ಬಳ್ಳಾರಿ: ಮೂರನೇ ಹಂತದ ಲಾಕ್ ಡೌನ್ ನಲ್ಲಿ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಸಿಎಲ್ 2, ಸಿಎಲ್ 11ಸಿ ಎಂಎಸ್ಐಎಲ್ ಮದ್ಯದ ಅಂಗಡಿಗಳು ತೆರೆದಿದ್ದು, ಮದ್ಯ ಪ್ರಿಯರು ಸಾಲುಗಟ್ಟಿ ನಿಂತು ಮದ್ಯ ಖರೀಸುತ್ತಿದ್ದಾರೆ.
ಕೋವಿಡ್-19 ವೈರಸ್ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಕಳೆದ ಮಾ.23 ರಿಂದ ದೇಶಾದ್ಯಂತ ಲಾಕ್‌ಡೌನ್ ವಿಧಿಸಿತು. ಆದ್ದರಿಂದ ಮದ್ಯ ಪ್ರಿಯರು ಕಳೆದ 45 ದಿನಗಳಿಂದ ದೂರ ಉಳಿದಿದ್ದರು. ಇದೀಗ ಮೂರನೇ ಹಂತದ ಲಾಕ್ ಡೌನ್ ಮೇ 4 ರಿಂದ ಜಾರಿಗೊಳಿಸಿರುವ ರಾಜ್ಯ ಸರ್ಕಾರ ಹಲವು ಕ್ಷೇತ್ರಗಳಿಗೆ ಸಡಿಲಿಕೆ ನೀಡುವುದರ ಜತೆಗೆ ಮದ್ಯ ಮಾರಾಟಕ್ಕೂ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲೂ ಮದ್ಯ ಪ್ರಿಯರು ಅಂಗಡಿಗಳ ಮುಂದೆ ಬೆಳಗ್ಗೆ 9 ಗಂಟೆಯಿಂದಲೇ ಸಾಲುಗಟ್ಟಿ ನಿಂತು ಮದ್ಯ ಖರೀದಿಯಲ್ಲಿ ತೊಡಗಿದ್ದಾರೆ.
ಇದೀಗ ಇದೇ ಮೇ4 ರಿಂದ ಮೂರನೇ ಹಂತದ ಲಾಕ್‌ಡೌನ್ ಆರಂಭವಾಗುವುದರ ಜತೆಗೆ ಸಿಎಲ್ 2 (ವೈನ್ ಸ್ಟೋರ್), ಸರ್ಕಾರಿ ಸ್ವಾಮ್ಯದ ಸಿಎಲ್ 11ಸಿ (ಎಂಎಸ್ಐಎಲ್) ಮದ್ಯದ ಅಂಗಡಿಗಳು ಸೋಮವಾರದಿಂದ ಮದ್ಯ ಮಾರಾಟಕ್ಕೆ ಅಣಿಯಾಗಿದ್ದು, ಕೇವಲ ಪಾರ್ಸಲ್ ಸೇವೆಗೆ ಮಾತ್ರ ಅವಕಾಶ ಕಲ್ಪಿಸಿದೆ.
