ಬಳ್ಳಾರಿ: ಕ್ರೀಡೆಗಳಿಂದ ದೈಹಿಕ, ಮಾನಸಿಕ ನೆಮ್ಮದಿ ಲಭ್ಯವಾಗುತ್ತದೆ ಮತ್ತು ಉತ್ತಮ ಆರೋಗ್ಯವಂತರಾಗಿ ಜೀವಿಸಬಹುದು ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಹೇಳಿದರು.
ನಗರದ ಬಿ.ಡಿ.ಎ.ಎ ಮೈದಾನದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ನಾರಾಯಣ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಫುಟ್ ಬಾಲ್ ಪಂದ್ಯಾವಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ದೈಹಿಕ ಶಿಕ್ಷಕರು ತಮ್ಮ ಕ್ರೀಡಾಪಟುಗಳಿಗೆ ನೀತಿ ನಿಯಮದ ಅನುಸಾರವಾಗಿ ತರಬೇತಿ ನೀಡಬೇಕು. ಮೊದಲಬಾರಿಗೆ ಶಾಸಕರಾದಾಗ ನಾನು ಆಗಿನ ಕ್ರೀಡಾ ಸಚಿವರಾಗಿದ್ದ ಗೂಳಿಹಟ್ಟಿ ಶೇಖರ್ ಅವರಿಗೆ ಬಳ್ಳಾರಿ ಜಿಲ್ಲೆಗೆ ಫುಟ್ ಬಾಲ್ ಕ್ರೀಡಾಂಗಣವನ್ನು ಒದಗಿಸುವಂತೆ ಪ್ರಸ್ತಾಪಿಸಿದಾಗ ಅದಕ್ಕೆ ಒಪ್ಪಿ 5 ಕೋಟಿ ರೂ.ಗಳ ಅನುಮೋದನೆ ನೀಡಲಾಗಿತ್ತು ಎಂದ ಶಾಸಕ ಜಿ.ಸೋಮಶೇಖರರೆಡ್ಡಿ, ಇಲ್ಲಿ ಪಂದ್ಯಾವಳಿ ಆಯೋಜಿಸಿದಾಗ ತಪ್ಪದೇ ಎಲ್ಲ ಪಂದ್ಯಗಳನ್ನು ವೀಕ್ಷಿಸುತ್ತೇನೆ ಎಂದು ತಿಳಿಸಿದರು.
ಫುಟ್‌ಬಾಲ್ ಮೈದಾನದಲ್ಲಿರುವ ಆಸನಗಳು ದುರಸ್ತಗೀಡಾಗಿದ್ದು, ಸರಿಪಡಿಸಲು ವಾರದೊಳಗಾಗಿ ಅಂದಾಜು ವೆಚ್ಚದ ಅನುಮೋದನೆ ಪಟ್ಟಿಯನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ದೈಹಿಕ ಶಿಕ್ಷಕ ಜಿ. ಮಹೇಶ್ ಪ್ರಾಸ್ತವಿಕವಾಗಿ ಮಾತನಾಡಿ, ಇಲ್ಲಿನ ನಡೆಯುವ ರಾಜ್ಯಮಟ್ಟದ ಫುಟ್ ಬಾಲ್ ಪಂದ್ಯಾವಳಿಗೆ ಭಾಗವಹಿಸಿ ವಿಜೇತರಾದವರು ಅಂಡಮಾನನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಆರ್.ನಾಗರಾಜಪ್ಪ ಸ್ವಾಗತಿಸಿದರು. ಮೊದಲ ಬಾರಿಗೆ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡೆಯಲ್ಲಿ ಆಯ್ಕೆಯಾದ ಬಳ್ಳಾರಿಯ ಕ್ರೀಡಾಪಟು ದೇವಿಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಪಾಲಿಕೆ ಸದಸ್ಯ ಶ್ರೀನಿವಾಸ ಮೊತ್ಕರ್, ಬೆಂಗಳೂರಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಮುರಳಿ ಸೇರಿದಂತೆ ಜಿಲ್ಲೆಯ ವಿವಿಧ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮೋಹನ್ ರೆಡ್ಡಿ, ಹರಿಕೃಷ್ಣ, ಶಿವರಾಂ, ಗೋವಿಂದರಾಜುಲು, ಗೋಪಾಲ, ವಿಕ್ಟರ್ ಇಮಾನ್ಯುಯಲ್, ಶ್ರೀಶೈಲ ಸೇರಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಿಬ್ಬಂದಿ ವರ್ಗದವರು ಇತರರು ಇದ್ದರು.