Advertisement

ಕಡೂರಲ್ಲಿ ಬೆಳ್ಳಿ ಪ್ರಕಾಶಮಾನ : ಬೆಳ್ಳಿಯಂತೆ ಪ್ರಕಾಶಿಸುತ್ತಿದೆ ಕಡೂರು ಕ್ಷೇತ್ರ

12:01 PM Aug 16, 2022 | Team Udayavani |

ಮೊದಲ ಅವಧಿಯಲ್ಲಿ ಶಾಸಕರಾದರೂ ಸಹ ಅನುಭವಿ ಶಾಸಕರಂತೆ ಕೆಲಸ ಮಾಡುತ್ತಿರುವ ಬೆಳ್ಳಿಪ್ರಕಾಶ್‌ ಅವರು ಸಮಯ ಪ್ರಜ್ಞೆ, ಶಿಸ್ತು ಬದ್ಧ ಜೀವನ, ಮೌಲ್ಯಯುತ ರಾಜಕಾರಣ, ಅಪಾರ ದೈವ ಭಕ್ತಿ ರೂಢಿಸಿಕೊಂಡವರು.

Advertisement

ಸದಾ ಬರಕ್ಕೆ ತುತ್ತಾಗುತ್ತಿದ್ದ ಕಡೂರು ಕ್ಷೇತ್ರದ ಜನರ ನೀರಾವರಿ ಬೇಡಿಕೆ ಹಲವು ದಶಕಗಳಿಂದ ನನೆಗುದಿಗೆ ಬಿದ್ದಿತ್ತು. ಹಿಂದಿನ ಬಹಳಷ್ಟು ಶಾಸಕರು ನೀರಾವರಿ ಯೋಜನೆ ಜಾರಿಗೆ ಪ್ರಯತ್ನಿಸಿದ್ದರೂ ಫಲ ಸಿಕ್ಕಿರಲಿಲ್ಲ. ಯೋಗಾ ಯೋಗವೋ ಎಂಬಂತೆ ಬೆಳ್ಳಿಪ್ರಕಾಶ್‌ ಶಾಸಕರಾಗುವುದಕ್ಕೂ ತಾಲೂಕಿನ ನೀರಾವರಿ ಯೋಜನೆಗಳಿಗೆ ವೇಗ ಸಿಕ್ಕುವುದಕ್ಕೂ ಸರಿಯಾಗಿದೆ. ಇವರ ಅವಧಿಯಲ್ಲಿ ಜಾರಿಯಾದ ಭದ್ರಾ ಉಪ ಕಣಿವೆ ನೀರಾವರಿ ಯೋಜನೆ ಕಾಮಗಾರಿ ಮೊದಲ ಹಂತ ಪ್ರಗತಿಯಲ್ಲಿದ್ದು ಎರಡನೇ ಹಂತದ ಕಾಮಗಾರಿಗೆ ಹಣ ಬಿಡುಗಡೆಯಾಗಿದೆ. ಹಿಂದಿನ ಅವಧಿಯಲ್ಲಿ ಮಂಜೂರಾಗಿದ್ದ ತುಂಗಾ ತಿರುವು ನಾಲಾ ಯೋಜನೆ ಅಥವಾ ಭದ್ರಾ ಮೇಲ್ದಂಡೆ ಯೋಜನೆ ಇದೀಗ ರಾಷ್ಟ್ರೀಯ ಪುರಸ್ಕೃತ ಯೋಜನೆಯಾಗಿ ಮಾರ್ಪಾಡಾಗಿ ಕಾಮಗಾರಿ ಹಂತದಲ್ಲಿದೆ.

