ಕಪಿ ಹಾವಳಿಯಿಂದ ಈ ಪ್ರದೇಶದ ತೆಂಗು, ಕಂಗು, ಬಾಳೆ ಬೆಳೆಗಾರರು ಹಾಗೂ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಒಂದೆಡೆ ಪ್ರಾಕೃತಿಕ ಏರುಪೇರಿನಿಂದಾಗಿ ಬೆಳೆ ಹಾನಿ ಯಾಗುತ್ತಿದ್ದರೆ ಈಗ ಮಂಗಗಳ ಹಾವಳಿಯಿಂದ ಬೆಳೆಗಳು ಹಾನಿಗೊಳಗಾಗುತ್ತಿವೆ. ಕಾರ್ಕಳ ತಾ. ಬೆಳ್ಮಣ್, ನಂದಳಿಕೆ, ಬೋಳ, ಮುಂಡ್ಕೂರು, ಸಚ್ಚೇರಿಪೇಟೆ, ಸಂಕಲಕರಿಯ ಪ್ರದೇಶದ ಕೃಷಿಕರು ವ್ಯಾಪಕ ನಷ್ಟ ಅನುಭವಿಸಿದ್ದಾರೆ. ತೆಂಗಿನ ತೋಟಗಳ ಕೃಷಿಕರು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
Advertisement
ಚಿರತೆ, ಕಾಡುಕೋಣಗಳ ಬಳಿಕ ಮಂಗಗಳು!ಈ ಹಿಂದೆ ಬೋಳ ಆಸುಪಾಸು ಕಾಡುಕೋಣ ಹಾಗೂ ಚಿರತೆಗಳ ಹಾವಳಿಯಿಂದ ತತ್ತರಿಸಿ ಹೋಗಿದ್ದ ಕೃಷಿಕರಿಗೆ ಬಳಿಕ ತುಸು ಸಮಯ ನೆಮ್ಮದಿಯಿತ್ತು. ಈಗ ಮಂಗಗಳ ಹಾವಳಿಗೆ ಜನ ದಿಕ್ಕೇ ತೋಚದಾಗಿದ್ದಾರೆ. ಬೆಳಗಾಗುವುದರೊಳಗೆ ತೆಂಗಿನ ತೋಟಕ್ಕೆ ಲಗ್ಗೆ ಇಡುವ ಮಂಗಗಳು ಸಾವಿರಾರು ತೆಂಗಿನಕಾಯಿಯನ್ನು ಹಾಳುಮಾಡುತ್ತಿದೆ. ಮುಂಜಾನೆ ತೋಟಗಳಿಗೆ ಲಗ್ಗೆ ಇಡುವ ಮಂಗಗಳು ಕೆಲವೊಮ್ಮೆ ರಾತ್ರಿವರೆಗೂ ತೋಟದಲ್ಲಿರುತ್ತವೆ.
ಅರಣ್ಯ ಇಲಾಖೆಗೆ ಮನವಿ
ನವಿಲು, ಮಂಗಗಳ ಉಪಟಳಗಳ ಬಗ್ಗೆ ಈಗಾಗಲೇ ಅರಣ್ಯ ಇಲಾಖೆಗೆ ದೂರು ನೀಡಲಾಗಿದ್ದು ಸಮಸ್ಯೆ ಪರಿಹಾರಕ್ಕಾಗಿ ಪ್ರಯತ್ನ ನಡೆಯುತ್ತಿದೆ. ಈ ಹಿಂದೆ ಮಂಗಗಳ ಹಾವಳಿ ಇಷ್ಟೊಂದು ಪ್ರಮಾಣದಲ್ಲಿರಲಿಲ್ಲ. ಅಧಿಕಾರಿಗಳೂ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನವುದು ರೈತರ ಅಳಲು.
– ಶರತ್ ಶೆಟ್ಟಿ ,ಸಚ್ಚೇರಿಪೇಟೆ 50ಕ್ಕೂ ಮಿಕ್ಕಿ ಮಂಗಗಳು
ನಾವು ಎಷ್ಟೇ ಬೊಬ್ಬೆ ಹೊಡೆದು ಓಡಿಸಿದರೂ ಮಂಗಗಳ ಹಿಂಡು ಕದಲುತ್ತಿಲ್ಲ, ಒಮ್ಮೆಲೆ ಸುಮಾರು 50ಕ್ಕೂ ಮಿಕ್ಕಿ ಮಂಗಗಳು ಲಗ್ಗೆ ಇಟ್ಟು ಕೃಷಿ ಹಾಳುಗೆಡವುತ್ತಿವೆ.
– ಸತೀಶ್ ಪೂಜಾರಿ,ಬೋಳ ಗ್ರಾಮಸ್ಥ