Advertisement

ವಿಜಯನಗರದಲ್ಲಿ ಬೆಟ್ಟಿಂಗ್‌ ಜೋರು

12:25 PM Dec 08, 2019 | |

„ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆ ಫಲಿತಾಂಶ ಹೊರಬೀಳಲು ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿರುವ ಬೆನ್ನಲ್ಲೇ ಬೆಟ್ಟಿಂಗ್‌ ದಂಧೆಯೂ ಜೋರಾಗಿದೆ.

Advertisement

ಜಿಲ್ಲೆಯ ವಿಜಯನಗರ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಫಲಿತಾಂಶ ಕುತೂಹಲ ಮೂಡಿಸಿದೆ. ಆನಂದ್‌ಸಿಂಗ್‌ ಸ್ಥಳೀಯ ಅಭ್ಯರ್ಥಿ ಎಂಬ ಕಾರಣಕ್ಕೆ ಉಪಚುನಾಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಸಿಂಗ್‌ ಬೆಂಬಲಿಗರು ಕಾಂಗ್ರೆಸ್‌ ಪರ ಬೆಟ್‌ ಕಟ್ಟುವವರನ್ನು ಎದುರು ನೋಡುತ್ತಿದ್ದಾರೆ. ಲಕ್ಷ ರೂ.ಗಳಿಗೆ ಒಂದೂವರೆ ಲಕ್ಷ ರೂ. ನೀಡಲು ಆನಂದ್‌ಸಿಂಗ್‌ ಬೆಂಬಲಿಗರು ಸಿದ್ಧರಾಗಿದ್ದಾರೆ. ಸಿಂಗ್‌ ಪರ ಬೆಟ್‌ ಕಟ್ಟುವವರ ಸಂಖ್ಯೆ ಹೆಚ್ಚಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರವಾಗಿ ಬೆಟ್‌ ಕಟ್ಟುವವರೇ ಸಿಗುತ್ತಿಲ್ಲ.

ಹಾಗಾಗಿ ಕಾಂಗ್ರೆಸ್‌ ಪರ ಬೆಟ್‌ ಕಟ್ಟಲು ಮುಂದೆ ಬಂದವರಿಗೆ ಬಿಜೆಪಿಯ ಆನಂದ್‌ಸಿಂಗ್‌ ಬೆಂಬಲಿಗರು ಭರ್ಜರಿ ಆಫರ್‌ಗಳನ್ನು ನೀಡುತ್ತಿದ್ದಾರೆ ಎನ್ನಲಾಗುತ್ತಿದೆ.

ಬೆಟ್ಟಿಂಗ್‌ ಬುಕ್ಕಿಗಳ ಲೆಕ್ಕಾಚಾರ: ಬಿಜೆಪಿ-ಕಾಂಗ್ರೆಸ್‌ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿರುವ ಬೆಟ್ಟಿಂಗ್‌ ಬುಕ್ಕಿಗಳು, ಉಪಚುನಾವಣೆಯಲ್ಲಿ ಉಭಯ ಪಕ್ಷಗಳ ಅಭ್ಯರ್ಥಿಗಳ ಪ್ಲಸ್‌-ಮೈನಸ್‌ಗಳನ್ನು ಆಧರಿಸಿ ಬೆಟ್ಟಿಂಗ್‌ ಆಡಲು ಮುಂದಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಆನಂದ್‌ಸಿಂಗ್‌ ಮೂಲತಃ ಸ್ಥಳೀಯರು. ಜನರಿಗೂ ಚಿರಪರಿಚಿತರು. ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಜನರ ನಾಡಿಮಿಡಿತ ಅರಿತಿದ್ದಾರೆ. ಮೇಲಾಗಿ ತರಕಾರಿ ಮಾರುಕಟ್ಟೆಗೆ ಸುಸಜ್ಜಿತವಾದ ಶೆಡ್‌ ನಿರ್ಮಿಸಿರುವುದು ಸೇರಿದಂತೆ ಕೆಲವೊಂದು ಅಭಿವೃದ್ಧಿ ಕಾರ್ಯಗಳನ್ನೂ ಮಾಡಿದ್ದಾರೆ.

ಇವೆಲ್ಲದಕ್ಕೂ ಮುಖ್ಯವಾಗಿ ಕ್ಷೇತ್ರದಲ್ಲಿ ಈ ಬಾರಿ ಮತದ ಮೌಲ್ಯವನ್ನು ವೃದ್ಧಿಸಿದ್ದಾರೆ. ಹೀಗಾಗಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್‌ಸಿಂಗ್‌ ಗೆಲುವು ನಿಶ್ಚಿತ ಎಂಬುದು ಬೆಟ್ಟಿಂಗ್‌ಗಳ ಲೆಕ್ಕಾಚಾರವಾಗಿದೆ.