ಈ ಎರಡು ಬೃಹತ್‌ ನೀರಾವರಿ ಯೋಜನೆಗಳು ತಾಲೂಕಿನ 119 ಕೆರೆಗಳಿಗೆ ನೀರನ್ನು ಉಣಿಸಲಿದೆ. 1,281 ಕೋಟಿ ವೆಚ್ಚದ ಭದ್ರಾ ಉಪ ಕಣಿವೆ ಯೋಜನೆಗೆ ಶಾಸಕರಾದ ಸಿ.ಟಿ.ರವಿ, ಡಿ.ಎಸ್‌.ಸುರೇಶ್‌ ಅವರ ಶ್ರಮವಿದ್ದರೂ ಉಳಿದೆಲ್ಲ ಶಾಸಕರಿಗಿಂತ ಬೆಳ್ಳಿಪ್ರಕಾಶ್‌ ಅವರ ಶ್ರಮವೇ ಹೆಚ್ಚಾಗಿದೆ. ಅವರ ಭಗೀರಥ ಪ್ರಯತ್ನ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮುತುವರ್ಜಿಯಿಂದ ಕಡೂರಿನ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬರಲು ಕಾರಣ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

ನಿಷ್ಕ‌ಲ್ಮಶ, ಸಹೃದಯಿ ಶಾಸಕರು ಜಾತ್ಯತೀತ ಕಲ್ಪನೆಯ ಬದುಕಿನಲ್ಲಿ ನಂಬಿಕೆ ಇಟ್ಟಿದ್ದು ಕ್ಷೇತ್ರದ ಬಗ್ಗೆ ಇಟ್ಟುಕೊಂಡಿರುವ ಕಾಳಜಿಯನ್ನು ಕೆಲಸದ ಮೂಲಕ ವ್ಯಕ್ತಪಡಿಸುತ್ತಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾಲೂಕಿಗೆ ನೀರಿನ ಪಾಲು 1.43 ಟಿಎಂಸಿ ನೀರು ಹಂಚಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕ್ಷೇತ್ರದ ನೀರಾವರಿ ಯೋಜನೆಗೆ ಫಲ ನೀಡಿದಂತಾಗಿದೆ ಹಾಗೂ ಜಲಧಾರೆ ಯೋಜನೆ ಜಾರಿಯಾಗಿದ್ದು ಬೆಳ್ಳಿ ಪ್ರಕಾಶ್‌ ಅವರ ಪರಿಶ್ರಮದಿಂದ ಮಾತ್ರ.

ಭದ್ರಾ ಉಪ ಕಣಿವೆ ಯೋಜನೆಯಿಂದ ತಾಲೂಕಿನ 119 ಕೆರೆಗಳು ತುಂಬಲಿದ್ದು ಈಗಾಗಲೇ ಮೊದಲನೇ ಹಂತದ ಕಾಮಗಾರಿಗೆ 406.5 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಎರಡನೇ ಹಂತದ ಕಾಮಗಾರಿಗೆ 298.6 ಕೋಟಿ ರೂ. ಬಿಡುಗಡೆಯಾಗಿದ್ದು ಕಾಮಗಾರಿ ಶೀಘ್ರ ಆರಂಭವಾಗಲಿದೆ. ಕ್ಷೇತ್ರದ ಅಂತರ್ಜಲವೃದ್ಧಿಗೆ ಬೃಹತ್‌ 5 ಬ್ಯಾರೇಜ್‌, ಚೆಕ್‌ಡ್ಯಾಂ ನಿರ್ಮಾಣಕ್ಕೆ ಸುಮಾರು 53.15 ಕೋಟಿ ರೂ. ಮಂಜೂರಾಗಿ 12 ಚೆಕ್‌ ಡ್ಯಾಂ ಕಾಮಗಾರಿ ಪೂರ್ಣಗೊಂಡಿದೆ. 2 ನಿರ್ಮಾಣದ ಹಂತದಲ್ಲಿದ್ದರೆ ಮತ್ತೆರಡು ಅನುಮೋದನೆಯಲ್ಲಿದೆ. ಮುಂದಿನ ದಿನಗಳಲ್ಲಿ ಚೆಕ್‌ಡ್ಯಾಂ ತುಂಬುವುದರಿಂದ ಅಂತರ್ಜಲ ಹೆಚ್ಚಲಿದೆ.

