ಬಳ್ಳಾರಿ: ಸಹಕಾರಿ ಕ್ಷೇತ್ರದಲ್ಲಿ ವಿಶ್ವಾಸಾರ್ಹವಾಗಿ ಬೆಳೆಯುತ್ತಿರುವ ‘ಸುಕೋ ಬ್ಯಾಂಕ್ ‘ಬೆಳ್ಳಿ ಹಬ್ಬದ ಆಚರಣೆ ಸಂದರ್ಭದಲ್ಲಿ 2018-19ರ ಆರ್ಥಿಕ ಸಾಲಿನಲ್ಲಿ ಒಟ್ಟು 1122 ಕೋಟಿ ರೂ. ವಹಿವಾಟು ನಡೆಸಿದ್ದು, ಶೇ.40 ರಷ್ಟು ಪ್ರಗತಿ ಸಾಧಿಸಿದೆ. ಒಟ್ಟು 9 ಕೋಟಿ ರೂ. ಲಾಭಗಳಿಸಿದ್ದು, ತೆರಿಗೆ ಪಾವತಿ ಬಳಿಕ 4.93 ಕೋಟಿ ರೂ. ನಿವ್ವಳ ಲಾಭಗಳಿದೆ ಎಂದು ಸುಕೋ ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ತಿಳಿಸಿದರು.
ನಗರದ ಸುಕೋ ಬ್ಯಾಂಕ್ ಕೇಂದ್ರ ಕಚೇರಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಲ್ಲಿ ಸುಕೋ ಬ್ಯಾಂಕ್ ಭದ್ರವಾಗಿ ತಳವೂರಿ, ಪ್ರತಿವರ್ಷ ತನ್ನ ವ್ಯವಹಾರ ವೃದ್ಧಿಗೊಳಿಸಿಕೊಳ್ಳುತ್ತಿದ್ದು, ಇದು ಸಂತಸ ಮೂಡಿಸಿದೆ ಎಂದರು.
ರಾಜ್ಯದ 16 ಜಿಲ್ಲೆಗಳಲ್ಲಿ ನಾನಾ ಕಡೆ 28 ಶಾಖೆಗಳನ್ನು ಹೊಂದಿದ್ದು, ಗ್ರಾಹಕರ ಜನಸ್ನೇಹಿಯಾಗಿ ಕೆಲಸ ನಿರ್ವಹಿಸುತ್ತಿದೆ. ಶೇ.40ರಷ್ಟು ಪ್ರಗತಿ ಸಾಧಿಸಿದ ನಮ್ಮ ಬ್ಯಾಂಕ್, ಒಟ್ಟು 669 ಕೋಟಿ ರೂ. ಠೇವಣಿ ಹೊಂದಿದ್ದು, ಒಟ್ಟು 453 ಕೋಟಿ ರೂ.ಸಾಲ ವಿತರಣೆ ಮಾಡಿದೆ ಎಂದು ತಿಳಿಸಿದರು.ಬ್ಯಾಂಕ್‌ನ ಎನ್‌ಪಿಎ (ನಿವ್ವಳ ಅನುತ್ಪಾದಕ ಆಸ್ತಿ) ಶೇ.1.97 ರಷ್ಟಿದ್ದು, ಇದು ಸುಕೋ ಬ್ಯಾಂಕ್‌ನ ಆರ್ಥಿಕ ಭದ್ರತೆ ಮತ್ತು ಆರೋಗ್ಯವನ್ನು ಸೂಚಿಸುತ್ತದೆ. ಸುಕೋ ಬ್ಯಾಂಕ್‌ನ ಬೆಳ್ಳಿಹಬ್ಬದ ಸಂಭ್ರಮಾಚರಣೆ ನಿಮಿತ್ತ ಹೊಸದಾಗಿ ‘ಸುಕೋ ಸೋಲಾರ್ ಶಕ್ತಿ ಯೋಜನೆ ಜಾರಿಗೊಳಿದ್ದು, 25 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. ಅತಿ ಕಡಿಮೆ ಮಾಸಿಕ ಕಂತುಗಳಲ್ಲಿ ಸೋಲಾರ್ ತಂತ್ರಜ್ಞಾನ ಅಳವಡಿಸಿಕೊಂಡು ವಿದ್ಯುತ್ ಉತ್ಪಾದಿಸುವ ಮಹತ್ವದ ಯೋಜನೆ ಇದಾಗಿದೆ. ಈ ಯೋಜನೆಯಡಿ 300ಕ್ಕೂ ಹೆಚ್ಚು ಜನರು ಹೆಸರನ್ನು ನೋಂದಾಯಿಸಿದ್ದು, ಸೋಲಾರ್ ತಂತ್ರಜ್ಞಾನದ ಮೂಲಕ ವಿದ್ಯುತ್ ಉತ್ಪಾದನೆಗೆ ಆಸಕ್ತಿ ತೋರಲು ಮುಂದೆ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಯುಪಿಐ ಹಣ ಪಾವತಿ ತಂತ್ರಜ್ಞಾನ: ಕೇಂದ್ರ ಸರ್ಕಾರದ ಯುಪಿಐ ಹಣ ಪಾವತಿ ತಂತ್ರಜ್ಞಾನದ ವ್ಯವಸ್ಥೆಗೆ ಒಳಪಟ್ಟ ರಾಜ್ಯದ ಮೊದಲ ಸಹಕಾರಿ ಬ್ಯಾಂಕ್ ಎನ್ನುವ ಕೀರ್ತಿ ಸುಕೋ ಬ್ಯಾಂಕ್ ಹೊಂದಿದೆ. ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಅನೇಕ ಪ್ರಥಮಗಳ ಗೌರವಕ್ಕೆ ಪ್ರಾಪ್ತಿಯಾಗಿದೆ ಎಂದರು.
ರುಪೇ ಪ್ಲಾಟಿನಂ ಕಾರ್ಡ್ ವಿತರಣೆ ಮಾಡುತ್ತಿರುವ ರಾಜ್ಯದ ಮೊದಲ ಸಹಕಾರಿ ಬ್ಯಾಂಕ್ ನಮ್ಮದಾಗಿದೆ. ಬ್ಯಾಂಕ್‌ನ ಯಾವುದೇ ಖಾತೆದಾರರು ಈ ಕಾರ್ಡ್ ಪಡೆಯಲು ಅರ್ಹರು. ಬ್ಯಾಂಕ್‌ನ ರುಪೇ ಪ್ಲಾಟಿನಂ ಕಾರ್ಡ್ ಮೂಲಕ ಆನ್‌ಲೈನ್ ಶಾಪಿಂಗ್ ಮಾಡುವವರಿಗೆ ವಿವಿಧ ಬಗೆಯ ರಿಯಾಯಿತಿ, ಆಕರ್ಷಕ ಕೊಡುಗೆಗಳು ಹಾಗೂ ಕ್ಯಾಶ್‌ಬ್ಯಾಕ್ ಸೌಲಭ್ಯ ಸಿಗಲಿದೆ. ಈ ಕಾರ್ಡ್ ಪಡೆಯುವ ಖಾತೆದಾರರು ಕನಿಷ್ಠ ಹಣವನ್ನು ಖಾತೆಯಲ್ಲಿ ಹೊಂದಿರಬೇಕಾದ ಅನಿವಾರ್ಯತೆ ಇಲ್ಲ. ಎಲ್ಲ ಗ್ರಾಹಕರು ಈ ಕಾರ್ಡ್ ಸೌಲಭ್ಯ ಪಡೆಯಬಹುದು. ಸುಕೋ ಬ್ಯಾಂಕ್‌ನ ಅಭಿವೃದ್ಧಿ ಮತ್ತು ಸಾಧನೆಯಲ್ಲಿ ಸಹಕಾರ ತೋರಿದ ನಮ್ಮೆಲ್ಲಾ ಗ್ರಾಹಕರಿಗೆ ಹಾಗೂ ಷೇರುದಾರರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪರಿಮಳಾಚಾರ್ಯ ಎಸ್. ಅಗ್ನಿಹೋತ್ರಿ, ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶ್‌ರಾವ್ ಇದ್ದರು.