ಶಿರಹಟ್ಟಿ: ತಾಲೂಕಿನ ಬೆಳ್ಳಟ್ಟಿ ಬಸ್ ನಿಲ್ದಾಣದಲ್ಲಿ ಶೌಚಾಲಯ ಪೈಪ್‌ಲೈನ್ ಒಡೆದು ಬ್ಲಾಕ್ ಆಗಿದ್ದರಿಂದ ಮಲಮೂತ್ರ ರಸ್ತೆಯುದ್ದಕ್ಕೂ ಹರಿಯುತ್ತಿದ್ದು, ಅವ್ಯವಸ್ಥೆಯ ಆಗರವಾಗಿದೆ.
ಬೆಳ್ಳಟ್ಟಿ ಸುಮಾರು 10ಸಾವಿರ ಜನಸಂಖ್ಯೆ ಹೊಂದಿದ್ದು, ವೇಗವಾಗಿ ಬೆಳೆಯುತ್ತಿದೆ. ಇಲ್ಲಿ ದಿನದಿಂದ ದಿನಕ್ಕೆ ವ್ಯಾಪಾರು-ವಹಿವಾಟು ಹೆಚ್ಚುತ್ತಿದೆ. ಆದರೆ ಬಸ್ ನಿಲ್ದಾಣದಲ್ಲಿರುವ ಗಲೀಜು ಮಾತ್ರ ಗ್ರಾಮಸ್ಥರ ನಿದ್ದೆಗೆಡಿಸಿದೆ.
ಮೂಗು ಮುಚ್ಚಕೊಂಡೇ ಹೋಗಬೇಕು: ಗ್ರಾಮದ ಕೇಂದ್ರ ಸ್ಥಳದಲ್ಲಿ ಬಸ್ ನಿಲ್ದಾಣ ಇರುವುದರಿಂದ ಸುತ್ತಮುತ್ತಲಿನ 30-35 ಗ್ರಾಮಗಳ ಜನರು ನಿತ್ಯ ತಮ್ಮ ವ್ಯಾಪಾರ-ವಹಿವಾಟು ಹಾಗೂ ದೈನಂದಿನ ಕೆಲಸ ಕಾರ್ಯಗಳಿಗೆ ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿಂದ ಗ್ರಾಮದ ಯಾವುದೇ ಭಾಗಗಳಿಗೆ ಹೋಗಬೇಕೆಂದರೂ ಇಲ್ಲಿ ರಸ್ತೆಯಲ್ಲಿ ಹರಿಯುತ್ತಿರುವ ಗಲೀಜನ್ನು ತುಳಿದೇ ಹೋಗಬೇಕಾದ ಅನಿವಾರ್ಯತೆ ಬಂದಿದೆ. ಅದು ಅಲ್ಲದೇ ಇಲ್ಲಿ ನಡೆದುಕೊಂಡು ಹೋಗುವವರು ಮೂಗು ಮುಚ್ಚಿಕೊಂಡು ಅಕಾರಿಗಳಿಗೆ ಶಾಪ ಹಾಕುತ್ತ ಸಂಚರಿಸುತ್ತಿದ್ದಾರೆ.
ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ: ಮೂತ್ರ ವಿಸರ್ಜನೆ ಪೈಪ್‌ಲೈನ್ ದುರಸ್ತಿಗೊಳಿಸಿ ಶುಚಿತ್ವ ಕಾಪಾಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ವಿನಂತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ತಮ್ಮ ಮೊಬೈಲ್ನ್ನು ತಮ್ಮ ಸಿಬ್ಬಂದಿ ಕೈಯಲ್ಲಿ ನೀಡಿ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಈ ಕೂಡಲೇ ಇದನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲದೇ ಹೋದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗ್ರಾಪಂ ಸದಸ್ಯರು ಎಚ್ಚರಿಸಿದ್ದಾರೆ.
ಎಚ್ಚೆತ್ತುಕೊಳ್ಳುವುದು ಅವಶ್ಯ: ಸದ್ಯ ಮುಂಗಾರು ಮಳೆ ಪ್ರವೇಶವಾಗಿದ್ದರಿಂದ ಆಗಾಗ ಮಳೆ ಬರುತ್ತಿರುವುದರಿಂದ, ರಸ್ತೆಯುದ್ದಕ್ಕೂ ಈ ಗಲೀಜು ನೀರು ಹರಿದುಕೊಂಡು ಹೋಗುತ್ತಿರುವ ಪರಿಣಾಮ ಸಾರ್ವಜನಿಕರ ಆರೋಗ್ಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಸಾರಿಗೆ ಸಂಸ್ಥೆ ಈ ಕುರಿತು ಎಚ್ಚೆತ್ತುಕೊಳ್ಳುವುದು ಅವಶ್ಯವಿದೆ.
•ಪ್ರಕಾಶ.ಶಿ.ಮೇಟಿ