ಬೆಳ್ಮಣ್: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕು ಗರಿಷ್ಟ ಸಾಧನೆಯನ್ನು ತೋರಬೇಕೆಂಬ ಛಲ ತೊಟ್ಟ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಅವರ ನೇತೃತ್ವದಲ್ಲಿ ಸಮಾನ ಮನಸ್ಕ ಶಿಕ್ಷಣ ಪ್ರೇಮಿಗಳು ಹಾಗೂ ಚಿಂತಕರ ತಂಡ ಸೋಮವಾರ ಬೆಳ್ಳಂಬೆಳಗ್ಗೆ 5 ಗಂಟೆಗೆ 7 ಶಾಲೆಗಳ 8 ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿತು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಈ ವಿನೂತನ ಚಿಂತನೆಗೆ ಬೆಳ್ಮಣ್ ವಿಭಾಗದ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಸಹಿತ ವಿವಿಧ ಶಿಕ್ಷಣ ಸಂಸ್ಥೆಗಳ ಹಿರಿಯ ಅಧ್ಯಾಪಕರು ಕೈ ಜೋಡಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಎಸೆಸೆಲ್ಸಿ ಮಿಷನ್ 100 ಕಾರ್ಯಕ್ರಮದಲ್ಲಿ ಪರಿಕಲ್ಪನೆಯ ನೋಡಲ್ ಅಧಿಕಾರಿ ವೆಂಕಟರಮಣ ಕಲ್ಕೂರ, ಪ್ರೌಢಶಾಲಾ ಮುಖ್ಯೊಪಾಧ್ಯಾಯರ ಸಂಘದ ಅಧ್ಯಕ್ಷ ಇನ್ನಾ ಎಂ.ವಿ. ಶಾಸ್ತ್ರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪ್ರಕಾಶ್ ರಾವ್, ಕಾರ್ಯದರ್ಶಿ ಹಾಗೂ ಭುವನೇಂದ್ರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀಧರಾಚಾರ್ಯ, ರಾಜ್ಯ ಸ್ನಾತಕೋತ್ತರ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವಾಧ್ಯಕ್ಷ, ಸೂಡಾ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಿತೇಶ್ ಶೆಟ್ಟಿ, ಬೆಳ್ಮಣ್ ಸಂತ ಜೋಸೆಫರ ಕನ್ನಡ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹರಿದಾಸ್ ಭಟ್, ನಿಟ್ಟೆ ಪ್ರೌಢಶಾಲೆಯ ನಿಕಟಪೂರ್ವ ಮುಖ್ಯೋಪಾಧ್ಯಾಯ ಅರವಿಂದ್, ಬೆಳ್ಮಣ್ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶಂಕರ್ ಕುಂದರ್ ತಂಡದಲ್ಲಿದ್ದರು.
ಬೆಳಗ್ಗೆ 5 ಗಂಟೆಗೆ ಪ್ರಾರಂಭಗೊಂಡ ಈ ಎಸೆಸೆಲ್ಸಿ ಮಿಷನ್ 100 ಆಭಿಯಾನದಲ್ಲಿ 7 ಗಂಟೆಯವರೆಗೆ 7 ಶಾಲೆಗಳ 8 ವಿದ್ಯಾರ್ಥಿಗಳನ್ನು ಭೇಟಿ ಮಾಡಿತು. ವಿದ್ಯಾರ್ಥಿಗಳಿಗೆ ಕಲಿಕೆಗೆ ಪ್ರೇರೇಪಣೆ ನೀಡಿ ಹೆತ್ತವರ ಜತೆ ಸಮಾಲೋಚನೆ ನಡೆಸಿತು. ಇನ್ನಾ ಪ್ರೌಢಶಾಲೆಯ ಅಬ್ದುಲ್ ರೆಹಮಾನ್, ಬೆಳ್ಮಣ್ ಸಂತ ಜೋಸೆಫರ ಕನ್ನಡ ಶಾಲೆಯ ಆಪ್ರದಾ, ಆಂಗ್ಲ ಮಾಧ್ಯಮ ಶಾಲೆಯ ಸಾನಿಯಾ, ಬೆಳ್ಮಣ್ ಸರಕಾರಿ ಪ್ರೌಢಶಾಲೆಯ ಶ್ವೇತಾ, ಸೂಡಾ ಸರಕಾರಿ ಪ್ರೌಢಶಾಲೆಯ ಕಾರ್ತಿಕ್ ಹಾಗೂ ಕೌಸಲ್ಯಾ, ಮುಂಡ್ಕೂರು ವಿದ್ಯಾವರ್ಧಕದ ಅನನ್ಯಾ, ನಿಟ್ಟೆ ಪ್ರೌಢಶಾಲೆಯ ರಕ್ಷಣ್ ಶೆಟ್ಟಿ ಅವರ ಮನೆಗೆ ಭೇಟಿ ನೀಡಿ ಮುಂದಿನ ಕಲಿಕಾ ಯೋಜನೆಯ ಬಗ್ಗೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಯಿತು.