ಬಳ್ಳಾರಿ: ಕಳೆದ ಹಲವು ವರ್ಷಗಳಿಂದ ನಷ್ಟದ ಸುಳಿಗೆ ಸಿಲುಕಿರುವ ಭಾರತ್ ಸಂಚಾರ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಬಳ್ಳಾರಿ ಜಿಲ್ಲಾ ವಿಭಾಗದ 175 ಜನ ನೌಕರರು ಇದೇ ಜ.31 ರಂದು ಸ್ವಯಂ ನಿವೃತ್ತಿ ಪಡೆಯುತ್ತಿದ್ದಾರೆ. 50 ವರ್ಷ ಮೇಲ್ಪಟ್ಟ ನೌಕರರಿಗೆ ಕೇಂದ್ರ ಸರ್ಕಾರ ನೀಡಿರುವ ಸ್ವಯಂ ನಿವೃತ್ತಿ ಘೋಷಣೆಯ ಪ್ಯಾಕೇಜ್ ಇದಕ್ಕೆ ಕಾರಣವಾಗಿದ್ದು, ಇಷ್ಟೊಂದು ನೌಕರರು ಸೇವೆಯಿಂದ ನಿವೃತ್ತರಾಗುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.
ಸಾರ್ವಜನಿಕ ಸಂಸ್ಥೆಯಾದ ಭಾರತ್ ಸಂಚಾರ್ ನಿಗಮ ಲಿಮಿಟೆಡ್ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಿದೆ. ಬಿಎಸ್‌ಎನ್‌ಎಲ್ ನ ಆಧುನೀಕರಣದ ನೆಪದಲ್ಲಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿ ನೌಕರರನ್ನು ನಿವೃತ್ತರಾಗುವಂತೆ ಪ್ರೇರೇಪಿಸಿದೆ. ಪರಿಣಾಮ ದೇಶಾದ್ಯಂತ ಬಿಎಸ್‌ಎನ್ ಎಲ್, ಎಂಟಿಎನ್‌ಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷಾಂತರ ನೌಕರರು ಸ್ವಯಂ ನಿವೃತ್ತಿ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲೂ ಸ್ವಯಂ ನಿವೃತ್ತಿ ಜಾರಿಯಲ್ಲಿರುವ ಕಾರಣ 300 ಜನರು ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಬಿಎಸ್‌ಎನ್‌ಎಲ್ ಕಚೇರಿಯಲ್ಲಿ 175 (ಶೇ.59 ರಷ್ಟು) ನೌಕರರು ಜ.31 ರಂದು ಸ್ವಯಂ ನಿವೃತ್ತಿ ಹೊಂದುತ್ತಿದ್ದಾರೆ. ಖಾಸಗಿ ಕಂಪನಿಗಳಿಗೆ ಹೋಲಿಸಿದರೆ ಕೇಂದ್ರ ಸರ್ಕಾರದ ಒಡೆತನದ ಬಿಎಸ್‌ಎನ್‌ಎಲ್ ಸಂಸ್ಥೆಯ ನಿರ್ವಹಣಾ ವೆಚ್ಚ ಅತಿ ಹೆಚ್ಚಾಗಿದೆ. ಖಾಸಗಿ ಕಂಪನಿಗಳು ಅತಿ ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆ ನೀಡುತ್ತಿವೆ. ಆದರೆ, ಕೇಂದ್ರ ಸರ್ಕಾರದ ಒಡೆತನದ ಬಿಎಸ್‌ಎನ್ ಎಲ್‌ನಿಂದ ಇದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ತನ್ನ ನೌಕರರಿಗೆ ನೀಡಲಾಗುತ್ತಿರುವ ಭರಪೂರ ವೇತನ. ಜತೆಗೆ ಇಂದಿನ ತಾಂತ್ರಿಕತೆಗೆ ಹೋಲಿಸಿದರೆ ಇಷ್ಟೊಂದು ಮಾನವ ಸಂಪನ್ಮೂಲ ಬೇಕಿಲ್ಲ ಎಂಬ ವಾದವನ್ನೂ ಸಹ ಕೇಂದ್ರ ಸರ್ಕಾರ ಮುಂದಿಟ್ಟು, ತನ್ನ ನೌಕರರ ಸಂಖ್ಯೆ ಕಡಿತಗೊಳಿಸಲು ಈ ಕ್ರಮ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ನೌಕರರು, ಸಿಬ್ಬಂದಿ ಕಡಿತಗೊಳಿಸಿ, ನಿರ್ವಹಣ ಪ್ರಕ್ರಿಯೆಯನ್ನು ಹೊರಗುತ್ತಿಗೆ ಮೂಲಕ ಕಡಿಮೆ ವೆಚ್ಚದಲ್ಲಿ ನಿರ್ವಹಿಸುವ ಉದ್ದೇಶದೊಂದಿಗೆ ಈ ಸ್ವಯಂ ನಿವೃತ್ತಿ ಯೋಜನೆ ಜಾರಿ ಮಾಡಿದೆ. ಅದರ ಅನ್ವಯ ಬಿಎಸ್‌ಎನ್‌ಎಲ್‌ನ ನೌಕರರು ಸ್ವ ಇಚ್ಛೆಯಿಂದ ತಮ್ಮ ಸೇವೆಯಿಂದ ನಿವೃತ್ತರಾಗಬಹುದಾಗಿದೆ.
