ಬಳ್ಳಾರಿ: ನಾ ಖಾವುಂಗಾ, ಖಾನೆ ದೂಂಗಾ ಎನ್ನುತ್ತಿದ್ದ ನರೇಂದ್ರ ಮೋದಿ ಜನಾರ್ದನ ರೆಡ್ಡಿಯವರನ್ನು ಯಾಕೆ ಸೇರಿಸಿಕೊಂಡರು. ಲೂಟಿ ಮಾಡಿ ಜೈಲಿಗೆ ಹೋಗಿದ್ದ ರೆಡ್ಡಿ ಅವರನ್ನು ಪಕ್ಷಕ್ಕೆ ಯಾಕೆ ಸೇರಿಸಿಕೊಂಡಿದ್ದೀರಿ. ನರೇಂದ್ರ ಮೋದೀಜಿ ಕ್ಯೂ ಐಸೆ ಬೋಲತಾ ಹೈ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಸಂಡೂರು ಉಪಚುನಾವಣೆ ನಿಮಿತ್ತ ಬೊಮ್ಮಘಟ್ಟದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಇದೇ ಜನಾರ್ಧನರೆಡ್ಡಿ ಬಳ್ಳಾರಿಗೆ ಕಾಲಿಟ್ಟು ನೋಡಿ ಎಂದಿದ್ದರು. ರಿಪಬ್ಲಿಕ್ ಬಳ್ಳಾರಿ ಮಾಡಿದವರು ಯಾರು? ಅಂತವರಿಗೆ ವೋಟು ಕೊಡುತ್ತೀರಾ? ಬಿಜೆಪಿ ಎರಡು ಸಲ ಅಧಿಕಾರಕ್ಕೆ ಬಂದರೂ ಮೆಜಾರಿಟಿ ಬಂದಿತ್ತಾ? ಯಾವತ್ತೂ ಜನ ಆಶೀರ್ವಾದ ಮಾಡಿಲ್ಲ. ಜನಾರ್ದನ ರೆಡ್ಡಿ ಉಪಯೋಗಿಸಿಕೊಂಡು ಆಪರೇಷನ್ ಕಮಲ ಮಾಡಿದರು. 2008, 2019ರಲ್ಲಿ ಕೋಟ್ಯಾಂತರ ಖರ್ಚು ಮಾಡಿ ಅಧಿಕಾರಕ್ಕೆ ಬಂದರು. ಅಧಿಕಾರದಲ್ಲಿದ್ದ ಯಡಿಯೂರಪ್ಪ, ಬೊಮ್ಮಾಯಿ ಏನೂ ಮಾಡಲಿಲ್ಲ. ಇವರಿಗೆ ಮಾನ ಮರ್ಯಾದೆ ಇದೆಯಾ? ಬಡವರ ಬಗ್ಗೆ ಬಿಜೆಪಿಯವರು ಒಂದೂ ಯೋಜನೆ ಮಾಡಲಿಲ್ಲ. ಏನೂ ಮಾಡದ ಅವರಿಗೆ ಮತ ಕೊಡಬೇಕಾ ಎಂದು ಪ್ರಶ್ನಿಸಿದರು.
ನಾವು 2023ರ ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಜಾರಿ ಮಾಡುವುದಾಗಿ ಹೇಳಿದ್ದೆವು. ಈಗ ಮಾಡಿದ್ದೇವೆ, ಸುಮ್ಮನೆ ಕೂತ್ರೆ ಹೆಂಗವ್ವಾ ತಾಯಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
3.50 ಕೋಟಿ ಹೆಣ್ಣು ಮಕ್ಕಳು ಉಚಿತವಾಗಿ ಸರ್ಕಾರಿ ಬಸ್ ನಲ್ಲಿ ತಿರುಗಾಡಬಹುದು. ಬಿಜೆಪಿಯವರು ಮಾಡಿದ್ರಾ? ಅವರಿಗೆ ವೋಟ್ ಹಾಕ್ತೀರಾ? ಕಾಂಗ್ರೆಸ್ ಮಾತ್ರ ವೋಟ್ ಹಾಕಬೇಕು ಎಂದು ನೀವು ಎಲ್ಲರಿಗೂ ಹೇಳಬೇಕು. ಮಹಿಳೆಯರಿಗೆ ಪ್ರತೀ ತಿಂಗಳು ಎರಡು ಸಾವಿರ ಕೊಡುತ್ತಿರುವುದು ಯಾರು? ನೀವು ಎಂದು ಜನ ಹೇಳಿದಾಗ ಮತ್ತೆ ನಮಗೆ ವೋಟ್ ಹಾಕಿ ಎಂದು ಸಿಎಂ ಹೇಳಿದರು.
5 ಕೆಜಿ ಅಕ್ಕಿ ಹೆಚ್ಚಿಗೆ ಕೊಡುತ್ತೇವೆಂದರೂ ಬಿಜೆಪಿಯವರು ಕೊಡಲಿಲ್ಲ. ಅವರ ಮನೆ ಹಾಳಾಗ ಅಕ್ಕಿ ಕೊಡಲಿಲ್ಲ, ಹೀಗಾಗಿ 175 ರೂ ಪ್ರತೀ ಬಡವರಿಗೆ ಕೊಡ್ತಿದ್ದೇವೆ. 1.61 ಕೋಟಿ ಕುಟುಂಬಗಳಿಗೆ ಗೃಹ ಜ್ಯೋತಿ ಹೆಸರಲ್ಲಿ ಉಚಿತ ವಿದ್ಯುತ್ ಕೊಡ್ತಿದ್ದೇವೆ. ಬಿಜೆಪಿಯವರು ಎಲ್ಲೂ ಮಾಡಿಲ್ಲ, ನಾವು ಮಾತ್ರ ಮಾಡಿರುವುದು. ಯಾರಿಗೆ ಮತ ಹಾಕಬೇಕು ನೀವೇ ಯೋಚನೆ ಮಾಡಿ. ಅಧಿಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್ ನಲ್ಲೇ ತೀರ್ಮಾನ ಮಾಡಿದ್ದೆವು. ನಾವು ಅಧಿಕಾರಕ್ಕೆ ಬಂದ 7 ತಿಂಗಳಲ್ಲಿ ಎಲ್ಲಾ ಭರವಸೆ ಈಡೇರಿಸಿದ್ದೆವು ಎಂದರು.
ಸಂಡೂರಿನಲ್ಲಿ ಅಭಿವೃದ್ಧಿ ಆಗಬೇಕಾದರೆ ಅನ್ನಪೂರ್ಣ ತುಕಾರಾಂ ಗೆಲ್ಲಬೇಕು. ಅನ್ನಪೂರ್ಣ ಗೆದ್ದರೆ ಸಂಡೂರು ಅಭಿವೃದ್ಧಿ ಮಾಡುವುದಕ್ಕೆ ಸಾಧ್ಯವಾಗ್ತದೆ. ಗಂಡ, ಹೆಂಡತಿ ಇಬ್ಬರೂ ಸೇರಿದರೆ ಒಳ್ಳೆ ಕೆಲಸವಾಗುತ್ತದೆ. ನನ್ನ ಸ್ನೇಹಿತ ರುದ್ರಪ್ಪ ಎಂದಿದ್ದರು, ಅವರ ಮಗಳು ಅನ್ನಪೂರ್ಣಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.