಾಲು ಉತ್ಪಾದಕ ಸದಸ್ಯರಿಗೆ ಅನುಕೂಲಕರವಾಗುವ ನಿಟ್ಟಿನಿಂದ ಗ್ರಾಮದ ದೇಲಟ್ಟು , ಗುಳ್ಳಾಡಿ, ಮೊಗೆಬೆಟ್ಟು, ಬೇಳೂರಿನಲ್ಲಿ ಶಾಖೆ ವಿಸ್ತರಿಸಲಾಗಿದೆ. ಈ ನಾಲ್ಕು ಶಾಖೆಗಳಿಂದ ಸರಿ ಸುಮಾರು 2200 ಲೀ. ಹಾಲು ಸಂಗ್ರಹವಾಗುತ್ತಿದ್ದು ಕೆದೂರು ಬಿಎಂಸಿಗೆ ಸರಬರಾಜು ಮಾಡಲಾಗುತ್ತಿದೆ.
Advertisement
ಗ್ರಾಮೀಣ ಭಾಗದ ಮಹಿಳಾ ಹಾಲು ಉತ್ಪಾದಕ ಸದಸ್ಯರಿಗೆ ಪ್ರೇರಣೆ ನೀಡಿ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಿಂದ ಸಂಘವು ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿಯೇ ದೇಲಟ್ಟು ಮಹಿಳಾ ಹಾಲು ಉತ್ಪಾದಕರ ಸಹಕಾರ ಮಹಿಳಾ ಸಂಘವನ್ನು ಆರಂಭಿಸಿದ್ದು, ಅತ್ಯುತ್ತಮ ಕಾರ್ಯಶೈಲಿಯ ಮೂಲಕ ತಾಲೂಕಿನಲ್ಲಿಯೇ ಗುರುತಿಸಿಕೊಂಡಿದೆ.
ಸದಸ್ಯರಿಗೆ ಬಹುಮಾನಪ್ರತಿ ವರ್ಷ ಸಂಘವು ಸಂಘದ ಸದಸ್ಯರಿಗೆ ಅನಾರೋಗ್ಯವಾದಾಗ ಸಹಾಯಧನ ನೀಡಿ ಸ್ಪಂದಿಸಲಾಗುತ್ತಿದೆ. ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ಮತ್ತು ಸರಕಾರದ ಹಾಗೂ ಇಲಾಖೆಯ ನೆರವಿನಿಂದ ಯಶಸ್ವಿನಿ ರೈತರ ಆರೋಗ್ಯ ವಿಮೆ, ಜಾನುವಾರುಗಳಿಗೆ ಬೇಕಾದ ಪಶು ಆಹಾರ, ಹಸಿರು ಮೇವಿನ ಬೀಜ, ರೋಗ ನಿರೋಧಕ ಚುಚ್ಚು ಮದ್ದು, ಕೃತಕ ಗರ್ಭಧಾರಣೆ, ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ಮಾಹಿತಿ ನೀಡುತ್ತಾ ಬಂದಿದೆ. ಪಶು ಸಂಗೋಪನ ಇಲಾಖೆಯ ಸಹಕಾರದಿಂದ ಜಾನುವಾರುಗಳಿಗೆ ಕಾಲು ಬಾಯಿ ಲಸಿಕಾ ಕಾರ್ಯವನ್ನು ಮಾಡುತ್ತಿದೆ. ಸಾಧನೆಯ ಹಾದಿ
ಪ್ರಾರಂಭದ ದಿನಗಳಲ್ಲಿ ಸಂಘ 50 ಮಂದಿ ಸದಸ್ಯರನ್ನು ಹೊಂದಿದ್ದು, 25 ಲೀ. ಹಾಲು ಸಂಗ್ರಹಿಸುತ್ತಿತ್ತು. ಈಗ ಒಟ್ಟು 200 ಮಂದಿ ಸದಸ್ಯರಿದ್ದಾರೆ. ಇವರಲ್ಲಿ 160 ಮಂದಿ ಹಾಲು ಹಾಕುತ್ತಿದ್ದು 750 ಲೀ.ವರೆಗೆ ಹಾಲು ಸಂಗ್ರಹವಾಗುತ್ತಿದೆ. ಹಾಲು ಹಾಕುವ ಸದಸ್ಯರಲ್ಲಿ 138 ಮಂದಿ ಮಹಿಳಾ ಹೈನುಗಾರರೇ ಇರುವುದು ವಿಶೇಷ. ಹೈನುಗಾರ ಸದಸ್ಯರಿಗೆ ಸರಕಾರ ಹಾಗೂ ಇಲಾಖೆಯಿಂದ ದೊರೆಯುವ ಸವಲತ್ತು ಹಾಗೂ ಅದಕ್ಕೆ ಪೂರಕವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಿದ್ದೇವೆ .
-ಬಿ. ರಾಮಣ್ಣ ಅಡಿಗ ,
ಅಧ್ಯಕ್ಷರು, ಬೇಳೂರು
ಹಾ.ಉ.ಸ.ಸಂಘ ಅಧ್ಯಕ್ಷರು:
ದಿ| ಶ್ರೀಪತಿ ವೆಂಕಟದಾಸ ಅಡಿಗ, ಬಿ.ಕರುಣಾಕರ ಶೆಟ್ಟಿ, ಬಿ.ರಾಮಣ್ಣ ಅಡಿಗ (ಹಾಲಿ)
ಕಾರ್ಯದರ್ಶಿಗಳು:
ವೆಂಕಟರಮಣ ಬಾಯರಿ, ಉದಯ ಶೆಟ್ಟಿ, ವನಿತಾ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿ, ಸತೀಶ್ ಶೆಟ್ಟಿ (ಹಾಲಿ) -ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