ಹಾಗೆ ನಿವೃತ್ತರಾಗುವವರಿಗೆ ಪ್ಯಾಕೇಜ್ ಲಭ್ಯವಾಗಲಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬಿಎಸ್‌ಎನ್‌ಎಲ್ ನೌಕರರು. ಶೇ.125ರಷ್ಟು ವೇತನ: ಬಿಎಸ್‌ಎನ್‌ಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ 50 ವರ್ಷ ಮೇಲ್ಪಟ್ಟ ನೌಕರರಿಗೆ ಸ್ವಯಂ ಪ್ರೇರಣೆಯಿಂದ ನಿವೃತ್ತರಾಗಲು ಶೇ.125ರ ಪ್ಯಾಕೇಜ್ ಘೋಷಿಸಿದೆ. ಅಂದರೆ ಜ.31ರಂದು ನಿವೃತ್ತರಾಗುವವರಿಗೆ ತಮ್ಮ ನಿವೃತ್ತಿ ದಿನದವರೆಗೆ ಸಿಗುವ ಒಟ್ಟು ವೇತನದ ಲೆಕ್ಕಾಚಾರದ ಮೇಲೆ ಶೇ.25ರಷ್ಟು ಹೆಚ್ಚಿನ ಹಣ ನೀಡಲಿದೆ. ನಿವೃತ್ತಿ ವೇಳೆ ಒಂದು ಕಂತು ನೀಡಿದರೆ ಮತ್ತೂಂದು ಕಂತನ್ನು ಜೂನ್ ತಿಂಗಳಲ್ಲಿ ನೀಡಲಾಗುತ್ತದೆ. ಅಂದರೆ ಮಾಸಿಕ 25 ಸಾವಿರ ವೇತನ ಪಡೆಯುವ ಒಬ್ಬ ನೌಕರರ 10 ವರ್ಷದ ನಂತರ ನಿವೃತ್ತಿ ಹೊಂದುವವರಾದರೆ ಅವರಿಗೆ 30 ಲಕ್ಷ ವೇತನದ ಜತೆಗೆ 7.5 ಲಕ್ಷ ರೂ. ಹೆಚ್ಚಿಗೆ ಸಿಗಲಿದೆ.
