ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ (2019)ಯನ್ನು ವಿರೋಧಿಸಿ ಅಖೀಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಒಕ್ಕೂಟದ ಸಹಯೋಗದಲ್ಲಿ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸುವ ಮೂಲಕ ಕರಾಳ ದಿನವನ್ನಾಗಿ ಆಚರಿಸಿದರು.
ಎನ್‌ಎಂಸಿ ಮಸೂದೆಯನ್ನು ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕರಿಸಿರುವುದನ್ನು ಭಾರತೀಯ ವೈದ್ಯಕೀಯ ಸಂಘ ವಿರೋಧಿಸುತ್ತದೆ. ಮಸೂದೆ ಅಂಗೀಕಾರಕ್ಕೂ ಮುನ್ನ ರಾಜ್ಯ ಸೇರಿ ದೇಶಾದ್ಯಂತ ವಿರೋಧ ವ್ಯಕ್ತಪಡಿಸಿದ್ದನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ. ಇದೊಂದು ಅಪ್ರಜಾತಾಂತ್ರಿಕವಾಗಿದ್ದು, ಭಾರತದ ವೈದ್ಯಕೀಯ ಇತಿಹಾಸದಲ್ಲೇ ನಿಜಕ್ಕೂ ಇಂದು ಕರಾಳ ದಿನವಾಗಿದೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಎನ್‌ಎಂಸಿ ಮಸೂದೆ ಜಾರಿಯಿಂದಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ನೆಕ್ಸ್r (ನ್ಯಾಷನಲ್ ಲೆವೆಲ್ ಎಕ್ಸಿಟ್ ಟೆಸ್ಟ್) ಪರೀಕ್ಷೆಯನ್ನು ಜಾರಿಗೆ ತರಲಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ ಮಾತ್ರ ವಿದ್ಯಾರ್ಥಿಗಳು ಎಂಬಿಬಿಎಸ್ ವ್ಯಾಸಂಗ ಪೂರ್ಣಗೊಳಿಸಿದಂತಾಗಲಿದ್ದು, ಜತೆಗೆ ಕ್ಲಿನಿಕಲ್ ಪ್ರಾಕ್ಟೀಸ್ ಮಾಡಲು ಸಾಧ್ಯವಾಗಲಿದೆ. ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೂ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಅನಿವಾರ್ಯವಾಗಲಿದೆ. ವಿದೇಶಿ ವೈದ್ಯಕೀಯ ಪದವೀಧರ ವಿದ್ಯಾರ್ಥಿಗಳಿಗೂ ಇದೇ ಸ್ಕ್ರೀನಿಂಗ್ ಪರೀಕ್ಷೆಯಾಗಲಿದೆ. ಈ ಮೂಲಕ ವಿದೇಶಿ ವಿದ್ಯಾರ್ಥಿಗಳಿಗಿರುವ ವಿಶೇಷ ಸ್ಕ್ರೀನಿಂಗ್ ಪರೀಕ್ಷೆಯನ್ನು ತೆಗೆದುಹಾಕಿ, ಕೋಚಿಂಗ್ ಸೆಂಟರ್‌ಗಳ ದಂಧೆಗೆ ಕುಮ್ಮಕ್ಕು ನೀಡುತ್ತ ವೈದ್ಯಕೀಯ ಶಿಕ್ಷಣವನ್ನು ಜಾಗತಿಕ ಸರಕನ್ನಾಗಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಎಕ್ಸಿಟ್ ಟೆಸ್ಟ್‌ನಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನಾವಶ್ಯಕ ಹೊರೆಯಾಗಲಿದೆ. ವೈದ್ಯಕೀಯ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣ, ವ್ಯಾಪಾರೀಕರಣ ಮಾಡುವುದು ಕೇಂದ್ರ ಸರ್ಕಾರದ ಹುನ್ನಾರವಾಗಿದೆ ಎಂದು ದೂರಿದರು.
ಎನ್‌ಎಂಸಿ ಮಸೂದೆಯು ಜಾರಿಗೆ ಬಂದಲ್ಲಿ, ವೈದ್ಯಕೀಯ ಶಿಕ್ಷಣದ ಸ್ವಾಯತ್ತತಾ ನಿಯಂತ್ರಕ ಸಂಸ್ಥೆಯಾದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಬದಲಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಮ್‌ಸಿ) ಅಸ್ಥಿತ್ವಕ್ಕೆ ಬರುತ್ತದೆ. ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಮ್‌ಸಿ) ಸಂಪೂರ್ಣವಾಗಿ ಅಧಿಕಾರಶಾಹಿ ಧೋರಣೆವುಳ್ಳ ಸಂಸ್ಥೆಯಾಗಿದ್ದು, ಅದರ ಬಹುಪಾಲು ಸದಸ್ಯರು ವೈದ್ಯಕೀಯ ಕ್ಷೇತ್ರವಲ್ಲದ, ಸರ್ಕಾರ ನೇಮಿಸಿರುವ ವ್ಯಕ್ತಿಗಳಾಗಿರುತ್ತಾರೆ. ಅಲ್ಲದೆ ಇಡೀ ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರವನ್ನು ಮತ್ತಷ್ಟು ವ್ಯಾಪಾರಕ್ಕಿಡುವ ಉದ್ದೇಶದಿಂದ ಈ ಎನ್‌ಎಂಸಿ ಮಸೂದೆ ಜಾರಿಯಾಗುತ್ತಿದೆ. 2017ರಲ್ಲಿ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಹಿಂಪಡೆದಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಸೂದೆಯನ್ನು ವಿರೋಧದ ನಡುವೆಯೂ ಏಕಪಕ್ಷೀಯವಾಗಿ ಅಂಗೀಕರಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ. ಆದ್ದರಿಂದ ಮಸೂದೆಯನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು. ಬಳಿಕ ಮಸೂದೆಯ ಪ್ರತಿಕೃತಿಯನ್ನು ದಹಿಸಿದರು.
ಪ್ರತಿಭಟನೆಯಲ್ಲಿ ಐಎಂಎ ಜಿಲ್ಲಾ ಕಾರ್ಯದರ್ಶಿ ಡಾ| ಗೋವರ್ಧನ್, ಎಐಡಿಎಸ್‌ಒ ರಾಜ್ಯಾಧ್ಯಕ್ಷ ಡಾ| ಪ್ರಮೋದ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಗೋವಿಂದ್, ಜಿಲ್ಲಾಧ್ಯಕ್ಷ ಸುರೇಶ್.ಜಿ, ಉಪಾಧ್ಯಕ್ಷ ಗುರಳ್ಳಿ ರಾಜ, ಜಿಲ್ಲಾ ಕಾರ್ಯದರ್ಶಿ ರವಿಕಿರಣ್ ಜೆ.ಪಿ, ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯ ಈರಣ್ಣ, ರಂಗಸ್ವಾಮಿ, ಶಾಂತಿ, ಮಂಜು, ನಿಂಗರಾಜ್ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.