ಬಳ್ಳಾರಿ: ಇಲ್ಲಿವರೆಗೂ ಯಾರೂ ನಿಗಮದ ಹಣಕ್ಕೆ ಕೈ ಹಾಕಿರಲಿಲ್ಲ, ಇದೇ ಪ್ರಥಮವಾಗಿ ಆಗಿರುವುದು. ಸರ್ಕಾರ ಎಸ್ಐಟಿ ತನಿಖೆ ಕೊಟ್ಟಿದ್ದಾರೆ, ಆದರೆ ಸಚಿವರ ರಾಜಿನಾಮೆ ಕೊಟ್ಟಿಲ್ಲ. ರಾಜಿನಾಮೆ ಕೊಡಿಸಲು ಸಿಎಂ ಗೆ ಆಗುತ್ತಿಲ್ಲ. ಆದಷ್ಟು ಬೇಗ ನೈತಿಕತೆ ಹೊತ್ತು ರಾಜಿನಾಮೆಯನ್ನು ಸಿಎಂ ಪಡೆಯಬೇಕು. ಈ ಪ್ರಕರಣವನ್ನ ಸಿಬಿಐ ಗೆ ಕೊಡಬೇಕು, ಮಂತ್ರಿಗಳು ಆದಷ್ಟು ಬೇಗ ರಾಜಿನಾಮೆ ಕೊಡಬೇಕು ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ವ್ಯಾಪಕವಾಗಿ ಭ್ರಷ್ಟಾಚಾರ ಆಗಿ, ಅಮಾಯಕ ಚಂದ್ರಶೇಖರ ಜೀವ ಬಲಿಯಾಗಿದೆ. ಇದು ಆತ್ಮಹತ್ಯೆ ಅಲ್ಲ, ಅಮಾಯಕನ ಬಲಿ ಎಂದು ಹೇಳಬಹುದು. ಸಚಿವರು ರಾಜೀನಾಮೆ ಕೊಡುವವರೆಗೂ ಬಿಜೆಪಿ ಹೋರಾಟ ಮಾಡುತ್ತದೆ. ಸಚಿವರು ಮೀಸಲು ಕ್ಷೇತ್ರದಿಂದ ಗೆದ್ದವರು, ಸಮುದಾಯದ ಹಿತ ಕಾಯಬೇಕಿತ್ತು ಎಂದರು.
ಎಸ್ಟಿ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ ಬೇಕೆಂದು ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಬೇಡಿಕೆಯಿತ್ತು. ಆಗ ನಾನು ಮತ್ತು ಸಿಎಂ ಮಾತನಾಡಿ ಕೇಂದ್ರ ಸರ್ಕಾರದಲ್ಲೂ ಈ ಸಚಿವಾಲಯ ಇದೆ, ನಾವು ಮಾಡಲೇ ಬೇಕು ಎಂದು ತೀರ್ಮಾನ ತೆಗೆದುಕೊಂಡಿದ್ದೆವು. ಆದರೆ, ಈಗ ಆ ಸಮುದಾಯದ ಹಣವನ್ನು ಕೊಳ್ಳೆ ಹೊಡೆಯುವ ಕೆಲಸ ಆಗಿದೆ ಎಂದು ರಾಮುಲು ಹೇಳಿದರು.
ಎಕ್ಸಿಟ್ ಪೋಲ್ ನಲ್ಲಿ 350 ಕ್ಕೂ ಹೆಚ್ಚು ಸ್ಥಾನ ಎನ್ ಡಿಎ ಗೆಲ್ಲುತ್ತದೆಂದು ಬಂದಿದೆ. ಹೀಗಾಗಿ ಮೋದಿ ಅವರು ಹ್ಯಾಟ್ರಿಕ್ ಪ್ರಧಾನಿ ಆಗಲಿದ್ದಾರೆ. ಕರ್ನಾಟಕದಲ್ಲೂ 20 ರಿಂದ 24 ಬಿಜೆಪಿ ಗೆಲ್ಲಲಿದೆ ಎಂದು ಎಕ್ಸಿಟ್ ಪೊಲ್ ನಲ್ಲಿ ಗೊತ್ತಾಗಿದೆ. ಜನರು ಮೋದಿ ನೇತೃತ್ವದ ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದರು.
ಇದೇ ರೀತಿ ಅಂತಿಮ ಫಲಿತಾಂಶ ಬಂದರೆ ರಾಜ್ಯದಲ್ಲಿ ಸರ್ಕಾರ ಬದಾಲಾಗಲಿದೆ ಎನ್ನುವ ಪ್ರಶ್ನೆ ಬರುವುದಿಲ್ಲ. ರಾಜ್ಯದ ಜನ ಅವರಿಗೆ ಐದು ವರ್ಷ ಆಡಳಿತ ಮಾಡಲು ಮ್ಯಾಂಡೇಟ್ ಕೊಟ್ಟಿದ್ದಾರೆ, ಹೀಗಾಗಿ ಭ್ರಷ್ಟಾಚಾರ ರಹಿತ ಸರ್ಕಾರ ಮಾಡಲಿ ಎಂದು ರಾಮುಲು ಹೇಳಿದರು.