ಬಳ್ಳಾರಿ: ಬಳ್ಳಾರಿಯಲ್ಲಿ ಶೀಘ್ರದಲ್ಲಿಯೇ ಭೋವಿ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಭರವಸೆ ನೀಡಿದರು. ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಮಂಗಳವಾರ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭೋವಿ ಸಮುದಾಯದವರು ಬಹುತೇಕ ಬಡತನದಲ್ಲಿಯೇ ಜೀವಿಸುತ್ತಿದ್ದಾರೆ. ಕಟ್ಟಡ ನಿರ್ಮಾಣದ ಕಾಯಕದಲ್ಲಿ ನಿರತರಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಸಂಘಟಿತ ಕಾರ್ಮಿಕರಿಗೆ ಜಾರಿಗೆ ತಂದಿರುವ ವಿವಿಧ ಸೌಲಭ್ಯ ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯಾಗಬೇಕು ಎಂದರು.
ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ಅವರು ನಮ್ಮ ನಾಡಿನವರು ನಮ್ಮ ಹೆಮ್ಮೆ ಎನ್ನುವ ಭಾವನೆ ಎಲ್ಲರ ಮನದಲ್ಲಿ ತುಂಬಿ ತುಳುಕುತ್ತಿದೆ. ಎಲ್ಲರು ಒಂದೇ ಎನ್ನುವ ಭಾವನೆವುಳ್ಳವರು, ಸದಾ ಅವರಿಗೆ ಬಡವರದ್ದೆ ಚಿಂತೆ. ಇಂತಹ ಮಹಾನ್ ವ್ಯಕ್ತಿಗಳನ್ನು ನೆನೆದು ನಮ್ಮ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಸಹಾಯ ಆಯುಕ್ತ ರಮೇಶ ಪಿ.ಕೋನರೆಡ್ಡಿ ಮಾತನಾಡಿ, ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಅವರ ಜೀವನ ನಮಗೆಲ್ಲ ದಾರಿ ದೀಪವಾಗಲಿ ಅವರಂತೆ ನಾವೂ ಬದುಕುವ ಚಿಂತನೆ ನಮ್ಮದಾಗಲಿ ಅಂದರು. ಹೊಸಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಅಧ್ಯಾಪಕ ಡಾ.ಗಾದೆಪ್ಪ ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್, ಪಾಲಿಕೆಯ ಮಾಜಿ ಸದಸ್ಯ ಎಸ್.ಮಲ್ಲನಗೌಡ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮಾಜಿ ಸದಸ್ಯ ಗಿರಿಧರ, ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಡಾ.ಎಂ.ಟಿ.ಮಲ್ಲೇಶ್ ಮತ್ತಿತರರು ಇದ್ದರು.