ಬಳ್ಳಾರಿ: ಕಳೆದ 2014ರ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ನೀಡಿರುವ ಎಲ್ಲ ಭರವಸೆಗಳು ಹುಸಿಯಾಗಿವೆ ಎಂದು ಜೆಡಿಎಸ್ ಎಸ್‌ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ ಆರೋಪಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು, ದೇಶದ ಪ್ರತಿಯೊಬ್ಬ ನಾಗರಿಕರ ಖಾತೆಗೆ 15 ಲಕ್ಷ ರೂ. ಜಮಾಗೊಳಿಸುವುದಾಗಿ ಹೇಳಿದ್ದರು. ಅಚ್ಚೇ ದಿನ್ ಬರಲಿಲ್ಲ. ವಿದೇಶದಲ್ಲಿನ ಕಪ್ಪುಹಣವನ್ನು ತರುವುದಾಗಿ ಹೇಳಿದ್ದರು. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸಿ, ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದಾಗಿ ಮೋದಿ ಮತ್ತವರ ತಂಡ ದೇಶದ ಜನರಿಗೆ ಭರವಸೆ ನೀಡಿದ್ದರು. ಆದರೆ, ಐದು ವರ್ಷ ಅಧಿಕಾರ ಚಲಾಯಿಸಿದರೂ, ನೀಡಿದ ಭರವಸೆಗಳು ಈಡೇರಿಸಲಾಗಿಲ್ಲ ಎಂದು ಮೋದಿ ಮತ್ತು ಬಿಜೆಪಿ ವಿರುದ್ಧ ಗುಡುಗಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿದಂತೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಮತ್ತವರ ತಂಡದ ಆಟ ಏನೂ ನಡೆಯಲ್ಲ. ದೇಶದ ಜನರು ಪ್ರಜ್ಞಾವಂತರು. ಬುದ್ಧಿವಂತರಿದ್ದಾರೆ. ಈ ಬಾರಿ ಮೋದಿ ಆ್ಯಂಡ್ ಟೀಂಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿ ಅವರು ಅಂಗೈಲಿ ಆಸೆ ತೋರಿಸಿದರೆ ನಂಬಲು ಜನರು ದಡ್ಡರಲ್ಲ, ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಹರಿಹಾಯ್ದರು.
ದಿಲ್ಲಿಯಲ್ಲಿ ನಮ್ಮ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವ ಅಗತ್ಯವಿದೆ. ಎಲ್ಲ ಅರ್ಹತೆಗಳನ್ನು ಹೊಂದಿರುವ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಪಕ್ಷಗಳು ಉಗ್ರಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಕಳೆದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದಂತೆ ಈ ಬಾರಿಯೂ ಗೆಲುವು ಸಾಧಿಸಲಿದ್ದಾರೆ. ಗೆಲುವಿನ ಅಂತರ ಈ ಬಾರಿ ಕಳೆದ ಬಾರಿಗಿಂತ ದುಪ್ಪಟ್ಟಾಗಲಿದೆ. ಇದರಲ್ಲಿ ಯಾವುದೇ ಅನುಮಾನಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೈತ್ರಿ ಅಭ್ಯರ್ಥಿ ಉಗ್ರಪ್ಪ ಬುದ್ಧಿವಂತರು, ಅನುಭವಿ ರಾಜಕಾರಣಿಯಾಗಿದ್ದಾರೆ. ವಿವಿಧ ಉನ್ನತ ಸ್ಥಾನಗಳಲ್ಲಿ ಕೆಲಸ ನಿರ್ವಹಿಸಿದ ಅನುಭವವಿದೆ. ಇಂತವರಿಗೆ ಆದ್ಯತೆ ನೀಡಿದರೆ, ಜಿಲ್ಲೆಯ ನಾನಾ ರೀತಿಯಲ್ಲಿ ಅಭಿವೃದ್ಧಿಯಾಗಲಿದೆ. ಬಿಜೆಪಿ ಅವರಂತೆ ಸುಳ್ಳು ಭರವಸೆ, ಸುಳ್ಳು ಆಶ್ವಾಸನೆ ನೀಡುವ ವ್ಯಕ್ತಿ ಇವರಲ್ಲ. ಬಿಜೆಪಿ ಸರ್ಕಾರವನ್ನು ಕಿತ್ತೋಗೆಯಲು ಜಿಲ್ಲೆಯ ಪ್ರತಿಯೊಬ್ಬ ಮತದಾರರು ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಉಗ್ರಪ್ಪ ಅವರನ್ನು ಬೆಂಬಲಿಸಿ, ಆಶೀರ್ವಾದಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೊಟ್ರೇಶ್, ಮಂಜುನಾಥ್‌ಗೌಡ, ಕಾರೆಪ್ಪ, ಕೆ.ಹೊನ್ನಪ್ಪ, ಶೆಕ್ಷಾವಲಿ, ವಿಜಯಕುಮಾರಿ, ರಾಮೇಶ್ವರಿ, ಬಿ.ಎಂ.ಪಾಟೀಲ್, ಲಕ್ಷ್ಮೀಕಾಂತ್ ರೆಡ್ಡಿ ಸೇರಿದಂತೆ ಇನ್ನಿತರರಿದ್ದರು.