Advertisement

ಕೈಗಾರಿಕೆಗೆ ಸ್ಥಾಪನೆಗೆ ಒತ್ತು: ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಲಾಗಿದ್ದು ನಗದಿಯತ್ತು ಕಾವಲಿನಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಇಲಾಖೆಯಿಂದ ಈಗಾಗಲೇ 38 ಕೋಟಿ ರೂ. ಗಳ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ದಿನಗಳಲ್ಲಿ ಕೈಗಾರಿಕಾ ಕ್ರಾಂತಿ ಆಗಲಿದೆ.

53 ಕೋಟಿ ರೂ. ವೆಚ್ಚದ ಬೃಹತ್‌ ಚೆಕ್‌ ಡ್ಯಾಂಗಳ ನಿರ್ಮಾಣ: ಪ್ರತಿ ಬಾರಿ ಬರಕ್ಕೆ ತುತ್ತಾಗುತ್ತಿದ್ದ ಕ್ಷೇತ್ರದ ಸ್ಥಿತಿ ಅರಿತು ನೀರಾವರಿಗಾಗಿ ದೊಡ್ಡಪಟ್ಟಣಗೆರೆ ಸಮೀಪ 2.35 ಕೋಟಿ ವೆಚ್ಚದ ಚೆಕ್‌ಡ್ಯಾಂ, ಮಲ್ಲಿದೇವಿಹಳ್ಳಿ ಸಮೀಪ 3 ಕೋಟಿ, ಕುಪ್ಪಾಳು ಸಮೀಪ 2 ಕೋಟಿ ರೂ. ವೆಚ್ಚದಲ್ಲಿ ಈಗಾಗಲೆ ಚೆಕ್‌ ಡ್ಯಾಂ ನಿರ್ಮಿಸಿರುವ ಕೀರ್ತಿ ಬೆಳ್ಳಿಪ್ರಕಾಶ್‌ ಅವರಿಗೆ ಸಲ್ಲುತ್ತದೆ. ಚಿಕ್ಕನಾಯ್ಕನಹಳ್ಳಿ (ಯಳ್ಳಂಬಳಸೆ) 6 ಕೋಟಿ, ಚಟ್ನಹಳ್ಳಿ 50 ಲಕ್ಷ, ಬಿಸಲೆರೆ 75 ಲಕ್ಷ, 45 ಲಕ್ಷ ರೂ. ಗಳ ಮತ್ತೂಂದು ಚೆಕ್‌ ಡ್ಯಾಂ ಹಾಗೂ ತಾಲೂಕಿನ ಗಡಿ ಭಾಗವಾದ ಚೌಳಹಿರಿಯೂರು ಸಮೀಪ 21 ಕೋಟಿ ರೂ. ವೆಚ್ಚದಲ್ಲಿ ಬೃಹತ್‌ ವೇದಾನದಿಗೆ ಅಡ್ಡಲಾಗಿ ಚೆಕ್‌ ಡ್ಯಾಂ ನಿರ್ಮಾಣ. ಇದಲ್ಲದೆ 10 ಕೋಟಿ ರೂಗಳಲ್ಲಿ ಮತ್ತೆ 5 ಚೆಕ್‌ ಡ್ಯಾಂ ಮಂಜೂರು ಮಾಡಿಸಿ ಅಂತರ್ಜಲ ಸಂರಕ್ಷಣೆ ಮಾಡಿ ರೈತರ ಪಾಲಿಗೆ ಆಪತ್ಭಾಂಧವ ಎನಿಸಿಕೊಂಡಿದ್ದಾರೆ.

