Advertisement

Belman: ಹಿಂದೂಗಳ ಮನೆಯಲ್ಲಿ ಗೋದಲಿ ಸಂಭ್ರಮ!

01:03 PM Dec 25, 2024 | Team Udayavani |

ಬೆಳ್ಮಣ್‌: ಸಾಮಾನ್ಯವಾಗಿ ಕ್ರಿಸ್ಮಸ್‌ ಹಬ್ಬದ ಸಂದರ್ಭ ಕ್ರೈಸ್ತರು ತಮ್ಮ ಮನೆಯಲ್ಲಿ ಕ್ರಿಸ್ಮಸ್‌ ಗೋದಲಿ ನಿರ್ಮಿಸುವುದು ಸಂಪ್ರದಾಯ ಹಾಗೂ ವಾಡಿಕೆ. ಆದರೆ, ನಂದಳಿಕೆ ಕಾನಬೆಟ್ಟುವಿನ ಸರಳಾ ಹೆಗ್ಡೆಯವರು ಕಳೆದ 6 ವರ್ಷಗಳಿಂದ ತಮ್ಮ ಮನೆಯ ಪಕ್ಕದಲ್ಲಿ ಸುಂದರ ಗೋದಲಿ ನಿರ್ಮಿಸಿ ಸಾಮರಸ್ಯ ಮೆರೆಯುತ್ತಿದ್ದಾರೆ.

Advertisement

ಭಗವಾನ್‌ ಯೇಸು ಕ್ರಿಸ್ತನ ಜನ್ಮ ವೃತ್ತಾಂತಗಳನ್ನು ಸಾರುವ ಗೊಂಬೆಗಳು, ಹಳ್ಳ, ನದಿ, ತೊರೆ, ಬಾವಿಗಳು, ಮೇಕೆಗಳು, ಕುರಿಗಳು, ಹೊಲ ಗದ್ದೆಗಳು, ದನ -ಕರುಗಳು, ಹಟ್ಟಿಯ ಚಿತ್ರಣವೂ ಸೇರಿ ಅದ್ಭುತವಾದ ಗೋದಲಿಯನ್ನು ರಚಿಸಿದ್ದಾರೆ. ಕ್ರೈಸ್ತರ ಮನೆಯ ಗೋದಲಿಗೆ ಸರಿಗಟ್ಟುವ ರೀತಿಯಲ್ಲಿ ಸಣ್ಣ ಸಣ್ಣ ಅಂಶಗಳನ್ನು ಇಲ್ಲಿ ನಿರೂಪಿಸಲಾಗಿದೆ. ದೀಪಾಲಂಕಾರದಿಂದ ರಾತ್ರಿಯ ಹೊತ್ತು ಇದು ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ.

ಕುಟುಂಬದವರ ಸಹಕಾರ
ಸಮಾಜಮುಖೀ ಚಿಂತನೆಯ ಸರಳಾ ಹೆಗ್ಡೆಯವರ ಈ ಪರಿಕಲ್ಪನೆಗೆ ಪುತ್ರ ಸುಹಾಸ್‌ ಹೆಗ್ಡೆ, ಸೊಸೆ ಆಶಾ ಸುಹಾಸ್‌ ಹೆಗ್ಡೆ, ಮೊಮ್ಮಕ್ಕಳು, ಕುಟುಂಬಿಕರು ನಿರಂತರ ಸಹಕಾರ ನೀಡಿದ್ದಾರೆ. ಸರಳಾ ಸಾ ಮಿಲ್‌ನ ಸಿಬಂದಿ ಜಾಯ್ಸ ಎಂಬ ಕ್ರೈಸ್ತ ಮಹಿಳೆ ಸಲಹೆ ಸಹಕಾರ ನೀಡಿದ್ದಾರೆ. ಜಾತಿ, ಮತ, ಧರ್ಮಗಳ ನಡುವೆ ಗೋಡೆಗಳು ಏಳುತ್ತಿರುವ ಕಾಲಘಟ್ಟದಲ್ಲಿ ಸರಳಾ ಹೆಗ್ಡೆಯವರ ಕ್ರಿಸ್ಮಸ್‌ ಗೋದಲಿ ಹಿಂದೂ ಹಾಗೂ ಕ್ರೈಸ್ತರ ನಡುವೆ ಬಾಂಧವ್ಯದ ಸೇತುವೆ ಕಟ್ಟುತ್ತಿದೆ.

ಪ್ರೇರಣೆಯೇನು?
ನಂದಳಿಕೆ ಸರಳಾ ವುಡ್‌ ಇಂಡಸ್ಟ್ರೀಸ್‌ನ ಸರಳಾ ಹೆಗ್ಡೆಯವರು ತನ್ನ ಪ್ರವಾಸದ ಅವಧಿಯಲ್ಲಿ ಜಾರ್ಖಡ್‌, ನಾಗಾಲ್ಯಾಂಡ್‌ ಸಹಿತ ದೇಶದ ಇತರ ಭಾಗಗಳನ್ನು ಸಂದರ್ಶಿಸಿದರು. ಅಲ್ಲಿ ಕಂಡ ಗದ್ದೆ, ಪೈರು ಹಾಗೂ ಕ್ರೈಸ್ತರ ಜೀವನ ಶೈಲಿ, ಆರಾಧನಾ ಶೈಲಿಗಳನ್ನು ಗಮನಿಸಿ ಈ ಗೋದಲಿಯ ಪರಿಕಲ್ಪನೆಗೆ ಮುನ್ನುಡಿ ಬರೆದಿದ್ದರು.

-ಶರತ್‌ ಶೆಟ್ಟಿ ಮುಂಡ್ಕೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next