Advertisement
ಪ್ರಸಕ್ತ 2019-2020ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಮಾರ್ಚ್ 4ರಿಂದ ಆರಂಭವಾಗಿದ್ದು ಮಾ. 23ಕ್ಕೆ ಮುಗಿಯಬೇಕಿತ್ತು. ಎಲ್ಲ ವಿಷಯಗಳ ಪರೀಕ್ಷೆಗಳು ನಡೆದು ಕೊನೆಯದಾಗಿ ಮಾ. 23ರಂದು ನಡೆಯಬೇಕಿದ್ದ ಇಂಗ್ಲಿಷ್ ಭಾಷಾ ಪರೀಕ್ಷೆಗೆ ಕೇಂದ್ರ ಸರ್ಕಾರ ಲಾಕ್ ಡೌನ್ ವಿಧಿಸಿದ ಪರಿಣಾಮ ಮುಂದೂಡಲಾಗಿತ್ತು. ಇದೀಗ ರಾಜ್ಯದಲ್ಲಿ ದಿನೇದಿನೆ ಕೋವಿಡ್ ಸೋಂಕು ಆವರಿಸುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ರಾಜ್ಯ ಸರ್ಕಾರ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆಯನ್ನು ಜೂ.18 ರಂದು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸೋಂಕು ಆವರಿಸದಂತೆ ಹೆಚ್ಚುವರಿ ಕೊಠಡಿ, ವಿದ್ಯಾರ್ಥಿಗಳ ನಡುವೆ ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸುವ ಮೂಲಕ ಪರೀಕ್ಷೆಯನ್ನು ಅತ್ಯಂತ ಸುರಕ್ಷತಾ ಕ್ರಮಗಳ ಮೂಲಕ ನಡೆಸಲು ಪದವಿಪೂರ್ವ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ.
Related Articles
ಇಂಗ್ಲಿಷ್ ಭಾಷೆ ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯವಾಗಿದೆ. ಆಯಾ ಸ್ಥಳೀಯ ಪುರಸಭೆ, ನಗರಸಭೆ ಸ್ಥಳೀಯ ಸಂಸ್ಥೆಗಳಿಗೆ ಮಾಸ್ಕ್ಗಳನ್ನು ವಿತರಿಸುವಂತೆ ಕೋರಲಾಗಿದೆ. ಜತೆಗೆ ಸ್ಯಾನಿಟೈಸರ್‌ನ್ನು ಕಡ್ಡಾಯವಾಗಿ ಬಳಕೆ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದಾಗಿ ಪರೀಕ್ಷೆಗೆ ಬರುವ ಎಲ್ಲ ವಿದ್ಯಾರ್ಥಿಗಳ ಆರೋಗ್ಯವನ್ನು ಥರ್ಮಲ್ ಸ್ಕ್ರೀನಿಂಗ್ ಮೂಲಕ ತಪಾಸಣೆ ಮಾಡಲಾಗುತ್ತದೆ. ಈ ವೇಳೆ ಜ್ವರ, ಶೀತ, ಕೆಮ್ಮು, ನೆಗಡಿಗಳಂಥ ಕಾಯಿಲೆಗಳು ಕಂಡುಬಂದಲ್ಲಿ ಅಂತಹ ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗಾಗಿ ಪ್ರತಿ ಕೇಂದ್ರದಲ್ಲಿ ಒಬ್ಬ ಸ್ಟಾಫ್ ನರ್ಸ್, ಒಬ್ಬ ಲ್ಯಾಬ್ ಟೆಕ್ನೀಶಿಯನ್, ಒಬ್ಬ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗುತ್ತಿದ್ದು, ಪರೀಕ್ಷೆ ಮುಗಿಯುವವರೆಗೂ ಅಲ್ಲಿಯೇ ಇರಲಿದ್ದಾರೆ. ಪ್ರತಿ ಕೇಂದ್ರದಲ್ಲಿ ಇಬ್ಬರು ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿಗಳು ಸಹ ಇರಲಿದ್ದು, ವಿದ್ಯಾರ್ಥಿಗಳು ಅಂತರದಲ್ಲಿ ಸಾಲಾಗಿ ಹೋಗುವುದನ್ನು ನೋಡಿಕೊಳ್ಳಲಿದ್ದಾರೆ. ಕುಡಿವ ನೀರನ್ನು ವಿದ್ಯಾರ್ಥಿಗಳೇ ತಂದುಕೊಳ್ಳಬೇಕು ಎಂದು ಡಿಡಿಪಿಯು ತಿಳಿಸಿದ್ದಾರೆ.
Advertisement
ಮಾರ್ಚ್ 23ರಂದು ನಡೆಯಬೇಕಿದ್ದ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ ಜೂ. 18ರಂದು ನಡೆಯಲಿದೆ. ವಿದ್ಯಾರ್ಥಿಗಳಿಗೆ ಸೋಂಕು ಹರಡದಂತೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಸೇರಿ ಅಗತ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 32 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 131 ಹೆಚ್ಚುವರಿ ಕೊಠಡಿ, 931 ಹೆಚ್ಚುವರಿ ಬ್ಲಾಕ್‌ಗಳನ್ನು ಸಿದ್ಧಪಡಿಸಲಾಗಿದೆ. ಹೊರ ಜಿಲ್ಲೆಗಳಿಂದ ಬಂದ 652, ಹೊರ ಜಿಲ್ಲೆಗಳಿಗೆ ಹೋಗಿರುವ 550 ವಿದ್ಯಾರ್ಥಿಗಳು ಸೇರಿ ಒಟ್ಟು 25,268 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪ್ರತಿ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಿದ್ದು, ಜ್ವರ, ಶೀತ, ಕೆಮ್ಮುಗಳಂತಹ ಕಾಯಿಲೆ ಕಾಣಿಸಿಕೊಂಡರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಗುವುದು.ನಾಗರಾಜಪ್ಪ,
ಉಪನಿರ್ದೇಶಕರು, ಪದವಿಪೂರ್ವ
ಶಿಕ್ಷಣ ಇಲಾಖೆ, ಬಳ್ಳಾರಿ