ಪಿಎಫ್‌ಗೆ ಸಲ್ಲಿಸಬೇಕಾದ ಮೊತ್ತವನ್ನು ಕಡಿತ ಮಾಡಿ, ಉಳಿದ ಹಣ ನೀಡಲಾಗುತ್ತದೆ. ಇದನ್ನು ಬಹುಪಾಲು ನೌಕರರು ಒಪ್ಪಿಕೊಂಡು ಸ್ವಯಂ ನಿವೃತ್ತಿ ಪಡೆಯಲು ಮುಂದಾಗುತ್ತಿದ್ದಾರೆ. 125 ಜನ ಮಾತ್ರ ಉಳಿತಾರೆ: ಬಿಎಸ್‌ಎನ್‌ಎಲ್ ಸಂಸ್ಥೆಯಡಿ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟಾರೆ 300 ಜನ ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ ಬಳ್ಳಾರಿ ನಗರ ವ್ಯಾಪ್ತಿಯಲ್ಲಿ 82 ಜನ, ಹೊಸಪೇಟೆಯಲ್ಲಿ 40 ಜನ, ಸಿರಗುಪ್ಪ 7, ಕೂಡ್ಲಿಗಿ 6, ಸಂಡೂರು 5, ಹಗರಿಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ 5, ಹರಪನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ 11, ಹೂವಿನ ಹಡಗಲಿಯಲ್ಲಿ 9 ಜನ ಸೇವೆ ಸಲ್ಲಿಸುತ್ತಿರುವವರು ಸ್ವಯಂ ನಿವೃತ್ತರಾಗಲಿದ್ದಾರೆ.
ಫೆ.1ರಿಂದ ಸಮಸ್ಯೆ ಶುರು: ಭಾರತ್ ಸಂಚಾರ ನಿಗಮ ನಿಯಮಿತದಿಂದ ಹಾಲಿ ಲಭ್ಯ ಇರುವ ಇಂಟರ್ ನೆಟ್, ಸ್ಥಿರ ದೂರವಾಣಿ, ಮೊಬೈಲ್ ಸೇವೆಯಲ್ಲಿ ಕೆಲ ಸಮಸ್ಯೆಗಳು ಉದ್ಭವಿಸುವುದು ಖಚಿತ ಎನ್ನಲಾಗುತ್ತಿದೆ. ಹಾಲಿ ನಿವೃತ್ತರಾಗುತ್ತಿರುವ ನೌಕರರ ಪೈಕಿ 107 ಜನ ಲೈನ್ ನಿರ್ವಹಣೆಯಲ್ಲಿ ತೊಡಗಿಸಿಕೊಂಡವರಿದ್ದಾರೆ. ಇವರ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡುವ ಕುರಿತು ಇನ್ನೂ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ ಬಿಎಸ್‌ಎನ್‌ಎಲ್‌ನ ಸೇವೆಯಲ್ಲಿ ಫೆ.1ರಿಂದ ಸಮಸ್ಯೆಗಳು ಎದುರಾಗುವುದು ಖಚಿತ ಎನ್ನಲಾಗುತ್ತಿದೆ.
ಕೇಂದ್ರ ಸರ್ಕಾರ ಬಿಎಸ್‌ಎನ್ ಎಲ್‌ನಲ್ಲಿ ಸೇವೆ ಸಲ್ಲಿಸುತ್ತಿರುವ 50 ವರ್ಷ ಮೇಲ್ಪಟ್ಟ ನೌಕರರಿಗೆ ಸ್ವಯಂ ನಿವೃತ್ತಿ ಪಡೆಯಲು ವಿಶೇಷ ಪ್ಯಾಕೇಜ್ ಘೋಷಿಸಿದೆ. ಆ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ 175 ಮಂದಿ ಜ.31ರಂದು ನಿವೃತ್ತಿ ಪಡೆಯಲು ಮುಂದಾಗುತ್ತಿದ್ದಾರೆ. ಈಚೆಗೆ
ಸಂಸ್ಥೆಯಲ್ಲಿ ವೇತನಗಳು ಸಹ ಸರಿಯಾಗಿ ಪಾವತಿಯಾಗುತ್ತಿಲ್ಲ. ಕೇಂದ್ರ ಸರ್ಕಾರ ಕೇವಲ ಬಿಎಸ್‌ಎನ್‌ಎಲ್‌ಗೆ ಮಾತ್ರ ಈ ವಿಶೇಷ ಪ್ಯಾಕೇಜ್ ನೀಡುತ್ತಿದ್ದು, ಬೇರೆ ಇಲಾಖೆಯವರು ಇದೀಗ ಕೇಳುತ್ತಿದ್ದಾರೆ.
ದಾದಾ ಖಲಂದರ್,
ಡಿಜಿಎಂ, ಬಿಎಸ್‌ಎನ್‌ಎಲ್ ಬಳ್ಳಾರಿ.
ವೆಂಕೋಬಿ ಸಂಗನಕಲ್ಲು