ಬಳ್ಳಾರಿ: ಸುಪ್ರೀಂಕೋರ್ಟ್ ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ಹಿನ್ನೆಲೆಯಲ್ಲಿ ವಿಜಯನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅನರ್ಹ ಶಾಸಕ ಆನಂದ್ ಸಿಂಗ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಮುಂದಿನ ನಡೆ ಕುತೂಹಲ ಮೂಡಿಸಿದೆ.
Advertisement
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಆನಂದ್‌ಸಿಂಗ್ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿದ್ದ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ ಕೇವಲ 8228 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಈ ಸೋಲು ಕ್ಷೇತ್ರದಲ್ಲಿ ಗವಿಯಪ್ಪರಿಗೆ ಅನುಕಂಪದ ಅಲೆ ಸೃಷ್ಟಿಸಿದ್ದು, ಮುಂದಿನ ಚುನಾವಣೆಗಳಲ್ಲಿ ಗೆಲುವಿನ ವಿಶ್ವಾಸ ಮೂಡಿಸಿತ್ತು. ಆ ಹಿನ್ನೆಲೆಯಲ್ಲಿ ಅನರ್ಹ ಶಾಸಕ ಆನಂದ್‌ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಗವಿಯಪ್ಪರಿಗೆ ಬಿಜೆಪಿ ಟಿಕೆಟ್ ಲಭಿಸುವ ನಿರೀಕ್ಷೆ ಹೊಂದಿದ್ದರು. ಒಂದು ವೇಳೆ ಸುಪ್ರೀಂಕೋರ್ಟ್ ನಲ್ಲಿ ಆನಂದ್‌ಸಿಂಗ್ ವಿರುದ್ಧ ತೀರ್ಪು ಬಂದರೂ ಪಕ್ಷದ ರಾಜ್ಯ ವರಿಷ್ಠರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ನನ್ನ ಪರಿಗಣಿಸಲಿದ್ದಾರೆ ಎಂಬ ವಿಶ್ವಾಸವನ್ನೂ ಹೊಂದಿದ್ದರು. ಅದಕ್ಕಾಗಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟವಾಗುವುದನ್ನೇ ಕಾದುಕುಳಿತಿದ್ದರು.
Related Articles
Advertisement
ಇದು ಕ್ಷೇತ್ರದಲ್ಲಿ ಸಿಂಗ್ ಸುಲಭವಾಗಿ ಗೆಲುವು ಸಾಧಿಸುವಲ್ಲಿ ಸಹಕಾರಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಂದಷ್ಟು ವಿರೋಧಿ ಅಲೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಗೆಲುವಿನ ಅಂತರ ಕಡಿಮೆಯಾಯಿತು. ಇನ್ನು ಕ್ಷೇತ್ರದಲ್ಲಿ ಆನಂದ್ ಸಿಂಗ್‌ಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿ ಎಂದರೆ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ. ಆರ್ಥಿಕವಾಗಿಯೂ ಸಮಬಲರಾಗಿರುವ ಗವಿಯಪ್ಪ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸು, ಕಾರ್ಯಕರ್ತರ ಬಲವನ್ನು ಹೊಂದಿದ್ದಾರೆ. ಗವಿಯಪ್ಪಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಸಿಂಗ್‌ಗೆ ಸೂಕ್ತ ಎದುರಾಳಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಆಕಾಂಕ್ಷಿಗಳು: ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿ ಸುವ ಆಕಾಂಕ್ಷಿಗಳ ಪಟ್ಟಿ ಈಗಾಗಲೇ ಸಿದ್ಧಗೊಂಡಿದೆ. ಕ್ಷೇತ್ರದಲ್ಲಿ ಮುಸ್ಲಿಂ, ಕುರುಬ, ಸಾಮಾನ್ಯ ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಮುಸ್ಲಿಂ ಸಮುದಾಯದಿಂದ ಶಿರಾಜ್‌ಶೇಖ್, ಎಚ್. ಎನ್.ಎಫ್.ಇಮಾಮ್ ನಿಯಾಜಿ, ಕುರುಬ ಸಮುದಾಯದಿಂದ ಕೆ.ಎಸ್.ಎಲ್.ಸ್ವಾಮಿ, ಕಲ್ಲುಕಂಬ ಪಂಪಾಪತಿ, ಸಾಮಾನ್ಯದಿಂದ ವೆಂಕಟರಾವ್ ಘೋರ್ಪಡೆ ಅವರು ಆಕಾಂಕ್ಷಿಗಳಾಗಿದ್ದಾರೆ.
ಜತೆಗೆ ಮಾಜಿ ಶಾಸಕ ಎಚ್.ಆರ್.ಗವಿಯಪ್ಪರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವ ತೆರೆಮರೆಯ ಪ್ರಯತ್ನಗಳು ನಡೆದಿವೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ಮುಗಿದಿದೆ ಎನ್ನಲಾಗುತ್ತಿದ್ದು, ಕಾಂಗ್ರೆಸ್ ಟಿಕೆಟ್ ಯಾರಿಗೆ ಲಭಿಸಲಿದೆ ಎಂಬುದು ಕಾದು ನೋಡಬೇಕಾಗಿದೆ.