Advertisement

ಈ ಹಿನ್ನೆಲೆಯಲ್ಲಿ ಬೆಟ್ಟಿಂಗ್‌ ಬುಕ್ಕಿಗಳು ಆನಂದ್‌ಸಿಂಗ್‌ ಪರ ಬೆಟ್‌ ಕಟ್ಟಲು ಮುಂದೆ ಬಂದಿದ್ದು, ಕಾಂಗ್ರೆಸ್‌ ಪರ ಬೆಟ್‌ ಕಟ್ಟಲು ಮುಂದೆ ಬರುವವರಿಗೆ ಆಫರ್‌ಗಳನ್ನು ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌, ಜೆಡಿಎಸ್‌ ಸ್ಥಳೀಯರಲ್ಲ; ಇನ್ನು ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೆಂಕಟರಾವ್‌ ಘೋರ್ಪಡೆ ಮೂಲತಃ
ಸಂಡೂರಿನವರಾಗಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಎನ್‌. ಎಂ.ನಬಿ  ಕೂಡ್ಲಿಗಿ ತಾಲೂಕಿನವರಾಗಿದ್ದಾರೆ. ಕೇವಲ ರಾಜಕೀಯವಾಗಿಯಷ್ಟೇ ಕಾಣಿಸಿಕೊಂಡಿರುವ ಈ ಇಬ್ಬರು ಅಭ್ಯರ್ಥಿಗಳು ಕ್ಷೇತ್ರದ ಮತದಾರರಿಗೆ ಅಷ್ಟಾಗಿ ಪರಿಚಿತರಲ್ಲ. ಇದು ಇವರ ಮೊದಲ ಮೈನಸ್‌ ಪಾಯಿಂಟ್‌. ಅಲ್ಲದೇ, ಕಾಂಗ್ರೆಸ್‌ ಅಭ್ಯರ್ಥಿ ಪರ ಮಾಜಿ ಸಿಎಂ ಸಿದ್ದರಾಮಯ್ಯ, ಚುನಾವಣಾ ಉಸ್ತುವಾರಿ ಬಸವರಾಜ ರಾಯರಡ್ಡಿ, ಮಾಜಿ ಸಂಸದ ಉಗ್ರಪ್ಪ, ಮಾಜಿ ಶಾಸಕ ಅನಿಲ್‌ಲಾಡ್‌ ಪ್ರಚಾರ ನಡೆಸಿದ್ದು ಹೊರತುಪಡಿಸಿದರೆ ಜಿಲ್ಲೆಯ ಸ್ಥಳೀಯ ಮುಖಂಡರು, ಕಾರ್ಯಕರ್ತರು ತೋರಿಕೆಗಷ್ಟೇ ಒಗ್ಗಟ್ಟು ಪ್ರದರ್ಶಿಸಿದರು ಎಂಬುದು ಗುಟ್ಟಾಗಿ ಉಳಿದಿಲ್ಲ.

ಇನ್ನು ಜೆಡಿಎಸ್‌ ಅಭ್ಯರ್ಥಿ ಎನ್‌.ಎಂ.ನಬಿ ಅವರ ಪರವಾಗಿ ಮಾಜಿ
ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಒಂದೇ ದಿನ ಕ್ಷೇತ್ರದ ಮೂರು ಕಡೆ ಬಹಿರಂಗ ಸಭೆ ನಡೆಸಿದ್ದು, ಹೊರತುಪಡಿಸಿದರೆ ಮತ್ಯಾವ ಪ್ರಭಾವಿ ಮುಖಂಡರು ಬಂದಿಲ್ಲ. ಇದು ಕಾಂಗ್ರೆಸ್‌ -ಜೆಡಿಎಸ್‌ ಪಕ್ಷಗಳ ಮತ್ತೂಂದು ಮೈನಸ್‌ ಆಗಿದ್ದು, ಬಿಜೆಪಿ ಅಭ್ಯರ್ಥಿ ಆನಂದ್‌ಸಿಂಗ್‌ ಪರವಾಗಿ ಬುಕ್ಕಿಗಳು ಕಾಂಗ್ರೆಸ್‌ ಪರ ಬಾಜಿಕಟ್ಟಲು ಬಂದವರಿಗೆ ಆಫರ್‌ ನೀಡಲು ಮುಂದಾಗಿದ್ದಾರೆ.

ಹೀಗೆ ಹಲವು ಕಾರಣಗಳನ್ನು ನೀಡಿ ಬುಕ್ಕಿಗಳು ಭರ್ಜರಿ ಬೆಟ್ಟಿಂಗ್‌ ನಡೆಸಲು ಮುಂದಾಗಿದ್ದಾರೆ. ಆದರೆ, ವಿಜಯನಗರದ ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ ಬೆಟ್ಟಿಂಗ್‌ ವೀರರ ಯಾರ ದುಡ್ಡು ಮತ್ಯಾರ ಪಾಲಾಗಲಿದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next