ಬಳ್ಳಾರಿ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗಣಿಜಿಲ್ಲೆ ಬಳ್ಳಾರಿ ಮತ್ತೆ ಕುಸಿತ ಕಂಡಿದ್ದು, ರಾಜ್ಯ ಮಟ್ಟದಲ್ಲಿ 23ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದೆ. 2018ರಲ್ಲಿ ರಾಜ್ಯಕ್ಕೆ 12ನೇ ಸ್ಥಾನ ಗಳಿಸಿದ್ದ ಜಿಲ್ಲೆ 2019ರಲ್ಲಿ ಏಕಾಏಕಿ 23ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, 11 ಸ್ಥಾನ ಕುಸಿತ ಕಂಡಿದೆ. ಉತ್ತಮ ಫಲಿತಾಂಶ ಗಳಿಸುವಲ್ಲಿ ಕಳೆದ ವರ್ಷ ಯಶಸ್ವಿಯಾಗಿದ್ದ ಜಿಲ್ಲಾಡಳಿತ ಕೈಗೊಂಡಿದ್ದ ವಿವಿಧ ಕ್ರಮಗಳು ಈ ಬಾರಿ ವಿಫಲವಾದಂತಾಗಿದೆ.
ಕಳೆದ ವರ್ಷ ಜಿಲ್ಲಾಡಳಿತ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗಿತ್ತು. ತಾಲೂಕಿಗೆ ಮೊದಲ ಸ್ಥಾನ ಬಂದಿದ್ದ ಮೊದಲ ಮೂವರು ವಿದ್ಯಾರ್ಥಿಗಳನ್ನು ಮತ್ತು ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆಯ ಶಿಕ್ಷಕರನ್ನು ಪ್ರವಾಸಕ್ಕೆ ಕಳುಹಿಸಲಾಗಿತ್ತು. ಜತೆಗೆ ವಿಶೇಷ ತರಗತಿಗಳನ್ನು ನಡೆಸಲಾಗಿತ್ತು. ಕೆಲ ವಿಷಯಗಳಲ್ಲಿ ಪ್ರಗತಿ ಕಾಣದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ರಾತ್ರಿ ಶಾಲೆಗಳನ್ನು ನಡೆಸಿ ತರಗತಿಗಳನ್ನು ನಡೆಸಲಾಗಿತ್ತು. ಶಿಕ್ಷಕರ ಕೊರತೆಯುಳ್ಳ ಶಾಲೆಗಳಿಗೆ ಜಿಲ್ಲಾ ಖನಿಜನಿಧಿ ಯೋಜನೆಯಡಿ ಅತಿಥಿ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಸ್ವತಃ ಜಿಲ್ಲಾಧಿಕಾರಿ ಡಾ| ರಾಮ್ ಪ್ರಸಾತ್ ಮನೋಹರ್ ಅವರೇ ಹೊಸಪೇಟೆ ಸೇರಿದಂತೆ ಕೆಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಎಲ್ಲ ಕ್ರಮಗಳ ಫಲವಾಗಿ 2017ರಲ್ಲಿ ರಾಜ್ಯ ಮಟ್ಟದಲ್ಲಿ 17ನೇ ಸ್ಥಾನದಲ್ಲಿದ್ದ ಬಳ್ಳಾರಿ ಜಿಲ್ಲೆಯನ್ನು 2018ರಲ್ಲಿ 12ನೇ ಸ್ಥಾನಕ್ಕೆ ಏರಿಕೆಯಾಗಲು ಸಾಧ್ಯವಾಯಿತು. ಆದರೆ, ಪ್ರಸಕ್ತ 2019ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 11 ಸ್ಥಾನಗಳನ್ನು ಕುಸಿತ ಕಂಡು ಪುನಃ 23ನೇ ಸ್ಥಾನಕ್ಕೆ ಇಳಿದಿರುವುದು ಜಿಲ್ಲೆಯ ಶಿಕ್ಷಣ ತಜ್ಞರಲ್ಲಿ ಬೇಸರ ಮೂಡಿಸಿದೆ.
