Advertisement

ಬೆಳ್ಮಣ್‌: ಹದಗೆಟ್ಟ ವಾಹನ ನಿಲುಗಡೆ ವ್ಯವಸ್ಥೆ

07:35 PM Apr 30, 2019 | Sriram |

ಬೆಳ್ಮಣ್‌: ಇಲ್ಲಿನ ರೋಟರಿ ಸಂಸ್ಥೆ, ಶಾಸಕರು ಹಾಗೂ ಇತರರ ನೆರವಿನಿಂದ ಸರಕಾರಿ ಪ.ಪೂ. ಕಾಲೇಜಿನ ಎದುರುಗಡೆ ಸುಂದರ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದ್ದರೂ ವಾಹನ ಮಾಲಕರು ಅಡ್ಡಾ ದಿಡ್ಡಿ ವಾಹನ ನಿಲ್ಲಿಸುತ್ತಿರುವುದರಿಂದ ಇಲ್ಲಿನ ಪಾರ್ಕಿಂಗ್‌ ವ್ಯವಸ್ಥೆ ಟೀಕೆಗೆ ಕಾರಣವಾಗುತ್ತಿದೆ.

Advertisement

ಚರ್ಚ್‌ ಕಟ್ಟಡದಿಂದ ಪಂಚಾಯತ್‌ವರೆಗಿನ ರಸ್ತೆಗಳ ಇಕ್ಕೆಲಗಳಲ್ಲಿ ಖಾಸಗಿ ವಾಹನಗಳನ್ನು ಪಾರ್ಕ್‌ ಮಾಡಲಾಗುತ್ತಿದ್ದು ಸರ್ವೀಸ್‌ ಬಸ್ಸು ಹಾಗೂ ಇತರ ವಾಹನ ಸವಾರರಿಗೆ ತೊಂದರೆಯುಂಟಾಗಿದೆ. ದಾರಿಹೋಕರಿಗೆ ನಡೆದಾಡುವುದು ಕಷ್ಟವಾಗಿದೆ.

ಪಾರ್ಕಿಂಗ್‌ ವ್ಯವಸ್ಥೆ ಇದ್ದರೂ ಸಮಸ್ಯೆ!
ಬೆಳೆಯುತ್ತಿರುವ ಬೆಳ್ಮಣ್‌ ಪೇಟೆಗೆ ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ವಾಹನ ಸವಾರರು ಎಲ್ಲೆಂದರಲ್ಲಿ ವಾಹನವನ್ನು ಪಾರ್ಕ್‌ ಮಾಡಿ ತೆರಳುತ್ತಿದ್ದರು. ಇದನ್ನು ಮನಗಂಡ ಬೆಳ್ಮಣ್‌ ರೋಟರಿ ಸಂಸ್ಥೆಯ 2018-19ನೇ ಸಾಲಿನ ಅಧ್ಯಕ್ಷ ರನೀಶ್‌ ಆರ್‌. ಶೆಟ್ಟಿ ಸುಮಾರು 13 ಲಕ್ಷ ರೂ. ವೆಚ್ಚದಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದರು. ಆದರೂ ಅದರ ಸದ್ಬಳಕೆಯಾಗದ ಕಾರಣ ಮತ್ತೆ ಸಮಸ್ಯೆ ತಲೆದೋರಿದೆ.

