ಬಳ್ಳಾರಿ: ತೆಲುಗಿನ ಸರ್ವಜ್ಞನೆಂದು ಖ್ಯಾತಿ ಪಡೆದಿರುವ ಮಹಾಯೋಗಿ ವೇಮನ ಅವರ ವಿಚಾರಧಾರೆ, ತತ್ವಾದರ್ಶಗಳು ಹಾಗೂ ಅವರ ಜೀವನಶೈಲಿಯೂ ಇಂದಿಗೂ ಅಮರವಾಗಿವೆ. ಅವರ ತತ್ವಾದರ್ಶಗಳನ್ನು ಯುವಕರು ಪಾಲನೆ ಮಾಡಬೇಕು ಎಂದು ನಗರ ಶಾಸಕ ಜಿ. ಸೋಮಶೇಖ ರೆಡ್ಡಿ ಹೇಳಿದರು.
ನಗರದ ಡಾ| ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಭಾನುವಾರ ನಡೆದ ಮಹಾಯೋಗಿ ವೇಮನ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಸರ್ವಜ್ಞ, ತಮಿಳಿನ ತಿರುವಳ್ಳರ್ ಹಾಗೆಯೇ ತೆಲುಗಿನ ವೇಮನಂತಹ ದಾರ್ಶನಿಕರ ವಚನಗಳು ಇಡೀ ಮನುಕುಲಕ್ಕೆ ಕೈಗನ್ನಡಿಯಾಗಿವೆ. ಹಾಗಾಗಿ ಅವರ ಆದರ್ಶಗಳು ಇಂದಿನ ಯುವಕರು, ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂಥ ಮಹನೀಯರ ಜಯಂತಿಗಳು ಕೇವಲ ಜಯಂತಿಗಳಿಗಷ್ಟೇ ಸೀಮಿತವಾಗದೆ, ಅವರ ಮಾನವೀಯ ಮೌಲ್ಯಗಳು ಹಾಗೂ ಸಾಮರಸ್ಯ ಉಂಟು ಮಾಡುವ ನಿಟ್ಟಿನಲ್ಲಿ ಆಚರಣೆಗಳು ಅವಶ್ಯಕವಾಗಿರುತ್ತವೆ. ಯುವಕರು ಕೂಡ ಗುಣಮಟ್ಟದ ಶಿಕ್ಷಣ ಪಡೆದು ಇಂಥ ದಾರ್ಶನಿಕರ ಆದರ್ಶಗಳನ್ನು ಮುಂದಿಟ್ಟುಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ಮಾತನಾಡಿದರು. ಸಿರುಗುಪ್ಪ ತಾಲೂಕಿನ ಪ್ರೌಢಶಾಲಾ ಶಿಕ್ಷಕ ಬಿ.ವಿಜಯರಂಗಾರೆಡ್ಡಿ ವಿಶೇಷ ಉಪನ್ಯಾಸ ನೀಡಿದರು. ಕೆ.ದೊಡ್ಡಬಸಪ್ಪ ಅವರು ವೇಮನ ಪದ್ಯಗಳ ಗಾಯನ ಪ್ರಸ್ತುತಪಡಿಸಿದರು.
ಅದ್ಧೂರಿ ಮೆರವಣಿಗೆ: ಮಹಾಯೋಗಿ ವೇಮನ ಜಯಂತಿ ನಿಮಿತ್ತ ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಮಹಾಯೋಗಿ ವೇಮನ ಅವರ ಭಾವಚಿತ್ರದ ಮೆರವಣಿಗೆಗೆ ನಗರ ಶಾಸಕರಾದ ಸೋಮಶೇಖರೆಡ್ಡಿ ಚಾಲನೆ ನೀಡಿದರು. ಮೆರವಣಿಗೆಯು ಮುನ್ಸಿಪಲ್ ಕಾಲೇಜು ಮೈದಾನದಿಂದ ಪ್ರಾರಂಭವಾಗಿ ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೇ ಬ್ರೂಸ್‌ಪೇಟೆ ಪೊಲೀಸ್ ಠಾಣೆ, ಹೆಚ್. ಆರ್.ಗವಿಯಪ್ಪ ವೃತ್ತ ಮಾರ್ಗವಾಗಿ ಡಾ| ಜೋಳದರಾಶಿ ದೊಡ್ಡನಗೌಡ ರಂಗಮಂದಿರಕ್ಕೆ ತಲುಪಿತು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ನೃತ್ಯ ಕಲಾ ಪ್ರಕಾರ ತಂಡಗಳು, ವೀರಗಾಸೆ ಹಾಗೂ ಹಲವು ಜಾನಪದ ಕಲಾತಂಡಗಳು ಭಾಗವಹಿಸಿ ಮೆರವಣಿಗೆಯನ್ನು ಆಕರ್ಷಕಗೊಳಿಸಿದವು. ಈ ವೇಳೆ ಸಮುದಾಯದ ಮುಖಂಡರುಗಳಾದ ಕೋಟೇಶ್ವರ ರೆಡ್ಡಿ, ನಾರಾ ಪ್ರತಾಪ್ ರೆಡ್ಡಿ, ಐನಾತರೆಡ್ಡಿ, ಬಸವರಾಜ ರೆಡ್ಡಿ, ಹೇಮಚಂದ್ರ ರೆಡ್ಡಿ, ಡಾ| ಮಹಿಪಾಲ್ ರೆಡ್ಡಿ, ಲೇಪಾಕ್ಷಿ ಸೇರಿದಂತೆ ಸಮಾಜದ ಮುಖಂಡರು ಇತರರು ಇದ್ದರು.