ಒಮ್ಮೆ 10ರೊಳಗಿನ ಸ್ಥಾನ: ಬಳ್ಳಾರಿ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 2001ರಲ್ಲಿ ರಾಜ್ಯ ಮಟ್ಟಕ್ಕೆ ಹತ್ತರೊಳಗಿನ 8ನೇ ಸ್ಥಾನ ಪಡೆದಿದ್ದು ಹೊರತುಪಡಿಸಿದರೆ, 2009ರಲ್ಲಿ 15ನೇ ಸ್ಥಾನ, 2018ರಲ್ಲಿ 12ನೇ ಸ್ಥಾನಕ್ಕೆ ಏರಿಕೆಯಾಗಿ ರಾಜ್ಯ ಮಟ್ಟದಲ್ಲಿ 15ರೊಳಗಿನ ಸ್ಥಾನ ಗಿಟ್ಟಿಸಿಕೊಂಡಿತ್ತು. ಇನ್ನು 2008, 2011ರಲ್ಲಿ 29ನೇ ಸ್ಥಾನ, 2013ರಲ್ಲಿ 32, 2014ರಲ್ಲಿ 31, 2016ರಲ್ಲಿ 34ನೇ ಸ್ಥಾನಗಳಿಸುವ ಮೂಲಕ ರಾಜ್ಯ ಮಟ್ಟದಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇನ್ನುಳಿದ ಎಲ್ಲ ವರ್ಷಗಳು 17ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಬಳ್ಳಾರಿ ಕಾಣಿಸಿಕೊಂಡಿದ್ದು, ಕಳೆದ 2018ರಲ್ಲಿ 12ನೇ ಸ್ಥಾನಕ್ಕೆ ಏರಿಕೆಯಾಗಿದ್ದು, ಮುಂದಿನ ವರ್ಷವೂ ಇದೇ ಫಲಿತಾಂಶ ಮರುಕಳಿಸಲಿದೆ ಎಂದುಕೊಂಡಿದ್ದ ಜಿಲ್ಲೆಯ ಶಿಕ್ಷಣ ಪ್ರಿಯರಿಗೆ ಪುನಃ 23ನೇ ಸ್ಥಾನಕ್ಕೆ ಕುಸಿದು ಶಾಕ್ ನೀಡಿದೆ.
ಜಿಲ್ಲೆಯಲ್ಲಿ ಕೂಡ್ಲಿಗಿ ಪ್ರಥಮ: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬಳ್ಳಾರಿ ಜಿಲ್ಲಾ ಮಟ್ಟದಲ್ಲಿ ಶೇ.84.36ರಷ್ಟು ಫಲಿತಾಂಶ ಪಡೆದಿರುವ ಕೂಡ್ಲಿಗಿ ತಾಲೂಕು ಪ್ರಥಮ ಸ್ಥಾನ ಪಡೆದಿದ್ದು, ಕೇವಲ ಶೇ.40.01 ರಷ್ಟು ಫಲಿತಾಂಶ ಪಡೆದಿರುವ ಹೂವಿನಹಡಗಲಿ ತಾಲೂಕು ಕೊನೆಯ ಸ್ಥಾನಗಳಿಸಿದೆ. ಉಳಿದಂತೆ ಹಗರಿಬೊಮ್ಮನಹಳ್ಳಿ ಶೇ.80.11 (ದ್ವಿತೀಯ), ಸಂಡೂರು ಶೇ.78.91 (ತೃತೀಯ), ಕುರುಗೋಡು ಶೇ.76.76 (ನಾಲ್ಕನೇ), ಹೊಸಪೇಟೆ ಶೇ.74.03 (5ನೇ), ಸಿರುಗುಪ್ಪ ಶೇ.68.23 (6ನೇ), ಬಳ್ಳಾರಿ ಪೂರ್ವ ಶೇ.60.84 (7ನೇ ಸ್ಥಾನ) ರಷ್ಟು ಫಲಿತಾಂಶ ಪಡೆದಿವೆ. ಅಲ್ಲದೇ, ಈ ಬಾರಿ ಜಿಲ್ಲೆಯಲ್ಲಿ ಯಾವುದೇ ಶಾಲೆ ಶೂನ್ಯ ಫಲಿತಾಂಶ ಪಡೆದಿಲ್ಲ. ಮೇಲಾಗಿ 18 ಸರ್ಕಾರಿ ಶಾಲೆಗಳು, 3 ಅನುದಾನಿತ, 44 ಅನುದಾನ ರಹಿತ ಸೇರಿ ಒಟ್ಟು 65 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಸರ್ಕಾರಿ ಶಾಲೆಗಳು ಶೇ.72.42 ರಷ್ಟು ಫಲಿತಾಂಶ ಪಡೆದರೆ, ಅನುದಾನಿತ ಶಾಲೆಗಳು ಶೇ.78.92, ಅನುದಾನ ರಹಿತ ಶಾಲೆಗಳು ಶೇ.87.48 ರಷ್ಟು ಫಲಿತಾಂಶವನ್ನು ಗಿಟ್ಟಿಸಿಕೊಂಡಿವೆ.
ವೆಂಕೋಬಿ ಸಂಗನಕಲ್ಲು