ಜಿಲ್ಲೆಯಲ್ಲಿ 169 ಸಿಎಲ್2: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಸಿಎಲ್ -2 169, ಸಿಎಲ್ 11ಸಿ 41 ಸೇರಿ ಒಟ್ಟು 210 ಮದ್ಯದ ಅಂಗಡಿಗಳಿಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ. ಈ ಪೈಕಿ ಬಳ್ಳಾರಿ ರೇಂಜ್ 1 26, ರೇಂಜ್ 2 20, ಹೊಸಪೇಟೆ ರೇಂಜ್ 1 20, ರೇಂಜ್ 2 17, ಸಂಡೂರು ರೇಂಜ್ 17, ಸಿರುಗುಪ್ಪ 18, ಹ.ಬೊ.ಹಳ್ಳಿ ರೇಂಜ್ 10, ಹಡಗಲಿ 10, ಕೂಡ್ಲಿಗಿ 11, ಹರಪನಹಳ್ಳಿ 20 ಸೇರಿ ಒಟ್ಟು 169 ಸಿಎಲ್ ೨ ಮದ್ಯದ ಅಂಗಡಿಗಳಿಗೆ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ, ಇದರಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸಂಡೂರಿನ 2 ಮದ್ಯದ ಅಂಗಡಿಗಳು ಅಮಾನತಾಗಿದ್ದು, 167 ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸವೆ. ಇನ್ನು ಸರ್ಕಾರಿ ಸ್ವಾಮ್ಯದ ಸಿಎಲ್ 11ಸಿ (ಎಂಎಸ್‌ಐಎಲ್) ಬಳ್ಳಾರಿ ರೇಂಜ್ 1ರ 4, ಬಳ್ಳಾರಿ ರೇಂಜ್ 2ರ 6, ಹೊಸಪೇಟೆ ರೇಂಜ್ 1ರ 4, ರೇಂಜ್ 2ರ 3, ಸಂಡೂರು 3, ಸಿರುಗುಪ್ಪ 5, ಹ.ಬೊ.ಹಳ್ಳಿ 3, ಹಡಗಲಿ 4, ಕೂಡ್ಲಿಗಿ 6, ಹರಪನಹಳ್ಳಿ 3 ಸೇರಿ ಒಟ್ಟು 41 ಕಾರ್ಯನಿರ್ವಹಿಸಲಿವೆ ಎಂದು ಅಬಕಾರಿ ಡೆಪ್ಯೂಟಿ ಸೂಪರಿಂಡೆಂಟೆಂಟ್ ವಿನೋದ್ ಡಾಂಗೆ ತಿಳಿಸಿದರು.
ಮುಂಜಾಗ್ರತಾ ಕ್ರಮ ಕಡ್ಡಾಯ
ಮೇ 4 ರಿಂದ ಮಾರಾಟಕ್ಕೆ ಅಣಿಯಾಗಲಿರುವ ಸಿಎಲ್2, ಸಿಎಲ್ 11ಸಿ ಮದ್ಯದ ಅಂಗಡಿಗಳ ಬಳಿ ಜನರು ಹೆಚ್ಚು ಗುಂಪು ಸೇರದಂತೆ ಸಾಮಾಜಿಕ ಅಂತರ, ಸ್ಯಾನಿಟೈಸರ್‌ಗಳನ್ನು ಬಳಸುವುದು ಕಡ್ಡಾಯವಾಗಿದೆ. ಮದ್ಯದ ಅಂಗಡಿಗಳ ಮುಂದೆ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು. ಗ್ರಾಹಕರು ಸಾಲಾಗಿ ನಿಲ್ಲಲು ಪ್ರತಿ ಆರು ಅಡಿಗಳಿಗೆ ಗುರುತು ಹಾಕಬೇಕು. ಅಂಗಡಿ ಮುಂದೆ 5 ಜನಕ್ಕಿಂತ ಹೆಚ್ಚು ನಿಲ್ಲುವಂತಿಲ್ಲ. ಅಂಗಡಿಯೊಳಗಿನ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಮೂರು ಅಡಿ ಅಂತರವನ್ನು ಕಾಪಾಡಬೇಕು. ಅಲ್ಲದೇ, ಈ ಮೊದಲು ಬೆಳಗ್ಗೆ 10 ರಿಂದ ರಾತ್ರಿ 10.30 ವರೆಗೆ ಇದ್ದ ಸಮಯವನ್ನು ಇದೀಗ ಬೆಳಗ್ಗೆ 9 ರಿಂದ ರಾತ್ರಿ 7 ಗಂಟೆವರೆಗಷ್ಟೇ ಮದ್ಯ ಮಾರಾಟ ಮಾಡಲು ಸಮಯ ನಿಗದಿಪಡಿಸಲಾಗಿದೆ. ಜತೆಗೆ 12 ಬಾಟಲ್‌ಗಿಂತಲೂ ಹೆಚ್ಚು ಖರೀದಿಸುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.