Advertisement

ಬರ ಪರಿಸ್ಥಿತಿ ಅರಿತು ನಿರ್ವಹಣೆ ಕೈಗೊಳ್ಳಿ

03:32 PM May 16, 2019 | Team Udayavani |

ಬಳ್ಳಾರಿ: ಬರ ಪರಿಸ್ಥಿತಿ ನಿರ್ವಹಣೆ ಸಂಬಂಧ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಬರ ಪರಿಸ್ಥಿತಿಯ ಸ್ಥಿತಿಗತಿ ಅರಿಯಬೇಕು. ಪ್ರತಿದಿನ ನಿಗಾವಹಿಸಿ ಪರಿಣಾಮಕಾರಿಯಾಗಿ ಬರ ಪರಿಸ್ಥಿತಿ ನಿರ್ವಹಣೆ ಮಾಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಬರಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಗೃಹ ಕಚೇರಿ ಕೃಷ್ಣ ಮೂಲಕ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒಗಳೊಂದಿಗೆ ಬುಧವಾರ ವಿಡಿಯೋ ಸಂವಾದ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.

ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರು ಸಂರಕ್ಷಣೆಗಾಗಿ ಮೇವು ಲಭ್ಯತೆ, ಗೋಶಾಲೆ ಹಾಗೂ ಮೇವು ಬ್ಯಾಂಕ್‌, ಗುಳೆ ತಡೆಗಟ್ಟುವ ನಿಟ್ಟಿನಲ್ಲಿ ಉದ್ಯೋಗ ಸೃಜನೆ ಕಾಮಗಾರಿಗಳ ಪ್ರಗತಿ ಸೇರಿದಂತೆ ವಿವಿಧ ರೀತಿಯ ಬರ ಪರಿಸ್ಥಿತಿ ನಿರ್ವಹಣೆ ಕೆಲಸಗಳನ್ನು ಸಮರ್ಪಕವಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು. ಈ ಕುರಿತು ನಿತ್ಯ ನಿಗಾವಹಿಸಿ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೊಳವೆಬಾವಿ ಕೊರೆಯಲು, ಬಾಡಿಗೆ ಪಡೆಯಲು, ಟ್ಯಾಂಕರ್‌ ಮೂಲಕ ನೀರು ಪೂರೈಸಲು ಸೇರಿದಂತೆ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಹಣದ ಕೊರತೆಯಿಲ್ಲ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 720 ಕೋಟಿ ರೂ. ಲಭ್ಯವಿದೆ. ಅದನ್ನು ಬಳಸಿಕೊಂಡು ಕೆಲಸ ಮಾಡಬೇಕು. ಪ್ರಸ್ತುತ ಟ್ಯಾಂಕರ್‌ ಹಾಗೂ ಖಾಸಗಿ ಬೋರ್‌ವೆಲ್ಗಳ ಮೂಲಕ 2999 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದರ ಪೈಕಿ ರಾಜ್ಯದಲ್ಲಿ ನೀರಿನ ಸಮಸ್ಯಾತ್ಮಕ 1632 ಗ್ರಾಮಗಳಲ್ಲಿ 2322 ಟ್ಯಾಂಕರ್‌ಗಳ ಮೂಲಕ ಹಾಗೂ 1367 ಗ್ರಾಮಗಳಿಗೆ 1873 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ರೂಪದಲ್ಲಿ ತೆಗೆದುಕೊಂಡು ನೀರು ಸರಬರಾಜು ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ 440 ವಾರ್ಡ್‌ಗಳಿಗೆ 271 ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಈ ಸಾಲಿನಲ್ಲಿ ಅತಿಹೆಚ್ಚು ಖಾಸಗಿ ಬೋರ್‌ವೆಲ್ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗಿದೆ. ನೀರು ಸರಬರಾಜು ಮಾಡಿದ ಟ್ಯಾಂಕರ್‌ಗಳು, ಬಾಡಿಗೆ ನೀಡಿದ ಕೊಳವೆ ಬಾವಿಗಳ ಮಾಲೀಕರಿಗೆ ಸಕಾಲದಲ್ಲಿ ಹಣ ಪಾವತಿಸಲು ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಪಿಡಿಒ, ತಾಪಂ ಇಒಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ಟ್ಯಾಂಕರ್‌ ನೀರು ಸರಬರಾಜು:
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಸಂಬಂಧ ಕೈಗೊಳ್ಳಲಾದ ಕ್ರಮಗಳ ಕುರಿತು ಸಿಎಂ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಸಿ ರಾಮ್‌ ಪ್ರಸಾತ್‌ ಮನೋಹರ್‌, ಜಿಲ್ಲೆಯಲ್ಲಿ 49 ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದ್ದು, ಅಲ್ಲಿ 80 ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ಆ ಸ್ಥಳದಲ್ಲಿ ಪಿಡಿಒಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದು, ನೀರು ಸರಬರಾಜು ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ. ನೀರು ಸರಬರಾಜು ಮಾಡಿದ ಟ್ಯಾಂಕರ್‌ಗಳು ಹಾಗೂ ಬಾಡಿಗೆ ರೂಪದಲ್ಲಿ ಒದಗಿಸಲಾದ ಕೊಳವೆಬಾವಿಗಳ ಮಾಲೀಕರಿಗೆ ಏಪ್ರಿಲ್ವರೆಗೆ ಒಟ್ಟು 167 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ ಎಂದರು.

Advertisement

ಜಿಲ್ಲೆಯಲ್ಲಿ 5 ಮೇವು ಬ್ಯಾಂಕ್‌, 2 ಗೋಶಾಲೆ ಆರಂಭಿಸಲಾಗಿದ್ದು, ಗೋಶಾಲೆಗಳಲ್ಲಿ 5021 ಜಾನುವಾರುಗಳು ದಾಖಲಾಗಿವೆ. 1021 ಟನ್‌ ಮೇವನ್ನು ಸೇವಿಸಿವೆ. ನರೇಗಾದಲ್ಲಿಯೂ ಸಹ ನಮ್ಮ ಜಿಲ್ಲೆ ಉತ್ತಮ ಸಾಧನೆ ತೋರಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ನಿತೀಶ್‌, ಎಡಿಸಿ ಸತೀಶ್‌ ಕುಮಾರ್‌ ಸೇರಿದಂತೆ ಇತರರಿದ್ದರು.

ನರೇಗಾ ಪ್ರಗತಿಗೆ ಸಿಎಂ ಮೆಚ್ಚುಗೆ
ಜಿಲ್ಲೆಯಲ್ಲಿ ಗುಳೆ ತಡೆಗಟ್ಟುವ ನಿಟ್ಟಿನಲ್ಲಿ ನರೇಗಾ ಯೋಜನೆ ಉತ್ತಮ ಪ್ರಗತಿ ಸಾಧಿಸಿದ್ದು, ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಕೃಷ್ಣಭೈರೇಗೌಡ, ಆರ್‌.ವಿ.ದೇಶಪಾಂಡೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next