Advertisement
ಬೆಳ್ಳೂರು ಗ್ರಾಮ ಪಂಚಾಯತ್‌ಗೆ ಸಮಗ್ರವಾಗಿ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಈ ಬೃಹತ್ ಕುಡಿಯುವ ನೀರಿನ ಯೋಜನೆಗೆ 6.5 ಕೋಟಿ ರೂಪಾಯಿ ವೆಚ್ಚದಲ್ಲಿ ರೂಪು ನೀಡಲಾಗಿದೆ. ಕುಂಟಾರು ಶ್ರೀ ಕ್ಷೇತ್ರ ಸಮೀಪದಲ್ಲಿ ಹರಿಯುವ ಪಯಸ್ವಿನಿ ನದಿಯಿಂದ ನೀರನ್ನು ನದಿಗೆ ಹೊಂದಿಕೊಂಡು ಬೃಹತ್ ಬಾವಿಯೊಂದನ್ನು ಕೊರೆದು, ಇದಕ್ಕೆ 50 ಅಶ್ವಶಕ್ತಿಯ ನೀರೆತ್ತುವ ಪಂಪನ್ನು ಜೋಡಿಸಿ, ಕುಂಟಾರು-ಮಾಯಿಲಂಕೋಟೆ ಮೂಲಕ ಮಿಂಚಿಪ ದವಿನಲ್ಲಿ ನಿರ್ಮಿಸಿದ ಸಂಗ್ರಹಣಾ ಟ್ಯಾಂಕಿಯಲ್ಲಿ ಶೇಖರಿಸಿ ಅಲ್ಲಿಂದ ಬೆಳ್ಳೂರನ್ನು ತಲಪಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ಸುಮಾರು 10 ಕಿ.ಮೀ. ಉದ್ದಕ್ಕೆ ಕೊಳವೆಯನ್ನು ಜೋಡಿಸುವ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಬೆಳ್ಳೂರು ಗ್ರಾಮ ಪಂಚಾಯತ್‌ಗೆ ಸೇರಿದ 1,200 ಕುಟುಂಬ ಫಲಾನುಭವಿಗಳ ಸುಮಾರು 12 ಸಾವಿರ ಮಂದಿ ಪ್ರಯೋಜನ ಪಡೆಯಲಿದ್ದಾರೆ ಎನ್ನಲಾಗಿದೆ.
Related Articles
Advertisement
ಹೀಗಿರುವಾಗ ಬೆಳ್ಳೂರು ಪಂಚಾಯತ್‌ನ ನೀರುಣಿ ಸುವ ಈ ಯೋಜನೆಯಿಂದ ಅನುಕೂಲಕ್ಕಿಂತಲೂ ಅನನು ಕೂಲಗಳೇ ಎದುರಾಗಬಹುದು. ನದಿಯನ್ನು ಆಶ್ರಯಿಸಿ ಬದುಕುವ ದೇಲಂಪಾಡಿ ಗ್ರಾಮ ಪಂಚಾಯತ್ ಹಾಗೂ ಕಾರಡ್ಕ ಗ್ರಾಮ ಪಂಚಾಯತ್‌ನ ಕೃಷಿಕರು ಹಾಗೂ ಜನ ಸಾಮಾನ್ಯರು ಭಾರೀ ಸಮಸ್ಯೆ ಎದುರಿಸ ಬೇಕಾದೀತು ಎಂಬ ಭಯವೂ ಇಲ್ಲದಿಲ್ಲ. ಮುಂದೆ ಎದುರಾಗಬಹುದಾದ ಸಮಸ್ಯೆಯನ್ನು ಮನಗಂಡ ಕುಂಟಾರು ನಿವಾಸಿಗಳು ಬಾವಿ ಕೊರೆಯುವ ಕೆಲಸವನ್ನು ಎರಡು ವರ್ಷಗಳ ಹಿಂದೆ ತಡೆ ಹಿಡಿದು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು. ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಯೋಜನೆ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯ ಜನರೊಂದಿಗೆ ಮಾತುಕತೆ ನಡೆಸಿದ್ದರು. ಪಯಸ್ವಿನಿ ನದಿಗೆ ಕುಂಟಾರು ಪ್ರದೇಶದಲ್ಲಿ ನಬಾರ್ಡ್ ನೇತೃತ್ವದಲ್ಲಿ ಚೆಕ್ ಡ್ಯಾಂ ನಿರ್ಮಿ ಸಲು ಹಾಗೂ ಆ ಮೂಲಕ ಜನರಿಗೆ ಆಗಬಹುದಾದ ಸಮಸ್ಯೆ ನೀಗಿಸುವ ಬಗ್ಗೆ ಯೋಜನೆ ಮುಂದಿಟ್ಟಿದ್ದರು.
