ಬಳ್ಳಾರಿ: ಲೋಕಸಭೆ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದರೂ ಬೋಧಕ ಹುದ್ದೆಗಳಿಗೆ ಸಂದರ್ಶನ ನಡೆಸಿ ವಿವಾದಕ್ಕೀಡಾಗಿದ್ದ ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕೊನೆಗೂ ನ್ಯಾಯಾಲಯದ ಆದೇಶದ ಮೇರೆಗೆ ಬೋಧಕ ಹುದ್ದೆಗಳಿಗೆ ಸಂದರ್ಶನ, ಹಿಂದೆ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದ ಬೋಧಕೇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದು, ವಿವಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಕುಲಪತಿ ಪ್ರೊ.ಎಂ.ಎಸ್.ಸುಭಾಷ್, ಈ ಹಿಂದೆ ಅಸೋಸಿಯೇಟ್ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆದಿದ್ದರು. ಆಗ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ಪಡೆಯದೆ ಟೇಬಲ್ ಅಜೆಂಡಾದಲ್ಲಿ ಇಟ್ಟು ಒಪ್ಪಿಗೆ ಪಡೆದಿದ್ದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಓಎಂಆರ್ ಶೀಟ್‌ನ ನಕಲು ಪ್ರತಿ ಕಾರ್ಬನ್ ಶೀಟ್ ಇಲ್ಲದೆ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಸಲಾಗಿತ್ತು. ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳನ್ನು ರಾತ್ರೋರಾತ್ರಿ ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು. ಹೀಗೆ ತರಾತುರಿಯಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುತ್ತಿದ್ದ ವಿಎಸ್‌ಕೆ ವಿವಿ ಕುಲಪತಿ ಎಂ.ಎಸ್.ಸುಭಾಷ್ ವಿರುದ್ಧ ಸಾರ್ವಜನಿಕವಾಗಿ ಸಾಕಷ್ಟು ವಿರೋಧ, ಅಪಸ್ವರ ಕೇಳಿಬಂದಿತ್ತು. ಕೊನೆಗೆ, ಜಿಲ್ಲಾ ಚುನಾವಣಾಧಿಕಾರಿಗಳಾಗಿದ್ದ ಜಿಲ್ಲಾಧಿಕಾರಿ ನೋಟಿಸ್ ನೀಡಿದ ಬಳಿಕ ಸಂದರ್ಶನವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಆದರೆ, ನ್ಯಾಯಾಲಯ ಸ್ವಾಯತ್ತ ಸಂಸ್ಥೆಯಾದ ವಿವಿಗೆ ನೀತಿ ಸಂಹಿತೆ ಅನ್ವಯವಾಗಲ್ಲ ಎಂದು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಇಷ್ಟು ದಿನಗಳ ಕಾಲ ತಡೆಹಿಡಿಯಲಾಗಿದ್ದ ಹಿಂದಿನ ಬೋಧಕೇತರ ಹುದ್ದೆಗಳಿಗೂ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಯಾವ್ಯಾವ ಹುದ್ದೆಗಳಿಗೆ ಅರ್ಜಿ?: ವಿಎಸ್‌ಕೆ ವಿವಿಯಲ್ಲಿ 371(ಜೆ) ಅಡಿ ಖಾಲಿಯಿರುವ ಗ್ರೂಪ್ ಎ 5 ಹುದ್ದೆಗಳು, ಗ್ರೂಪ್ ಬಿ 5 ಹುದ್ದೆಗಳು ಮತ್ತು ಗ್ರೂಪ್ ಸಿ 45 ಸೇರಿ ಒಟ್ಟು 55 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಈಗಾಗಲೇ 2017ರ ಏಪ್ರಿಲ್ 17ರಂದು ಮತ್ತು 2018-19ರಲ್ಲಿ ಎರಡು ಬಾರಿ ಅರ್ಜಿ ಆಹ್ವಾನಿಸಲಾಗಿತ್ತು. ಆಗ ಕಾರಣಾಂತರಗಳಿಂದ ನೇಮಕಾತಿ ಪ್ರಕ್ರಿಯೆ ತಡೆ ಹಿಡಿಯಲಾಯಿತು. ಇದೀಗ ಈ 55 ಬೋಧಕೇತರ ಹುದ್ದೆಗಳೊಂದಿಗೆ ನಾನ್ ಎಚ್ಕೆ ಭಾಗದ ಐದು ಬೋಧಕ ಹುದ್ದೆಗಳ ಭರ್ತಿಗೂ ವಿವಿಯ ಕುಲಪತಿಗಳು ಮೇ 6ರಂದು ಅನುಮೋದನೆ ನೀಡಿದ್ದರಿಂದ ವಿವಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ವಿವಿಗೆ ಎಂಸಿಸಿ ಅನ್ವಯವಾಗಲ್ಲ; ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿಯಾಗಿದ್ದರೂ ಕುಲಪತಿ ಪ್ರೊ|ಎಂ.ಎಸ್.ಸುಭಾಷ್ ಅವರು ಬೋಧಕ ಹುದ್ದೆಗಳಿಗೆ ಸಂದರ್ಶನ ನಡೆಸಿದ್ದರು. ಜಿಲ್ಲಾ ಚುನಾವಣಾಧಿಕಾರಿ ಡಾ| ವಿ.ರಾಮ್ ಪ್ರಸಾತ್ ಮನೋಹರ್ ಅವರು ನೀತಿ ಸಂಹಿತೆ ಉಲ್ಲಂಘನೆಯಡಿ ಕಾರಣ ಕೇಳಿ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಸಂದರ್ಶನಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಆದರೆ, ಈ ವಿವಾದ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ವಿವಿಗಳು ಸ್ವಾಯತ್ತ ಸಂಸ್ಥೆಯಾದ್ದರಿಂದ ನೀತಿ ಸಂಹಿತೆ ಅನ್ವಯವಾಗುವುದಿಲ್ಲ. ಸಂದರ್ಶನದಲ್ಲಿ ಯಾವುದೇ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದವರು ಇರದ ಕಾರಣ, ಸಂದರ್ಶನಗಳಿಗೆ ಅವಕಾಶ ನೀಡಬಹುದು. ಆದರೆ, ಯಾವುದೇ ಕಾರಣಕ್ಕೂ ನೇಮಕಾತಿ ಪತ್ರಗಳನ್ನು ವಿತರಿಸುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ತಿಳಿಸಿದೆ ಎನ್ನುತ್ತಾರೆ ಕುಲಪತಿ ಪ್ರೊ. ಎಂ.ಸುಭಾಷ್.
ಆದರೆ, ಲೋಕಸಭೆ ಚುನಾವಣೆ ಫಲಿತಾಂಶ ಇದೇ ಮೇ 23ರಂದು ಹೊರಬೀಳಲಿದೆ. ಮೇ 27ಕ್ಕೆ ನೀತಿ ಸಂಹಿತೆ ಮುಗಿಯಲಿದೆ. ಅಲ್ಲಿಯವರೆಗೂ ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿದು ನಂತರ ಚಾಲನೆ ನೀಡಬಹುದಿತ್ತು. ಆದರೆ, ಈಗಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಅಗತ್ಯವಾದರೂ ಏನು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ವಿಎಸ್‌ಕೆ ವಿವಿಯಲ್ಲಿ 2017ರಲ್ಲಿ ಸ್ಥಗಿತಗೊಂಡಿದ್ದ ಹೈ.ಕ ಭಾಗದ ಬೋಧಕ-ಬೋಧಕೇತರ, ನಾನ್ ಎಚ್ಕೆ ಭಾಗದ 5 ಬೋಧಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಸ್ವಾಯತ್ತ ಸಂಸ್ಥೆಗಳಿಗೆ ಮಾದರಿ ನೀತಿ ಸಂಹಿತೆ ಅನ್ವಯವಾಗಲ್ಲ. ಕೇವಲ ಸಂದರ್ಶನ ಮಾತ್ರ ಮಾಡುವುದು. ನೇಮಕಾತಿ ಪತ್ರ ನೀಡಲು ಬರಲ್ಲ. ಸಂದರ್ಶನದಲ್ಲಿ ರಾಜಕೀಯ ಮುಖಂಡರಾರು ಇರದ ಕಾರಣ ಸಂದರ್ಶನ ನಡೆಸಲು ಅವಕಾಶವಿದೆ. ಬಹಳಷ್ಟು ಜನರಲ್ಲಿ ಈ ತಪ್ಪು ಅಭಿಪ್ರಾಯವಿದೆ. ನ್ಯಾಯಾಲಯವೂ ಸಂದರ್ಶನ ಸ್ಥಗಿತಗೊಳಿಸಿರುವುದು ತಪ್ಪು ಎಂದು ತಿಳಿಸಿದೆ. ಹಾಗಾಗಿ ಮಾದರಿ ನೀತಿ ಸಂಹಿತೆ ವಿವಿಗಳಿಗೆ ಅನ್ವಯವಾಗಲ್ಲ.
•
ಪ್ರೊ|ಎಂ.ಎಸ್.ಸುಭಾಷ್, ಕುಲಪತಿಗಳು
ವೆಂಕೋಬಿ ಸಂಗನಕಲ್ಲು