Advertisement

ಗಣಿನಾಡಲ್ಲಿ ಮೈತ್ರಿ ಅಭ್ಯರ್ಥಿಗೆ ದಾಖಲೆ ಗೆಲುವು

06:00 AM Nov 08, 2018 | |

ಬಳ್ಳಾರಿ: ಉಪಚುನಾವಣೆಯ ಹೈವೋಲ್ಟೇಜ್ ಕ್ಷೇತ್ರ ಬಳ್ಳಾರಿಯಲ್ಲಿ ಬಿಜೆಪಿ ಭಾರೀ ಮುಖಂಭಂಗ ಅನುಭವಿಸಿದೆ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪ  2,43,161 ಮತಗಳ ಭರ್ಜರಿ ಅಂತರದಲ್ಲಿ  ಗೆಲುವಿನ ನಗೆ ಬೀರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ  ಸೋತ ಬಿಜೆಪಿಗೆ ಗಣಿನಾಡಿನ ಮತದಾರರು ಉಪ ಸಮರದಲ್ಲೂ ಮತ್ತೆ ಸೋಲಿನ ರುಚಿ ತೋರಿಸಿದ್ದಾರೆ.

Advertisement

ನ.6ರಂದು ನಗರದ ಆರ್‌ವೈಎಂಇಸಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಮೊದಲಿಗೆ ಅಂಚೆ ಮತಗಳ ಎಣಿಕೆಯಲ್ಲಿ 110 ಮತಗಳ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ, ಆ ಬಳಿಕ ಆರಂಭವಾದ ಎಣಿಕೆಯ ಎಲ್ಲ ಸುತ್ತುಗಳಲ್ಲೂ ಹಿನ್ನಡೆ ಅನುಭವಿಸಿದರು. ಮೊದಲ ಸುತ್ತಿನಲ್ಲೇ 39,254 ಮತಗಳನ್ನು ