ಬಳ್ಳಾರಿ: ಕೋವಿಡ್ ವೈರಸ್‌ನ ಲಾಕ್‌ಡೌನ್ ಬಿಸಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೆಳೆಯಲಾಗಿರುವ ಈರುಳ್ಳಿಗೂ ತಟ್ಟಿದೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ, ಖರೀದಿಸಲು ವರ್ತಕರು ಬಾರದೇ ನೂರಾರು ಕ್ವಿಂಟಾಲ್ ಈರುಳ್ಳಿ ಹೊಲಗಳಲ್ಲೇ ರಾಶಿ ಬಿದ್ದಿದೆ. ಒಂದುವೇಳೆ ರೈತರೇ ಬೆಂಗಳೂರಿನ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಿದರೂ, ಅಲ್ಲಿಂದ ವಾಪಸ್ ಬರಲು ಸಾರಿಗೆ ಸೌಲಭ್ಯವಿಲ್ಲದೇ ಮನೆಯಲ್ಲೇ ಕೂರುವಂತಾಗಿದೆ.
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹಡಗಲಿ, ಕೊಟ್ಟೂರು, ಹೊಸಪೇಟೆ, ಕೂಡ್ಲಿಗಿ ಸೇರಿ ವಿವಿಧ ತಾಲೂಕುಗಳಲ್ಲಿ ಈ ಬಾರಿ ಹೆಚ್ಚಿನ ರೈತರು ಈರುಳ್ಳಿ ಬೆಳೆದಿದ್ದಾರೆ. ಉತ್ತಮ ಇಳುವರಿ ಕೂಡ ಬಂದಿದೆ. ಒಬ್ಬೊಬ್ಬ ರೈತರು ಸುಮಾರು 100 ರಿಂದ 150 ಕ್ವಿಂಟಾಲ್ ಈರುಳ್ಳಿ ಬೆಳೆದಿದ್ದಾರೆ. ಎಲ್ಲವೂ ಮಾರುಕಟ್ಟೆಗೆ ಕೊಂಡೊಯ್ಯಲು ಸಿದ್ಧವಾಗಿದೆ. ಆದರೆ, ಕೋವಿಡ್ ಲಾಕ್‌ಡೌನ್ ಪರಿಣಾಮದಿಂದ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲವಾಗಿದೆ.
ಈಚೆಗೆ ಬಳ್ಳಾರಿಗೆ ಬಂದಿದ್ದ ಕೃಷಿ ಸಚಿವ ಬಿ.ಸಿ. ಪಾಟೀಲ್, ಕೃಷಿ, ತೋಟಗಾರಿಕೆ ಉತ್ಪನ್ನಗಳ ಸಾಗಾಣಿಕೆಗೆ ಯಾವುದೇ ನಿಯಮಗಳು ಅಡ್ಡಿಯಾಗಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ, ವರ್ತಕರು ಈರುಳ್ಳಿ ಖರೀದಿಸಲು ಬರದೇ ಇರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಿದೆ.
ಬೆಲೆಯಿದ್ದರೂ ಸಾಗಿಸುವಂತಿಲ್ಲ: ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೊಟ್ಟೂರು ತಾಲೂಕುಗಳಲ್ಲಿ ಬೆಳೆದ ಈರುಳ್ಳಿಗೆ ಬೆಂಗಳೂರಿನ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆಯುತ್ತದೆ. ಹಲವು ವರ್ಷಗಳಿಂದ ಈ ಭಾಗದ ರೈತರು ಬೆಂಗಳೂರಿನಲ್ಲೇ ಮಾರಾಟ ಮಾಡುತ್ತಿದ್ದಾರೆ. ಸದ್ಯ ಕ್ವಿಂಟಲ್ ಈರುಳ್ಳಿಗೆ 2500 ರೂ. ಇದೆ. ರೈತರೇ ಬಾಡಿಗೆ ವಾಹನ ಮಾಡಿಕೊಂಡು ಈರುಳ್ಳಿಯನ್ನು ಬೆಂಗಳೂರು ಮಾರುಕಟ್ಟೆಗೆ ಕೊಂಡೊಯ್ದರೆ ಉತ್ತಮ ಬೆಲೆ ದೊರೆಯಲಿದೆ. ಆದರೆ, ಈರುಳ್ಳಿಯನ್ನು ಕೊಂಡೊಯ್ದವರಿಗೆ ವಾಪಸ್ ಬರಲು ವಾಹನ ಸೌಲಭ್ಯವಿಲ್ಲ. ಈಚೆಗೆ ಈರುಳ್ಳಿಯನ್ನು ಬೆಂಗಳೂರಿಗೆ ಕೊಂಡೊಯ್ದ ರೈತರೊಬ್ಬರು ಕಾಲ್ನಡಿಗೆ ಮೂಲಕ ಊರು ಸೇರಿದ್ದಾರೆ.
ಹಾಗಾಗಿ ನಾವು ಈರುಳ್ಳಿಯನ್ನು ಬೆಂಗಳೂರಿಗೆ ಕೊಂಡೊಯ್ಯಲು ಸ್ವಲ್ಪ ಹಿಂದೇಟು ಹಾಕುತ್ತಿದ್ದೇವೆ ಎಂದು ಈರುಳ್ಳಿ ಬೆಳೆಗಾರ ಕೊಟ್ಟೂರಿನ ರಾಮನಗೌಡ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಚಿಲ್ಲರೆ ಮಾರಾಟದಿಂದ ನಷ್ಟ: ಕ್ವಿಂಟಲ್‌ಗಟ್ಟಲೆ ದಾಸ್ತಾನಿರುವ ಈರುಳ್ಳಿಯನ್ನು ಸ್ಥಳೀಯ ವರ್ತಕರು ಕೆಜಿಗೆ 6, 8, 10 ರೂ.ಗಳಿಗೆ ಕೇಳುತ್ತಿದ್ದಾರೆ. ಇದರಿಂದ ರೈತರಿಗೆ ತುಂಬಾ ನಷ್ಟವಾಗಲಿದೆ. ಈರುಳ್ಳಿ ಬೆಳೆಯಲು ಎಕರೆಗೆ ಸುಮಾರು 80 ಸಾವಿರ ರೂ. ವೆಚ್ಚವಾಗಿದೆ.
ಈರುಳ್ಳಿ ತುಂಬಲು ತಂದಿದ್ದ ಗೋಣಿಚೀಲ ಒಂದಕ್ಕೆ 20 ರಿಂದ 25 ರೂ. ಇದೆ. ಅಂತಹದ್ದರಲ್ಲಿ ವರ್ತಕರು ಕೆಜಿ ಈರುಳ್ಳಿಯನ್ನು 6, 10 ರೂ. ಗಳಂತೆ ಖರೀದಿಸಿದರೆ ರೈತರು ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಕ್ವಿಂಟಲ್‌ಗಟ್ಟಲೆ ಖರೀದಿಸಿದರೆ ಒಂದಷ್ಟು ಉಳಿಯಲಿದೆ. ಏ.20ರ ನಂತರ ಪರಿಸ್ಥಿತಿ ನೋಡಿಕೊಂಡು ನಾವೇ ಏನಾದರೂ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಕೋವಿಡ್ ವೈರಸ್, ಲಾಕ್‌ಡೌನ್ ಪರಿಣಾಮ ಈರುಳ್ಳಿ ಖರೀದಿಸಲು ವರ್ತಕರಾರೂ ಮುಂದೆ ಬರುತ್ತಿಲ್ಲ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಒಳ್ಳೆಯ ಬೆಲೆಯಿದ್ದು, ಇಲ್ಲಿಂದ ಕೊಂಡೊಯ್ದು ಮಾರಿದರೂ ಅಲ್ಲಿಂದ ವಾಪಸ್ ಬರಲು ವಾಹನ ವ್ಯವಸ್ಥೆಯಿಲ್ಲ. ಈ ಕುರಿತು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರಿಗೂ ದೂರವಾಣಿ ಕರೆ ಮೂಲಕ ಗಮನ ಸೆಳೆದಿದ್ದೇವೆ. ರೈತರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಹೇಳಲಾಗಿದೆ.
ರಾಮನಗೌಡ,
ಈರುಳ್ಳಿ ಬೆಳೆಗಾರ, ಕೊಟ್ಟೂರು.
ವೆಂಕೋಬಿ ಸಂಗನಕಲ್ಲು