ಬಳ್ಳಾರಿ: ಬಂಜಾರಾ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಮುಖ್ಯವಾಹಿನಿಗೆ ಬರಬೇಕು. ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಕಡೆಗಣಿಸದೇ ಅವರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ತಹಶೀಲ್ದಾರ್ ಯು.ನಾಗರಾಜ ಹೇಳಿದರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಶನಿವಾರ ನಡೆದ ಸಂತ ಶ್ರೀ ಸೇವಾಲಾಲ್ ಜಯಂತಿ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂತ ಶ್ರೀ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಗುಣಮಟ್ಟದ ಶಿಕ್ಷಣವನ್ನು ತಮ್ಮ ಸಮುದಾಯದವರಿಗೆ ನೀಡಿದಾಗ ಅವರು ಸಾಧನೆ ಮಾಡಿ ತಮಗೆ ಹಾಗೂ ತಮ್ಮ ಗ್ರಾಮಕ್ಕೆ ಹೆಸರು ತರುತ್ತಾರೆ ಮತ್ತು ಸಮುದಾಯಕ್ಕೂ ಒಳ್ಳೆಯ ಹೆಸರು ಬರುತ್ತದೆ ಎಂದು ಹೇಳಿದರು. ಸಂತ ಶ್ರೀ ಸೇವಾಲಾಲ್ ಕುರಿತು ವಿಶೇಷ ಉಪನ್ಯಾಸ ನೀಡಿದ ಖ್ಯಾತ ಲೇಖಕ ಪ್ರೊ| ಎನ್. ಶಾಂತನಾಯ್ಕ, ನಮ್ಮ ಸಂಸ್ಕೃತಿಯು ವಿಶ್ವಕ್ಕೆ ಮಾದರಿಯಾಗಿದೆ. ವಿದೇಶದಿಂದ ಬರುವವರು ನಮ್ಮ ಉಡುಗೆ-ತೊಡುಗೆಗಳಿಗೆ ಆಕರ್ಷಿತರಾಗುತ್ತಿದ್ದು, ಇಂಥ ಸಂಸ್ಕೃತಿಯು ಈಗಾಗಲೆ ಕ್ರಮೇಣವಾಗಿ ಕ್ಷೀಣಿಸುತ್ತಿದೆ. ಅದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಅಲ್ಲದೇ, ನಮ್ಮ ಸಮುದಾಯದ ಜನರು ದುಡಿಮೆಗೋಸ್ಕರ ಗುಳೆ ಹೋಗುವುದು ಕಡಿಮೆ ಮಾಡಿ ತಮ್ಮ ಗ್ರಾಮಗಳಲ್ಲಿ ಕುಲಕಸಬುಗಳನ್ನು ಮಾಡಿಕೊಳ್ಳಬೇಕು ಎಂದರು.
ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಉಪನ್ಯಾಸಕ ಡಾ| ಸೋಮಶೇಖರ್ ನಾಯ್ಕ, ಸಂತ ಶ್ರೀ ಸೇವಾಲಾಲ್ ಕುರಿತು ಮಾತನಾಡಿದರು. ಅಖೀಲ ಕರ್ನಾಟಕ ಬಂಜಾರ ಸೇವಾ ಸಂಘದ ವತಿಯಿಂದ ಭಜನೆ ಮತ್ತು ಲಂಬಾಣಿ ನೃತ್ಯವನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣವರ, ಬಂಜಾರ ಸಮುದಾಯದ ಸ್ವಾಮಿಗಳಾದ ಶ್ರೀ ಚಂದು ಮಹಾರಾಜ್, ಸಮಾಜದ ಹಿರಿಯ ಮುಖಂಡ ಆರ್.ಚಂದ್ರ ನಾಯ್ಕ, ಅಖೀಲ ಕರ್ನಾಟಕ ಬಂಜಾರ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಎಸ್. ಚಂದ್ರನಾಯ್ಕ, ಸೇವಾಲಾಲ್ ಬಂಜಾರ ಸಂಘದ ಅಧ್ಯಕ್ಷ ರಾಮುನಾಯ್ಕ, ಕೀಚಾ ನಾಯ್ಕ, ಟೋಪು ನಾಯ್ಕ, ಸ್ವಾಮಿ ನಾಯ್ಕ, ಪೀಕು ನಾಯ್ಕ, ರೆಡ್ಡಿ ನಾಯ್ಕ, ಬಂಜಾರ ಸಮುದಾಯದ ಜನರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಗಮನ ಸೆಳೆದ ಮೆರವಣಿಗೆ: ಸಂತ ಶ್ರೀ ಸೇವಾಲಾಲ್ ಅವರ 281ನೇ ಜಯಂತಿ ನಿಮಿತ್ತ ನಗರದ ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಭಾವಚಿತ್ರ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಅಪರ ಜಿಲ್ಲಾ ಧಿಕಾರಿ ಮಂಜುನಾಥ್ ಚಾಲನೆ
ನೀಡಿದರು.
ಮೆರವಣಿಗೆಯು ಮುನ್ಸಿಪಲ್ ಕಾಲೇಜು ಮೈದಾನದಿಂದ ಆರಂಭವಾಗಿ ಗಡಗಿ ಚನ್ನಪ್ಪ ವೃತ್ತದ ಮಾರ್ಗವಾಗಿ ಬೆಂಗಳೂರು ರಸ್ತೆ, ಎಚ್.ಆರ್. ಗವಿಯಪ್ಪ ವೃತ್ತದ ಮೂಲಕ ಜೋಳದರಾಶಿ ದೊಡ್ಡನಗೌಡ ರಂಗಮಂದಿರ ತಲುಪಿತು. ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಕಲಾತಂಡಗಳು ಹಾಗೂ ಬಂಜಾರ ಕಲಾತಂಡಗಳ ಪ್ರದರ್ಶನ ಜನರ ಗಮನಸೆಳೆದವು. ಮೆರವಣಿಗೆಯಲ್ಲಿ ಬಂಜಾರ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.