ಗ್ರಾಮೀಣ ರಸ್ತೆಗಳ ಸುಧಾರಣೆ: ಲೋಕೋಪಯೋಗಿ ಇಲಾಖೆಯ ಮೂಲಕ 180 ಕೋಟಿ, ಜಿ.ಪಂ. ಎಂಜಿನಿಯರ್‌ ವಿಭಾಗದಿಂದ 16 ಕೋಟಿ ರೂ. ಗಳಲ್ಲಿ ರಸ್ತೆ ಕಾಮಗಾರಿಗಳು ನಡೆದಿದ್ದು ಗ್ರಾಮೀಣ ರಸ್ತೆಗಳು ಸುಧಾರಣೆ ಕಂಡಿವೆ. 1 ಕೋಟಿ ರೂ. ವೆಚ್ಚದಲ್ಲಿ ಬೀರೂರು ಬಿಸಿಎಂ ಹಾಸ್ಟೆಲ್‌ ಕಟ್ಟಡ ನಿರ್ಮಾಣ, ಕಡೂರು ಪ್ರವಾಸಿ ಮಂದಿರದ 1 ಕೋಟಿ ವೆಚ್ಚದ ಕಾಮಗಾರಿ ಮತ್ತು 3 ಕೋಟಿ ವೆಚ್ಚದ ನೂತನ ಕಟ್ಟಡ ನಿರ್ಮಾಣ, ಕಡೂರು ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ 1 ಕೋಟಿ ರೂ., ತಾಲೂಕು ಕ್ರೀಡಾಂಗಣ ಅಭಿವೃದ್ಧಿಗೆ 50 ಲಕ್ಷ, ಬಸವೇಶ್ವರ ವೃತ್ತದಿಂದ ಕನಕ ವೃತ್ತದ ವರೆಗೆ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಪೊಲೀಸ್‌ ಚೌಕಿ ನಿರ್ಮಾಣ, ಸಿಗ್ನಲ್‌ ಅಳವಡಿಕೆ ಸಹ ಮುಂದಿನ ದಿನಗಳಲ್ಲಿ ಆಗಲಿದೆ.

ಕೆರೆಗಳ ಅಭಿವೃದ್ಧಿ: ಐತಿಹಾಸಿಕ ಮದಗದಕೆರೆ, ವೈ.ಮಲ್ಲಾಪುರ, ಚಿಕ್ಕಪಟ್ಟಣಗೆರೆ, ಯಳ್ಳಂಬಳಸೆ, ವಿಷ್ಣುಸಮುದ್ರ ಕೆರೆಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಸೂರಾಪುರದಲ್ಲಿ ಗ್ರಾಮಸ್ಥರು ಕೆರೆಗೆ ಬೆಳ್ಳಿಕೆರೆ ಎಂದೇ ನಾಮಕರಣ ಮಾಡಿದ್ದಾರೆ.

ಒಟ್ಟಾರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಶ್ರೇಯಸ್ಸು ಯಶಸ್ಸು ಶಾಸಕರಿಗೆ ಸಲ್ಲಲಿದೆ. ರಾಜಕೀಯ ವಿರೋಧಿಗಳ ಆರೋಪ-ಪ್ರತ್ಯಾರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಅಭಿವೃದ್ಧಿಯನ್ನೇ ಮೂಲ ಮಂತ್ರವಾಗಿಸಿಕೊಂಡು ಸಾಗಿರುವ ಶಾಸಕರು ರಾಜ್ಯ ಅಫೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಿಯೂ ಆಯ್ಕೆಯಾಗಿ ಜಿಲ್ಲೆಯ ಇತಿಹಾಸದಲ್ಲಿ ತಮ್ಮ ಹೆಸರು ದಾಖಲಿಸಿದ್ದಾರೆ. ಹೊಸ ರಾಜ್ಯ ಹಣಕಾಸು ನಿಗಮದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವುದು ಇವರ ಸಾಧನೆ ಮತ್ತು ವ¤ಕ್ತಿತ್ವಕ್ಕೆ ಸಂದ ಗೌರವವಾಗಿದೆ.