ಚೆಕ್ ಡ್ಯಾಂ ನಿರ್ಮಾಣ: ಕುಡಿಯುವ ನೀರಿನ ಯೋಜನೆಯ ಕರಾರಿನ ಪ್ರಕಾರ ಪಯಸ್ವಿನಿಗೆ ಚೆಕ್ ಡ್ಯಾಂ ನಿರ್ಮಿಸುವ ಕುರಿತು ಸ್ಥಳ ಪರಿಶೀಲನೆ ನಡೆಸಿದರು. ಇರಿಗೇಶನ್ ಇಲಾಖೆಯ ಅಸಿಸ್ಟೆಂಟ್ ಎಂಜಿನಿಯರ್ ರತ್ನಾಕರ ಈ ಬಗ್ಗೆ ಕುಂಟಾರು ಶ್ರೀ ಕ್ಷೇತ್ರದ ಸಮೀಪ, ಓಟೆ ಪ್ರಮಾಣ ಜಲ ವಿತರಣಾ ವ್ಯವಸ್ಥೆಯ ಸಮೀಪ ಚೆಕ್ ಡಾಂ ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ಕಂಡುಕೊಂಡರು. ಸ್ಥಳೀಯ ಕೃಷಿಕರೊಂದಿಗೆ ಮಾತುಕತೆ ನಡೆಸಿದ್ದಾರೆ.
ಕೃಷಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಗಂಗಾಧರ ರಾವ್ ಮಾಟೆಡ್ಕ, ಸಂಚಾಲಕ ರಾಘವನ್ ನಾಯರ್, ಕೋಶಾಧಿಕಾರಿ ಕೆ.ಎಸ್.ಮೊಹಮ್ಮದ್, ಕೃಷಿಕರಾದ ಕುಂಞಿ ಕಣ್ಣನ್ ನಾಯರ್, ಗಂಗಾಧರ ಕಾಂತಡ್ಕ, ಶ್ರೀಧರನ್ ಕಟ್ಟತ್ತಬಯಲು, ಚಂದ್ರನ್ ನಾಯರ್, ರಾಧಾಕೃಷ್ಣ ಉಪಸ್ಥಿತರಿದ್ದರು. ಪಯಸ್ವಿನಿ ನದಿಗೆ ಕುಂಟಾರು ಪ್ರದೇಶದಲ್ಲಿ ಚೆಕ್ ಡ್ಯಾಂ ನಿರ್ಮಿಸಿದರೆ ಜನರಿಗೆ ಆಗಬಹುದಾದ ಸಮಸ್ಯೆಗಳನ್ನು ನೀಗಿಸಲು ಸಾಧ್ಯ ಎಂದು ತೀರ್ಮಾನಿಸಲಾಗಿತ್ತು.
ಈಗಾಗಲೇ ಬತ್ತಿ ಬರಡಾದ ಪಯಸ್ವಿನಿಯಿಂದ ಬೆಳ್ಳೂರಿನ ಜನತೆಗೆ ಸಾಕಷ್ಟು ನೀರು ಲಭ್ಯವಾದೀತೇ ಎಂಬ ಬಗ್ಗೆ ಸಂಶಯವು ಜನರಲ್ಲಿದೆ. ಹಾಗೆಯೇ ಮಳೆಗಾಲ ನಿಕಟವಾಗುತ್ತಿರುವ ಕಾರಣ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಮುಂದಿನ ವರ್ಷ ನಡೆಸಲು ಸಾಧ್ಯವಾದೀತು. ಕರಾರು ಪ್ರಕಾರ ಚೆಕ್ ಡ್ಯಾಂ ನಿರ್ಮಾಣ ನಡೆಸದೆ ಬೆಳ್ಳೂರಿಗೆ ನೀರು ಹರಿಸುವಂತಿಲ್ಲ. ಅಂದರೆ ಒಂದು ವರ್ಷ ಕಳೆಯದೆ ಯೋಜನೆ ಪೂರ್ತಿಗೊಳ್ಳಲಾರದು.
