Advertisement

ಸಕಾಲ ವಿಳಂಬ ಮಾಡಿದ್ರೆ ನೋಟಿಸ್‌

04:58 PM Sep 07, 2019 | Naveen |

ಬಳ್ಳಾರಿ: ಸಕಾಲ ಅಧಿನಿಯಮದಡಿ ಸೇವೆಗಳನ್ನು ವಿಳಂಬ ಮಾಡಿ ವಿಲೇವಾರಿ ಮಾಡುವ ಅಧಿಕಾರಿಗಳಿಗೆ ಸಕಾಲ ತಂತ್ರಾಂಶದ ಮುಖಾಂತರ ಆನ್‌ಲೈನ್‌ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗುತ್ತದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಕಾಲ ಯೋಜನೆಯಡಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸೇವೆ ವಿಳಂಬ ವಿಲೇವಾರಿ ಮಾಡಿದ್ದಕ್ಕೆ ನೀಡಲಾದ ಕಾರಣ ಕೇಳಿ ನೋಟಿಸ್‌ ಜಾರಿಯಾದ ಅಧಿಕಾರಿಯೂ ಕೂಡ ಆನ್‌ಲೈನ್‌ ಮುಖಾಂತರ ಸಕ್ಷಮ ಪ್ರಾಧಿಕಾರಕ್ಕೆ ಉತ್ತರ ಸಲ್ಲಿಸಬೇಕು ಎಂದ ಅವರು, ಈ ತರಬೇತಿಯಲ್ಲಿ ನೀಡಲಾಗುವ ಪ್ರಾತ್ಯಕ್ಷಿಕೆಯನ್ನು ಗಮನದಲ್ಲಿಟ್ಟುಕೊಂಡು ಆಲಿಸಿ ಅದರಂತೆ ಕ್ರಮವಹಿಸಬೇಕು. ಸಕಾಲದಲ್ಲಿ ಸೇವೆ ಒದಗಿಸುವ ನಿಟ್ಟಿನಲ್ಲಿ ಸಿಬ್ಬಂದಿಯನ್ನು ಸಜ್ಜುಗೊಳಿಸಬೇಕು. ನಿಗದಿಪಡಿಸಿದ ಅವಧಿಯೊಳಗೆ ಸೇವೆ ಒದಗಿಸದಿದ್ದಲ್ಲಿ ಯಾವ ರೀತಿ ಸಮಸ್ಯೆಯಾಗುತ್ತದೆ. ಅದನ್ನು ಅಧಿಕಾರಿಯ ಎಚ್ಆರ್‌ಎಂಎಸ್‌ನೊಂದಿಗೆ ಅಟ್ಯಾಚ್ ಮಾಡಲಾಗುತ್ತಿದ್ದು, ಬಡ್ತಿ ಸಂದರ್ಭದಲ್ಲಿಯೂ ಸಮಸ್ಯೆ ಉಂಟಾಗುತ್ತದೆ ಎಂದು ವಿವರಿಸಿದರು.

ಇಡಿ ದೇಶದಲ್ಲಿಯೇ ಅತ್ಯಂತ ಮಾದರಿಯಾಗಿರುವ ಈ ಸಕಾಲ ಸೇವೆಯನ್ನು ಬಾಂಗ್ಲಾದೇಶ ಕೂಡ ಅಳವಡಿಸಿಕೊಂಡಿದೆ. ಆರಂಭದಲ್ಲಿ 278 ಸೇವೆಗಳಿದ್ದವು. ಈಗ 1091 ಸೇವೆಗಳು ಈ ಸಕಾಲದಡಿ ಲಭ್ಯವಿವೆ. ಈ ಮುಂಚೆ ಮ್ಯಾನ್ಯುವಲ್ ಆಗಿದ್ದ ಸೇವೆಗಳು ಈಗ ಆನ್‌ಲೈನ್‌ (ಸೇವಾಸಿಂಧು) ಮೂಲಕ ಲಭ್ಯವಿವೆ ಎಂದರು.

ಸಕಾಲ ನಾಮಫಲಕ ಅಳವಡಿಸಿ

Advertisement

ಜಿಲ್ಲೆಯಲ್ಲಿರುವ ವಿವಿಧ ಇಲಾಖೆಗಳು ತಮ್ಮ ಇಲಾಖೆಯು ಸಕಾಲ ಸೇವೆ ಅಡಿ ಒದಗಿಸುತ್ತಿರುವ ಸೇವೆಗಳನ್ನು ನಾಮಫಲಕದಲ್ಲಿ ಬರೆದು ಮತ್ತು ಅದರೊಂದಿಗೆ ಸಹಾಯವಾಣಿ ಸಂಖ್ಯೆ ಕೆಳಗಡೆ ನಮೂದಿಸಿ ಕಡ್ಡಾಯವಾಗಿ ಅಳವಡಿಸುವ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿ ಕಚೇರಿ ತಹಶೀಲ್ದಾರ್‌ ವಿಶ್ವಜೀತ್‌ ಮೆಹತಾ ಅವರು ಸೂಚನೆ ನೀಡಿದರು.

ನಾಮಫಲಕದಲ್ಲಿ ಸಕಾಲ ಸೇವೆಗೆ ಸಂಬಂಧಿಸಿದಂತೆ ಲೋಗೋ ಮಾದರಿ ನೀಡಲಾಗಿದ್ದು, ಅದನ್ನು ಬಳಸಿಕೊಂಡು ಕಡ್ಡಾಯವಾಗಿ ಅಳವಡಿಸಬೇಕು ಎಂದು ಹೇಳಿದರು. ಸಕಾಲದಲ್ಲಿ ಬಂದ ಅರ್ಜಿಗಳನ್ನು ಪಡೆದು ಕಡ್ಡಾಯವಾಗಿ ಸ್ವೀಕೃತಿ ನೀಡಿ ಎಂದು ಹೇಳಿದ ಅವರು, ಜಿಲ್ಲೆಯಲ್ಲಿ ಸರಿಯಾದ ಸಮಯಕ್ಕೆ ಸೇವೆ ಒದಗಿಸಿದ ಕಾರಣ 91 ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಪ್ರಶಂಸಾ ಪತ್ರ ನೀಡಿದ್ದಾರೆ ಎಂದರು.

ಜಿಲ್ಲಾ ಸಕಾಲ ಮಾಹಿತಿ ತಂತ್ರಜ್ಞಾನ ಸಮಾಲೋಚಕ ಸೈಯದ್‌ ಅವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next