ಕಡೂರು ಪಟ್ಟಣದ ರಸ್ತೆ ನಿರ್ಮಾಣ: ಪಟ್ಟಣದ ಬಸವೇಶ್ವರ ವೃತ್ತದಿಂದ ಚಿಕ್ಕಮಗಳೂರು ರಸ್ತೆವರೆಗೆ ಚತುಷ್ಪಥ ಮಾಡಿ, ಅದಕ್ಕೆ ಬಣ್ಣ ಬಣ್ಣದ ದೀಪಗಳನ್ನು ಅಳವಡಿಸಿ ಜಿಲ್ಲೆಯಲ್ಲಿಯೇ ಇಲ್ಲದಂತಹ ಬೃಹತ್‌ ರಸ್ತೆ ನಿರ್ಮಾಣ ಮಾಡಿ ಇದು ಬೆಳ್ಳಿಪ್ರಕಾಶ್‌ ಅವರಿಂದ ಮಾತ್ರ ಸಾಧ್ಯ ಎಂಬ ಹೆಗ್ಗಳಿಕೆ ಪಡೆದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ದಾರ್ಶನಿಕರ ಪ್ರತಿಮೆಗಳ ಸ್ಥಾಪನೆ: ಪಟ್ಟಣದ ಮರವಂಜಿ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ|ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಶಾಸಕ ಬೆಳ್ಳಿಪ್ರಕಾಶ್‌ ಅವರ ಕೊಡುಗೆ ಅಪಾರ. ಅದೇ ರೀತಿ ಮುಂದಿನ ದಿನಗಳಲ್ಲಿ ಶ್ರೀ ಬಸವೇಶ್ವರ ವೃತ್ತದಲ್ಲಿ ಅಶ್ವಾರೂಢ ಶ್ರೀ ಜಗಜ್ಯೋತಿ ಬಸವೇಶ್ವರರ ಬೃಹತ್‌ ವಿಗ್ರಹ ಸಹ ಇವರ ನೇತೃತ್ವದಲ್ಲಿ ಲೋಕಾರ್ಪಣೆಯಾಗಲಿದೆ. ನಾಡ ಪ್ರಭು ಶ್ರೀ ಕೆಂಪೇಗೌಡ ಮತ್ತು ಭಗೀರಥ ಮಹರ್ಷಿಗಳ ಪ್ರತಿಮೆ ನಿರ್ಮಾಣಕ್ಕೂ ಸಹಾಯ ಮಾಡಿ ಸರ್ವ ಸಮುದಾಯಗಳ ಹಿತ ಕಾಯುತ್ತ ಶಾಸಕರು ಸಮಾನತೆ ಮೆರೆದಿದ್ದಾರೆ.

ತಾಲೂಕು ಕ್ರೀಡಾಂಗಣ: ಪಟ್ಟಣದ ಡಾ|ಬಿ.ಆರ್‌. ಅಂಬೇಡ್ಕರ್‌ ಕ್ರೀಡಾಂಗಣಕ್ಕೆ ಆಧುನಿಕ ಸ್ಪರ್ಶ ನೀಡಿ ಸುತ್ತಲೂ ಕಾಂಪೌಂಡ್‌ ನಿರ್ಮಾಣ, ಹೈಮಾಸ್ಟ್‌ ಅಳವಡಿಕೆ, ಜಿಮ್‌, ಯೋಗ, ತರಬೇತಿ ನೀಡಲು ಮುಕ್ತ ಅವಕಾಶ ಕಲ್ಪಿಸಿದ್ದಾರೆ.

ರಾಜ್ಯ ಅಫೆಕ್ಸ್‌ ಬ್ಯಾಂಕ್‌ ಅಧ್ಯಕ್ಷ ಗಾದಿ; ಬೆಳ್ಳಿಪ್ರಕಾಶ್‌ಗೆ ಬಯಸದೇ ಬಂದ ಭಾಗ್ಯ
ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗಾದಿಗೆ ಪ್ರಬಲ ಆಕಾಂಕ್ಷಿಯಾಗಿದ್ದ ಕಡೂರು ಶಾಸಕ ಬೆಳ್ಳಿಪ್ರಕಾಶ್‌ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದರು. ಆದರೆ ಯಾರೂ ಸಹ ಊಹಿಸಿರದಿದ್ದ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿರುವ ಶಾಸಕರಿಗೆ ಇದು ಬಯಸದೆ ಬಂದ ಭಾಗ್ಯವಾಗಿದೆ.