ಹಾಗೆಯೇ ಈಗಾಗಲೇ ಕುಂಟಾರಿನಿಂದ ಮಿಂಚಿಪದವು ಪ್ರದೇಶಕ್ಕೆ ಕೊಳವೆ ಜೋಡಣೆ ಕಾಮಗಾರಿ ನಡೆಯುತ್ತಿದೆ. ಚೆರ್ಕಳ-ಸುಳ್ಯ ಪ್ರಧಾನ ರಸ್ತೆಯ ಪಕ್ಕದಲ್ಲಿ ಕೊಳವೆ ಜೋಡಿಸುವ ಕಾಮಗಾರಿ ಪೂರ್ತಿಗೊಂಡಿದ್ದರೂ ಚರಂಡಿ ಯನ್ನು ಮುಚ್ಚಿ ಕಾಮಗಾರಿ ನಡೆಸಿದ ಕಾರಣ ಭಾರೀ ಸಮಸ್ಯೆಗೆ ಕಾರಣವಾದೀತು. ಇತ್ತೀಚೆಗೆ ಸುರಿದ ಒಂದು ಮಳೆಗೆ ರಸ್ತೆ ಕೆಸರುಮಯವಾಗಿದೆ. ಜನ ಸಂಚಾರ, ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಸಮಸ್ಯೆಗಳ ಬಗ್ಗೆ ಅಧಿಕೃತರು ಕರಾರುದಾರರಿಗೆ ತುರ್ತು ಕ್ರಮಕ್ಕೆ ಸೂಚಿಸಬೇಕಾಗಿದೆ.
ಬೆಳ್ಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರ?ಗ್ರಾಮೀಣ ಪ್ರದೇಶವಾಗಿರುವ ಬೆಳ್ಳೂರು ಗ್ರಾಮ ಪಂಚಾಯತ್‌ಗೆ ಈ ಕುಡಿಯುವ ನೀರಿನ ಯೋಜನೆ ವರದಾನವಾದೀತೇ? ಇಲ್ಲಿನ ಬಹಳಷ್ಟು ಕುಟುಂಬಗಳಿಗೆ ಬೇಸಗೆ ಬಂದರೆ ನೀರಿಗಾಗಿ ತೊಂದರೆ ಆರಂಭವಾಗುತ್ತದೆ. ಪರ್ಲಾಂಗುಗಳ ತನಕ ನೀರಿಗಾಗಿ ಸಾಗ ಬೇಕಾದ ಪರಿಸ್ಥಿತಿ ಎದುರಾಗ ಬೇಕಾಗುತ್ತದೆ. ಕಾಲನಿ ನಿವಾಸಿಗಳು ಸಹ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಯೋಜನೆಯು ಸಾಕಾರಗೊಂಡರೆ ಬಹುಕಾಲದ ಜನರ ಬೇಡಿಕೆ ಈಡೇರಬಹುದು. ಪಯಸ್ವಿನಿ ಬತ್ತುವ ಸಾಧ್ಯತೆ
ಭತ್ತದ ಕೃಷಿ, ಅಡಿಕೆ ಕೃಷಿ, ತೆಂಗಿನ ಕೃಷಿ ಮೊದಲಾದವು ನೀರಿಲ್ಲದೆ ಒಣಗ ಬೇಕಾದೀತು. ಕುಡಿಯುವ ನೀರಿಗಾಗಿ ಜನರು ಒದ್ದಾಡಬೇಕಾದೀತು. ನದಿಯಲ್ಲೇ ಬೃಹತ್ ಬಾವಿ ಯನ್ನು ತೋಡಿ ನೀರನ್ನು ದೊಡ್ಡ ಯಂತ್ರದ ಮೂಲಕ ಹಾಯಿಸುವ ಯೋಜನೆಯಿಂದ ಫೆಬ್ರವರಿ-ಮಾರ್ಚ್ ತಿಂಗಳಲ್ಲಿಯೇ ಪಯಸ್ವಿನಿ ಬತ್ತುವ ಸಾಧ್ಯತೆ ಇದೆ.