ಆರೋಪ
ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ ನಿರ್ಮಾಣದ ವೇಳೆ ಬೆಳ್ಮಣ್‌ ಪೇಟೆಯಲ್ಲಿ ರಸ್ತೆ ವಿಸ್ತರಣೆಗೆ ಸರಿಯಾದ ಜಾಗ ದೊರಕದ ಹಿನ್ನೆ°ಲೆಯಲ್ಲಿ ಇದ್ದ ಜಾಗದಲ್ಲೇ ಹೆದ್ದಾರಿ ಆಗಲೀಕರಣ ನಡೆಸಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಈ ಕಾರಣದಿಂದಾಗಿಯೇ ವಾಹನಗಳ ಪಾರ್ಕಿಂಗ್‌ ಸಮಸ್ಯೆ ತಲೆದೋರಿದೆ. ಇಕ್ಕಾಟಾದ ಪೇಟೆ ರಸ್ತೆಯ ಎರಡು ಬದಿಯಲ್ಲೂ ವಾಹನಗಳು ನಿಲುಗಡೆಯಾದಾಗ ಸುಗಮ ಸಂಚಾರಕ್ಕೆ ತೊಡಕುಂಟಾಗುತ್ತದೆ. ಅಲ್ಲದೆ ಪೇಟೆಯ ಮಧ್ಯ ಭಾಗದಲ್ಲಿ ಬಸ್ಸುಗಳು ರಸ್ತೆಯಲ್ಲಿಯೇ ನಿಂತು ಪ್ರಯಾಣಿಕರನ್ನು ಹತ್ತಿ ಇಳಿಸಿ ಮಾಡುವುದರಿಂದ ಉಡುಪಿ ಕಡೆಯಿಂದ ಬರುವ ವಾಹನಗಳಿಗೆ ತೊಂದರೆಯಾಗುತ್ತದೆ. ಇದರಿಂದಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚಿದೆ ಎನ್ನುವುದು ಸ್ಥಳೀಯರ ಆರೋಪ.

ಆಗ್ರಹ
ನಿತ್ಯ ಟ್ರಾಫಿಕ್‌ ಜಾಮ್‌ ಸಮಸ್ಯೆಯನ್ನು ತಪ್ಪಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಚಾರಿ ಪೋಲಿಸ್‌ ಸಿಬಂದಿ ನೇಮಿಸಿ ಎಂಬುದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ಹಸ್ತಾಂತರದ ಬಳಿಕ ಕ್ರಮ
ರೋಟರಿಯವರು ಈಗಾಗಲೇ ಬೆಳ್ಮಣ್‌ನಲ್ಲಿ ನಿರ್ಮಿಸಿದ ಪಾರ್ಕಿಂಗ್‌ ವ್ಯವಸ್ಥೆ ಇನ್ನೂ ಪಂಚಾಯತ್‌ಗೆ ಹಸ್ತಾಂತರವಾಗಿಲ್ಲ. ರೋಟರಿಯಿಂದ ಯಾವುದೇ ಪತ್ರಗಳೂ ಪಂಚಾಯತ್‌ಗೆ ಬಂದಿಲ್ಲ. ಈ ವ್ಯವಸ್ಥೆ ಹಸ್ತಾಂತರವಾದ ಬಳಿಕ ಪಾರ್ಕಿಂಗ್‌ ಅವ್ಯವಸ್ಥೆಯನ್ನು ಸರಿಪಡಿಸುವ ಪ್ರಯತ್ನ ನಡೆಸಲಾಗುವುದು.
-ಪ್ರಕಾಶ್‌, ಪಿಡಿಒ, ಬೆಳ್ಮಣ್‌ ಪಂಚಾಯತ್‌

ಸೂಕ್ತ ಕ್ರಮ ಕೈಗೊಳ್ಳಿ
ಪಾರ್ಕಿಂಗ್‌ ವ್ಯವಸ್ಥೆ ಇದ್ದರೂ ಇದರ ಉಪಯೋಗವನ್ನು ಜನತೆ ಪಡೆಯುತ್ತಿಲ್ಲ. ರಸ್ತೆ ಬದಿಯಲ್ಲೇ ತಮ್ಮ ವಾಹನವನ್ನು ಪಾರ್ಕ್‌ ಮಾಡುತ್ತಿರುವುದರಿಂದಲೇ ಹೆಚ್ಚಿನ ಅಪಘಾತಗಳು ನಡೆಯುತ್ತಿವೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿ ಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
– ರಿತೇಶ್‌ ನಂದಳಿಕೆ,
ಗ್ರಾಮಸ್ಥರು

- ಶರತ್‌ ಬೆಳ್ಮಣ್‌

Advertisement

Udayavani is now on Telegram. Click here to join our channel and stay updated with the latest news.

Next