ಬೆಳ್ಳಿ ಪ್ರಕಾಶ್‌ ಅವರು ತಮ್ಮ ಗಟ್ಟಿತನ, ನೇರ ನುಡಿ, ಆಗಬೇಕಾದ ಕೆಲಸ ಮಾಡುವ ಛಲ ಇಂತಹ ಹತ್ತು ಹಲವಾರು ಗುಣಗಳಿಂದ ಕಡೂರು ಕ್ಷೇತ್ರದಲ್ಲಿ ರಾಜಕೀಯ ಪಯಣ ಆರಂಭಿಸಿದರು. ಜಿ.ಪಂ. ಅಧ್ಯಕ್ಷರಾಗಿ ಬಳಿಕ ಸಹಕಾರಿ ಕ್ಷೇತ್ರಕ್ಕೆ ಕಾಲಿಟ್ಟ ನಂತರದ ದಿನಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆದು ಜಿಲ್ಲಾ ಕೇಂದ್ರ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಗೊಂಡರು. ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಬಿಜೆಪಿಯ ಹಿರಿಯರ ಮಾತಿಗೆ ಮನ್ನಣೆ ನೀಡಿ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದಿದ್ದ ಬೆಳ್ಳಿಪ್ರಕಾಶ್‌ ಅವರಿಗೆ ಮುಂದೆ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕಿನ ಅಧ್ಯಕ್ಷ ಗಾದಿಯೇ ಒಲಿಯಿತು. ಇದೇ ಮೊದಲ ಬಾರಿಗೆ ಅಪೆಕ್ಸ್‌ ಬ್ಯಾಂಕಿನ ಅಧ್ಯಕ್ಷರಾಗಿ ಹೊರ ಹೊಮ್ಮಿದ ಚಿಕ್ಕಮಗಳೂರು ಜಿಲ್ಲೆಯ ಮೊದಲ ವ್ಯಕ್ತಿ ಹಾಗೂ ಶಕ್ತಿಯಾಗಿದ್ದಾರೆ.
ನೂರಾರು ಕನಸುಗಳನ್ನು ಕಟ್ಟಿಕೊಂಡು ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಹುದ್ದೆಯನ್ನು ಅಲಂಕರಿಸಿರುವ ಶಾಸಕ ಬೆಳ್ಳಿಪ್ರಕಾಶ್‌ ವಿದೇಶ ಪ್ರವಾಸಗಳನ್ನು ಕೈಗೊಂಡು ಅಲ್ಲಿನ ಕೆಲವು ಉತ್ತಮ ಅಂಶಗಳನ್ನು ಇಲ್ಲಿಯ ಸಹಕಾರ ಕ್ಷೇತ್ರದಲ್ಲಿ ಅಳವಡಿಸಿ ಸಾಧನೆ ಮಾಡುತ್ತಿದ್ದಾರೆ.

ಕಡೂರು ಕ್ಷೇತ್ರದ ರಾಜಕೀಯ ಇತಿಹಾಸದ ಪುಟಗಳಲ್ಲಿ ಶಾಸಕರಾದವರು ನಿಗಮ-ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗುವುದೂ ಕಷ್ಟವಾಗಿತ್ತು. ಇದುವರೆಗೂ ಯಾರೊಬ್ಬರೂ ಸಚಿವರಾಗಿ ಆಯ್ಕೆಯಾಗಿರುವ ಇತಿಹಾಸ ಕ್ಷೇತ್ರದಲ್ಲಿಲ್ಲ. ಆದರೆ ಬೆಳ್ಳಿಪ್ರಕಾಶ್‌ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಿ ನೂತನ ಇತಿಹಾಸ ಬರೆದಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

