Advertisement

ಆನ್‌ಲೈನ್‌ ಪಾಠ: ಸೋಮವಾರ ಸ್ಪಷ್ಟ ನಿರ್ಧಾರ

06:50 PM Jun 08, 2020 | Naveen |

ಬಳ್ಳಾರಿ: ಆನ್‌ಲೈನ್‌ ಮೂಲಕ ಶಿಕ್ಷಣ ನೀಡುವುದಕ್ಕೆ ಸಂಬಂಧಿಸಿದಂತೆ ಸೋಮವಾರ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಸುರೇಶಕುಮಾರ್‌ ಅವರು ತಿಳಿಸಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜೂ. 25ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಪೂರ್ವ ಪ್ರಾಥಮಿಕ ಶಾಲೆಗಳಿಗೆ ಆನ್‌ಲೈನ್‌ ಶಿಕ್ಷಣ ಯಾವುದೇ ಕಾರಣಕ್ಕೂ ನೀಡಬಾರದು. ಯಾವ ವಯಸ್ಸಿನ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ನೀಡಬಹುದು ಎಂಬುದರ ಬಗ್ಗೆ ಸುಧೀರ್ಘ‌ ಅಭಿಪ್ರಾಯಗಳು, ಚರ್ಚೆಗಳು ನಡೆದಿದ್ದು, ಸೋಮವಾರ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಲಾಗುವುದು. ಶೈಕ್ಷಣಿಕ ವರ್ಷ ಆರಂಭ ಕುರಿತು ಸರ್ಕಾರ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಭಿಪ್ರಾಯ ಸಂಗ್ರಹಿಸುವಂತೆ ಕೇಂದ್ರ ಸರ್ಕಾರ ಸುತ್ತೋಲೆ ಮುಖಾಂತರ ತಿಳಿಸಿರುವುದರಿಂದ ಪೋಷಕರು, ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದ್ದು, ಅವುಗಳನ್ನು ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಜೂನ್‌ 25 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಆರಂಭವಾಗಲಿದ್ದು, ಬಳ್ಳಾರಿ ಜಿಲ್ಲೆಯಲ್ಲಿ 114 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, 41618 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 26 ಉಪಕೇಂದ್ರಗಳು(ಬ್ಲಾಕ್‌) ಮಾಡಲಾಗಿದೆ ಎಂದು ಡಿಡಿಪಿಐ ರಾಮಪ್ಪ ಅವರು ಸಭೆಗೆ ವಿವರಿಸಿದರು. 8600 ಮಾಸ್ಕ್ಗಳು, 150 ಥರ್ಮಲ್‌ ಸ್ಕ್ಯಾನರ್‌, ಅಗತ್ಯವಿರುವಷ್ಟು ಸ್ಯಾನಿಟೈಸರ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ವ್ಯವಸ್ಥೆಗೆ 500 ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತಿದೆ. ಪರೀಕ್ಷೆಯಲ್ಲಿ ಮಕ್ಕಳ ಸುರಕ್ಷತೆಗೆ ಒತ್ತುಕೊಟ್ಟು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಈಗಾಗಲೇ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರೊಂದಿಗೆ ಎರಡು ಬಾರಿ ಸಭೆ ನಡೆಸಲಾಗಿದೆ. ಗಡಿಯಾಚೆಗಿನ ವಿದ್ಯಾರ್ಥಿಗಳು 9 ಜನರಿದ್ದು, ಅವರಲ್ಲಿ ಇಬ್ಬರು ರಾಜಸ್ಥಾನದವರಾಗಿದ್ದಾರೆ. ಅವರು ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಉಳಿದ 7 ವಿದ್ಯಾರ್ಥಿಗಳು ಆಂಧ್ರಪ್ರದೇಶದವರಾಗಿದ್ದು, ಇವರಿಗೆ ಜಿಲ್ಲಾಧಿಕಾರಿಗಳು ಪಾಸ್‌ ವಿತರಿಸುವುದಾಗಿ ತಿಳಿಸಿದ್ದಾರೆ ಎಂದರು. ಸಭೆಯಲ್ಲಿ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಡಿಸಿ ಎಸ್‌.ಎಸ್‌. ನಕುಲ್‌, ಜಿಪಂ ಸಿಇಒ ಕೆ.ನಿತೀಶ್‌, ಎಸ್ಪಿ ಸಿ.ಕೆ.ಬಾಬಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತೆ ನಳಿನಿ ಅತುಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next