ಬಳ್ಳಾರಿ: ಪಿಂಚಣಿ ಅದಾಲತ್‌ಗಳನ್ನು ಹಾಗೂ ಕಂದಾಯ ಅದಾಲತ್‌ಗಳನ್ನು ಅಧಿಕಾರಿಗಳು ಆಂದೋಲನದ ರೂಪದಲ್ಲಿ ನಡೆಸಿ ಪ್ರತಿಯೊಬ್ಬ ಅರ್ಹ ಪಿಂಚಣಿದಾರನಿಗೆ ಮನೆ-ಮನೆಗೆ ಪಿಂಚಣಿ ಸೌಲಭ್ಯ ತಲುಪಿಸುವಲ್ಲಿ ಕ್ರಮವಹಿಸಬೇಕು ಎಂದು ಕಂದಾಯ ಸಚಿವ ಸಂಸದೀಯ ಕಾರ್ಯದರ್ಶಿ, ಎಂಎಲ್ಸಿ ಐವಾನ್ ಡಿಸೋಜಾ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರ್ಹರಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವುದು ನಮ್ಮ ಕರ್ತವ್ಯ. ನಮ್ಮ ಸರ್ಕಾರದ ಬದ್ಧತೆ ಸಾಮಾಜಿಕವಾಗಿ ಭದ್ರತೆ ನೀಡುವುದಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 4 ಲಕ್ಷ ಜನರು ವಿವಿಧ ಯೋಜನೆಗಳಡಿ ಪಿಂಚಣಿ ಸೌಲಭ್ಯ ಪಡೆಯುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿಯೇ ಈ ಜಿಲ್ಲೆಯಲ್ಲಿ 2516 ಜನರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಿರುವುದು ಮತ್ತು ಇದುವರೆಗೆ ನಡೆಸಲಾದ 1674 ಕಂದಾಯ ಅದಾಲತ್‌ಗಳಲ್ಲಿ 2870 ಅರ್ಜಿಗಳು ವಿಲೇವಾರಿ ಮಾಡಿ ಶೇ. 98ರಷ್ಟು ಪ್ರಗತಿ ಸಾಸಿರುವುದು ಶ್ಲಾಘನೀಯ ಎಂದರು.
ಭೂಪರಿವರ್ತನೆಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಅಲೆದಾಡಿಸುವ ಕೆಲಸ ಮಾಡದೇ ನಿಗದಿಪಡಿಸಿದ ಅವಧಿಯೊಳಗೆ ಅರ್ಜಿ ವಿಲೇವಾರಿ ಮಾಡಿ ಎಂದು ಸಲಹೆ ನೀಡಿದ ಅವರು ಜಿಲ್ಲೆಯಲ್ಲಿ 30 ಗ್ರಾಮಗಳಲ್ಲಿ ಸಾರ್ವಜನಿಕ ರುದ್ರಭೂಮಿ ಸ್ಥಾಪನೆಗೆ ಬಾಕಿ ಇದ್ದು, ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನು ಖರೀದಿಸಿ ರುದ್ರಭೂಮಿ ಸ್ಥಾಪಿಸಿ ಎಂದು ಸೂಚಿಸಿದರು. ಜಿಲ್ಲಾಧಿಕಾರಿ ನಕುಲ್ ಅವರು ಒಂದು ತಿಂಗಳೊಳಗೆ ಈ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಆತ್ಮಹತ್ಯೆ ಮಾಡಿಕೊಂಡ ರೈತಕುಟುಂಬಗಳ ಮನೆಗೆ ಮತ್ತೂಮ್ಮೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದ ಡಿ.ಸೋಜಾರಿಗೆ ಡಿಸಿ ಎಸ್.ಎಸ್. ನಕುಲ್ ಉತ್ತರಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ 2018 ಏ. 1ರಿಂದ 2019 ಜೂನ್ ಅಂತ್ಯದವರೆಗೆ ಒಟ್ಟು 32 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಇದುವರೆಗೆ 26 ಜನ ರೈತ ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ ಮತ್ತು ಎಫ್‌ಎಸ್‌ಎಲ್ ವರದಿಗಾಗಿ 5 ಪ್ರಕರಣಗಳು ಬಾಕಿ ಇವೆ ಎಂದು ಜಿಲ್ಲಾಧಿಕಾರಿ ನಕುಲ್ ಅವರು ಸಭೆಗೆ ವಿವರಿಸಿದರು.
ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೇರ ಪ್ರವೇಶಕ್ಕೆ ಅವಕಾಶ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ಅಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳ ಸಕ್ರಮೀಕರಣಕ್ಕಾಗಿ 94ಸಿ ಮತ್ತು 94 ಸಿಸಿ ಅಡಿ ಸಲ್ಲಿಸಿದ ಅರ್ಜಿಗಳ ವಿಲೇವಾರಿಗೆ ಬಳ್ಳಾರಿ ಜಿಲ್ಲಾಡಳಿತ ಕೈಗೊಂಡ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಡಿ. ಸೋಜಾ, ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಪಿಂಚಣಿ ಅದಾಲತ್ ನಡೆಸಿದರು ಮತ್ತು ಹೊಸದಾಗಿ ಪಿಂಚಣಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ಪಿಂಚಣಿ ಪ್ರಮಾಣಪತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.