ಆರೋಗ್ಯಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ: ಹೇಳದೆ ಮಾಡುವವನು ರೂಢಿಯೊಳು ಉತ್ತಮನು ಎನ್ನುವಂತೆ ಬೆಳ್ಳಿಪ್ರಕಾಶ್‌ ಅವರು ಕೋವಿಡ್‌ ಅಲೆ ಸಮಯದಲ್ಲಿ ತಮ್ಮದೇ ಆದ ಪರಿಮಿತಿ ಒಳಗೆ ಕ್ಷೇತ್ರದ ಜನರ ಆರೋಗ್ಯಕ್ಕಾಗಿ ಅಹರ್ನಿಶಿ ಶ್ರಮಿಸಿ ತಮ್ಮ ನಡೆ ಕ್ಷೇತ್ರದ ಜನರ ಆರೋಗ್ಯದೆಡೆಗೆ ಎಂಬಂತೆ ಸಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಕೊರೊನಾ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ನಲುಗಿದ ಕ್ಷೇತ್ರದ ಜನತೆಗೆ ಮೊದಲ ಹಂತದಲ್ಲಿ ಆಹಾರ ಕಿಟ್‌ಗಳು ಎರಡನೇ ಅಲೆಯಲ್ಲಿ ಔಷಧ, 1 ಕೋಟಿ ರೂ. ವೆಚ್ಚದಲ್ಲಿ ದಾನಿಗಳ ಸಹಾಯದಿಂದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆಮ್ಲಜನಕ ಘಟಕ ಸ್ಥಾಪನೆಗೆ ಒತ್ತು ನೀಡಿದ್ದು. ಮೂರನೇ ಅಲೆ ತಡೆಗಟ್ಟಲು ತಾಲೂಕು ಆಡಳಿತ, ಆರೋಗ್ಯ ಇಲಾಖೆಯೊಂದಿಗೆ ಹಾಗೂ ಡಾ|ರವಿಕುಮಾರ್‌, ಡಾ|ದೀಪಕ್‌ ಅವರೊಂದಿಗೆ ಪ್ರತಿದಿನ ಚರ್ಚಿಸಿ ಕೊರೊನಾ ತಡೆಗೆ ಜಾಗೃತಿ ವಹಿಸಿದರು.

ಲಾಕ್‌ಡೌನ್‌ ಸಮಯದಲ್ಲಿ ಆಹಾರ ಸಮಸ್ಯೆ ತಲೆದೋರಿದಾಗ ಶಾಸಕರು ತಮ್ಮ ಕಚೇರಿಯಲ್ಲಿ ಬೇಳೆ ಕಾಳುಗಳು, ಅಕ್ಕಿ, ತರಕಾರಿ, ಸಾಂಬಾರ ಪದಾರ್ಥಗಳನ್ನೊಳಗೊಂಡ
ಕಿಟ್‌ಗಳನ್ನು ಸಿದ್ಧಪಡಿಸಿ ಕ್ಷೇತ್ರದ ಬಡವರು ಮತ್ತು ದೀನ ದಲಿತರಿಗೆ ವಿತರಿಸಿದರು. ಕ್ಷೇತ್ರದ ಜನರ ಪಾಲಿಗೆ ಸಂಜೀವಿನಿಯಾದ ಶಾಸಕರು ಹಂತಹಂತವಾಗಿ ತಾಲೂಕಿನ ಆಸ್ಪತ್ರೆಗೆ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಅಗತ್ಯವಿರುವ ಔಷಧ, ಪರಿಕರಗಳನ್ನು ನೀಡಿದರು. ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 30 ಲಕ್ಷ ಬೆಲೆಯ ಅತ್ಯಾಧುನಿಕ ಆ್ಯಂಬುಲೆನ್ಸ್‌ ನೀಡಿದ್ದಲ್ಲದೆ, ತಮ್ಮ ಆತ್ಮೀಯ ಮಿತ್ರ ಬೆಂಗಳೂರು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರಿಗೆ ಸ್ಥಿತಿ ಮನವರಿಕೆ ಮಾಡಿ 8 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ತರುವಲ್ಲಿ ಶಾಸಕ ಬೆಳ್ಳಿಪ್ರಕಾಶ್‌ ಅವರು ಯಶಸ್ವಿಯಾದರು. ಒಟ್ಟಾರೆ 34 ಆಮ್ಲಜನಕ ಸಾಂದ್ರಕಗಳು ಕೆಲಸ ನಿರ್ವಹಿಸಿದ್ದರಿಂದ ರೋಗಿಗಳ ಆರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಮುತುವರ್ಜಿ ವಹಿಸಿದರು. ಅಲ್ಲದೆ ಆಸ್ಪತ್ರೆಯ ಆವರಣದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಆಮ್ಲಜನಕದ ಘಟಕ ನಿರ್ಮಾಣಕ್ಕೆ ಮುಂದಾದರು. ಇದು ಕ್ಷೇತ್ರದ ಜನರ ಪಾಲಿಗೆ ವರ‌ವಾಗಿದೆ. ‘ಜನರ ಆರೋಗ್ಯದೆಡೆಗೆ ತಮ್ಮ ನಡೆ’ ಎಂಬುದನ್ನು ಶಾಸಕರು ಸಾಬೀತು ಮಾಡಿ ಕ್ಷೇತ್ರದ ಜನರ ಪಾಲಿಗೆ ಸಂಜೀವಿನಿಯಾದರು.

