ಬಳ್ಳಾರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್, ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ಪ್ರತಿಭಟನೆ ಎರಡನೇ ದಿನ ಬುಧವಾರ ನಗರದ ವಾಲ್ಮೀಕಿ ಭವನದಲ್ಲಿ ಮುಂದುವರೆಯಿತು.
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಈಚೆಗೆ ಹೊಸದಾಗಿ ನೇರ ನೇಮಕಾತಿಯಾದ ಹಿನ್ನೆಲೆಯಲ್ಲಿ ಇಲಾಖೆ ವ್ಯಾಪ್ತಿಯ ಹಾಸ್ಟೆಲ್, ವಸತಿ ಶಾಲೆಗಳಲ್ಲಿ ಕಳೆದ ಎರಡ್ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದ ಹೊರಗುತ್ತಿಗೆ ನೌಕರರನ್ನು ಕೈಬಿಡಲಾಗಿದೆ. ಪರಿಣಾಮ ಉದ್ಯೋಗವಿಲ್ಲದೆ, ಕಳೆದ 6 ತಿಂಗಳ ವೇತನವಿಲ್ಲದೇ ಬೀದಿಪಾಲಾಗಿರುವ ಹೊರಗುತ್ತಿಗೆ ನೌಕರರು ತಮ್ಮನ್ನು ಪುನಃ ಕರ್ತವ್ಯಕ್ಕೆ ಸೇರಿಸಿಕೊಳ್ಳಬೇಕು. ಬಾಕಿ ವೇತನ ಬಿಡುಗಡೆಗೊಳಿಸಬೇಕು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಹಾಸ್ಟೆಲ್, ವಸತಿ ಶಾಲಾ ಹೊರಗುತ್ತಿಗೆ ನೌಕರರ ರಾಜ್ಯ ಸಂಘದಿಂದ ನಗರದ ಆರೋಗ್ಯ ಮತ್ತು ಹಿಂದುಳಿದ ವರ್ಗಗಳ ಸಚಿವ ಬಿ. ಶ್ರೀರಾಮುಲು ನಿವಾಸದ ಎದುರು ಮಂಗಳವಾರ ಅನಿರ್ದಿಷ್ಟಾವ ಪ್ರತಿಭಟನೆ ನಡೆಸಿದ್ದರು.
ಮಂಗಳವಾರ ರಾತ್ರಿಯೂ ಪ್ರತಿಭಟನೆ ಮುಂದುವರೆಸಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಾನಿರತರನ್ನು ಬಸ್ ಗಳಲ್ಲಿ ಹತ್ತಿಸಿಕೊಂಡು ನಗರದ ವಾಲ್ಮೀಕಿ ಭವನ ಆವರಣದಲ್ಲಿ ಬಿಟ್ಟಿದ್ದರು. ಮರುದಿನ ಬುಧವಾರ ವಾಲ್ಮೀಕಿ ಭವನದಲ್ಲೇ ಧರಣಿಯನ್ನು ಮುಂದುವರೆಸಿದ್ದರು.
ಮಧ್ಯಾಹ್ನದ ಹೊತ್ತಿಗೆ ಧರಣಿ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಧರಣಿ ಕೈಬಿಡುವಂತೆ ಕೋರಿದರು. ಇದಕ್ಕೆ ಪ್ರತಿಭಟನಾನಿರತರು ಒಪ್ಪದ ಹಿನ್ನೆಲೆಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆಯಿತು. ಕೊನೆಗೆ ಪೊಲೀಸರು ಹೊರಗುತ್ತಿಗೆ ನೌಕರರನ್ನು ರಾಜ್ಯಾದ್ಯಂತ ಕೈಬಿಡಲಾಗಿದೆ. ಈ ವಿಷಯ ರಾಜ್ಯಮಟ್ಟಕ್ಕೆ ಸೇರಿದ್ದಾಗಿದ್ದು, ತಮ್ಮ ಬೇಡಿಕೆಯನ್ನು ಮುಂದಿಟ್ಟುಕೊಂಡು ಬಳ್ಳಾರಿ ಬದಲಿಗೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುವುದು ಸೂಕ್ತ ಎಂದು ಮನವೊಲಿಸಿದ ಹಿನ್ನೆಲೆಯಲ್ಲಿ ಪ್ರತಿಭಟನಾನಿರತರು ತಮ್ಮ ಧರಣಿಯನ್ನು ಕೈಬಿಟ್ಟರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಹೊರಗುತ್ತಿಗೆ ನೌಕರರು ಬುಧವಾರ ಸಂಜೆ ಹೊತ್ತಿಗೆ ತಮ್ಮ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಿದರು. ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ, ಉಪಾಧ್ಯಕ್ಷ ಜಂಬಯ್ಯನಾಯಕ ಸೇರಿದಂತೆ ಹೊರಗುತ್ತಿಗೆ ನೌಕರರು ಇದ್ದರು.