ಬಳ್ಳಾರಿ: ಕೊರೊನಾ ವೈರಸ್ ಬಗ್ಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ವೈರಸ್ ಬಗ್ಗೆ ಗ್ರಾಮೀಣ ಜನರಲ್ಲಿರುವ ಆತಂಕ ದೂರ ಮಾಡಬೇಕು ಎಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೊರೊನಾ ವೈರಸ್ ಕುರಿತು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುವ ಕುರಿತು ಶನಿವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಆತಂಕ ಬೇಡವಾದರೂ ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ವೈರಸ್ ಬಗ್ಗೆ ಹೆಚ್ಚಾಗಿ ಜಾಗೃತಿ ಮೂಡಿಸಬೇಕು. ಗ್ರಾಮೀಣ ಭಾಗದಲ್ಲಿ ಡಂಗೂರವೇ ಮಾಧ್ಯಮ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಡಂಗೂರ ಸಾರಿಸಲು ಕ್ರಮಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು. ಅದಕ್ಕಾಗಿ ಶಾಸಕರ ಅನುದಾನವನ್ನು ಬಳಸಿಕೊಂಡು ಅಗತ್ಯ ಕ್ರಮಕೈಗೊಳ್ಳಬೇಕು. ಕರಪತ್ರ ಮುದ್ರಿಸಿ ಹಂಚಬೇಕು. ಅಗತ್ಯವಿರುವ ಕಡೆ ಬ್ಯಾನರ್, ಫ್ಲೆಕ್ಸ್ ಗಳನ್ನು ಅಳವಡಿಸಬೇಕು. ಆರೋಗ್ಯ ಸಚಿವರ ತವರಲ್ಲೇ ಕೊರೊನಾ ವೈರಸ್ ಪ್ರಕರಣ ದಾಖಲಾದರೆ ನಮಗೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಎಲ್ಲ ಕ್ರಮಗಳನ್ನು ಕೈಗೊಂಡು ಜನರಲ್ಲಿ ತಿಳಿವಳಿಕೆ ಮೂಡಿಸಬೇಕು. ಅದಕ್ಕಾಗಿ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದವರು ಕೋರಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಎಲ್. ಜನಾರ್ದನ್ ಮಾತನಾಡಿ, ದೇಶದಲ್ಲೇ ಕೇರಳ ರಾಜ್ಯದಲ್ಲಿ ಅತಿಹೆಚ್ಚು 19 ಪ್ರಕರಣಗಳು ಪತ್ತೆಯಾಗಿವೆ. ಉತ್ತರ ಪ್ರದೇಶದಲ್ಲಿ 11, ಮಹಾರಾಷ್ಟ್ರದಲ್ಲಿ 14, ಕರ್ನಾಟಕ ರಾಜ್ಯದಲ್ಲಿ 6 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಈಗಾಗಲೇ ಒಬ್ಬರು ಮೃತಪಟ್ಟಿದ್ದಾರೆ. ಕೊರೊನಾ ವೈರಸ್ ಶಂಕಿತವೆಂದು ಗೊತ್ತಾಗುತ್ತಿದ್ದಂತೆ 14 ದಿನಗಳ ಕಾಲ ಪ್ರತ್ಯೇಕವಾಗಿ ಚಿಕಿತ್ಸೆ ನೀಡಬೇಕು. ದೇಶ ವಿದೇಶದಿಂದ ಬರುವವರಿಗೆ ರಾಜ್ಯದ ಮಂಗಳೂರು, ಕಾರವಾರ ಜಿಲ್ಲೆಗಳಲ್ಲಿ ತಪಾಸಣಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಐದು ಕಡೆ ಪ್ರಯೋಗ ಶಾಲೆಗಳನ್ನು ತೆರೆಯಲಾಗಿದೆ. ಕೆಮ್ಮು, ಜ್ವರ, ನಗೆಡಿ ಇರುವವರು ಮಾತ್ರ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ಸ್ವಚ್ಚತೆ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಕೊರೊನಾ ವೈರಸ್ ಕುರಿತ ಜಾಗೃತಿ ಪೋಸ್ಟರ್‌ನ್ನು ಶಾಸಕ ನಾಗೇಂದ್ರ ಇದೇ ವೇಳೆ ಬಿಡುಗಡೆಗೊಳಿಸಿದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ಎಸ್.ಆರ್.ಲೀಲಾವತಿ, ಉಪಾಧ್ಯಕ್ಷೆ ಪುಷ್ಪಾವತಿ, ಇಒ ಮಡಗಿನ ಬಸಪ್ಪ, ಸಹಾಯಕ ನಿರ್ದೇಶಕ ಆರ್.ಕೆ. ಬಸವರಾಜ್, ಡಾ| ಎನ್. ಆರ್.ಶ್ರೀಧರ್, ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಈಶ್ವರ್ ದಾಸಪ್ಪನವರ ಸೇರಿದಂತೆ ಹಲವರು ಇದ್ದರು.