ಮನುಷ್ಯರ ಆರೋಗ್ಯ ಸುಧಾರಣೆ ಒಂದೆಡೆಯಾದರೆ ಮೂಕ ಪ್ರಾಣಿಗಳಾದ ಗೋವುಗಳಿಗೆ ಮೇವು ಒದಗಿಸುವುದು ಶಾಸಕರ ಮುಂದಿದ್ದ ಸವಾಲು. ಲಾಕ್‌ಡೌನ್‌ ಸಮಯದಲ್ಲಿ ಜಾನುವಾರುಗಳಿಗೆ ಮೇವು ಸಿಗುತ್ತದೆಯೊ ಇಲ್ಲವೊ ಎಂದು ಬೆಳ್ಳಿಪ್ರಕಾಶ್‌ ಅವರು ಬಾಣವಾರ ಮತ್ತು ಕಡೂರು ಮಧ್ಯೆ ಇರುವ ಭಗವಾನ್‌ ಮಹಾವೀರ ಗೋಶಾಲೆಗೆ ತೆರಳಿ ಅಲ್ಲಿನ ಜಾನುವಾರುಗಳಿಗೆ ಹಸಿ ಮೇವು ಹಾಗೂ ಬೂಸ ಉಣಬಡಿಸಿದ್ದು ಅವರ ಅಂತಃಕರಣಕ್ಕೆ ಸಾಕ್ಷಿ. ಬೆಳ್ಳಿಪ್ರಕಾಶ್‌ ವಿಧಾನಸಭೆಯಲ್ಲಿಯೂ ಅನೇಕ ಪ್ರಶ್ನೆಗಳನ್ನು ಕೇಳುವುದರ ಮೂಲಕ ಚರ್ಚಿಸುವುದರ ಮೂಲಕ ಕ್ಷೇತ್ರದ ಜನರ ಮನಗೆದ್ದಿದ್ದಾರೆ. ಬೆಳ್ಳಿ ನುಡಿದರೆ ಸಿಂಗಟಗೆರೆಯ ಶ್ರೀ ಕಲ್ಲೇಶಪ್ಪ ವರ ನೀಡಿದಂತೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.

– ಎ.ಜೆ.ಪ್ರಕಾಶಮೂರ್ತಿ 

Advertisement

Udayavani is now on Telegram. Click here to join our channel and stay updated with the latest news.

Next