Advertisement

ಆನ್‌ಲೈನ್‌ ಪರೀಕ್ಷಾ ಪದ್ಧತಿ ಬೇಡ

03:27 PM Jan 02, 2020 | Naveen |

ಬಳ್ಳಾರಿ: ಐಟಿಐ ವಿದ್ಯಾರ್ಥಿಗಳಿಗೆ ಆನ್‌ ಲೈನ್‌ ಪರೀಕ್ಷಾ ಪದ್ಧತಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ನಗರದ ಡಿಸಿ ಕಚೇರಿ ಆವರಣದಲ್ಲಿ ಅಖೀಲ ಭಾರತ ಪ್ರಜಾಸತ್ತಾತ್ಮಕ ಯುವಜನರ ಒಕ್ಕೂಟದ ನೇತೃತ್ವದಲ್ಲಿ ಐಟಿಐ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

Advertisement

ಐಟಿಐ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪರೀಕ್ಷಾ ಪದ್ಧತಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಇದರಿಂದ ಐಟಿಐ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಗೊಂದಲಕ್ಕೀಡು ಮಾಡಿದೆ. ಕಳೆದ 2019ರ ಆಗಸ್ಟ್‌ ತಿಂಗಳಲ್ಲಿ ಹೊರಬೀಳಬೇಕಿದ್ದ ಪರೀಕ್ಷಾ ಫಲಿತಾಂಶವು ಇನ್ನು ಹೊರಬಿದ್ದಿಲ್ಲ. ಸಪ್ಲಿಮೆಂಟರಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವೂ ಮುಗಿದು ಹೋಗಿದೆ. ಆದರೆ, ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಜತೆಗೆ ಮೊದಲ ಬಾರಿಗೆ ಐಟಿಐ ವಿದ್ಯಾರ್ಥಿಗಳಿಗೂ ಪರೀಕ್ಷಾ ಶುಲ್ಕಕ್ಕೆ ಜಿಎಸ್‌ಟಿ ವಿಧಿಸುವ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಇದು ಅತ್ಯಂತ ಖಂಡನೀಯವಾಗಿದ್ದು, ಆರ್ಥಿಕವಾಗಿ ದುರ್ಬಲ ಕುಟುಂಬಗಳಿಂದ ಬರುವ ಐಟಿಐ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಸುವುದೇ ಭಾರವಾಗಿರುವಾಗ ಡಿಜಿಇಟಿ ಆನ್‌ಲೈನ್‌ ಪರೀಕ್ಷಾ ಪದ್ಧತಿ ಜಾರಿಗೆ ತರುವುದು, ಜಿಎಸ್‌ಟಿ ವಿಧಿಸುವುದು ಅತ್ಯಂತ ಖಂಡನೀಯ ಕ್ರಮ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.

ಐಟಿಐ ತರಬೇತಿಯು ಕುಶಲತೆ, ಕಾರ್ಯ ಕಲಿಕೆಗೆ ಹೆಚ್ಚು ಒತ್ತು ಇರುವ ತರಬೇತಿ. ಅಲ್ಲಿ ಪ್ರ್ಯಾಕ್ಟಿಕಲ್‌ಗೆ ಥಿಯರಿಗಿಂತ ಹೆಚ್ಚು ಒತ್ತು ಇರುವುದು ಸಹಜ. ಅದಕ್ಕಾಗಿಯೇ ಇದನ್ನು ಕೈಗಾರಿಕಾ ತರಬೇತಿ ಎಂದು ಕರೆಯುವುದು. ಒಬ್ಬ ವ್ಯಕ್ತಿಯು ತರಬೇತಿಯನ್ನು ಪೂರೈಸಿದ ಬಳಿಕ, ಆತನ ಕಲಿಕೆಯ ಮಟ್ಟವನ್ನು ತುಲನೆ ಮಾಡಲು ಆತನ ಕಾರ್ಯ ಕೌಶಲ್ಯ ನೋಡಿ ಮೌಲ್ಯಮಾಪನ ಮಾಡಬೇಕೆ ವಿನಃ ಆನ್‌ ಲೈನ್‌ ಪರೀಕ್ಷೆಯ ಮೂಲಕ ಅದನ್ನು ಮಾಡಲು ಸಾಧ್ಯವಿಲ್ಲ. ಜತೆಗೆ, ಥಿಯರಿ ಭಾಗವು ಪಠ್ಯಕ್ರಮಗಳಲ್ಲಿ ಇನ್ನೂ ಹೆಚ್ಚಿರುವ ಇನ್ನಿತರ ಎಂಜಿನಿಯರಿಂಗ್‌ ವಿದ್ಯಾಭ್ಯಾಸ ಕ್ರಮಗಳಿಗೆ ಆನ್‌ಲೈನ್‌ ಪರೀಕ್ಷೆ ಜಾರಿಗೆ ಬಂದಿಲ್ಲದಿರುವುದು. ಈ ಕ್ರಮವು ತರಬೇತಿ ಪಡೆದವರನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಸಾಬೀತುಪಡಿಸುತ್ತದೆ.

ಮೇಲಾಗಿ ಆನ್‌ಲೈನ್‌ ಪರೀಕ್ಷೆಗೆ ಪೂರ್ವ ತಯಾರಿಯನ್ನೇ ಮಾಡಿಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ಆನ್‌ಲೈನ್‌ ಪರೀಕ್ಷೆ ನಡೆಸುವುದು ಸಮಂಜಸವಲ್ಲ. ಹಾಗಾಗಿ ಆನ್‌ಲೈನ್‌ ಪರೀಕ್ಷಾ ಪದ್ಧತಿ ಕೈ ಬಿಡಬೇಕು. ಪರೀಕ್ಷಾ ಶುಲ್ಕಕ್ಕೆ ವಿಧಿ ಸಿರುವ ಜಿಎಸ್‌ಟಿ ಕೈಬಿಡಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ನಗರದ ಮೋತಿ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಗಡಗಿ ಚನ್ನಪ್ಪ ವೃತ್ತದ ಮೂಲಕ ಡಿಸಿ ಕಚೇರಿಗೆ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

Advertisement

ಎಐಡಿವೈಒ ಜಗದೀಶ್‌ ನೇಮಕಲ್ಲು, ಗೋವಿಂದ್‌, ಜಿಲ್ಲಾ ಸದಸ್ಯ ಅಭಿಷೇಕ್‌ ಎಸ್‌. ಕಾಳೆ, ಸಂಘಟನಾಕಾರ ಕೇಶವ್‌, ನಿಖೀಲ್‌, ನವೀನ್‌, ಈಶ್ವರ್‌, ಲೋಕೇಶ್‌, ಭೀಮೇಶ್‌, ಗಣೇಶ್‌, ಬಿ.ಎಂ.ವಿನಾಯಕ, ಹರಿಕೃಷ್ಣಾ, ಮಂಜುನಾಥ್‌, ಆದರ್ಶ ಸೇರಿದಂತೆ ನೂರಾರು ಐಟಿಐ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next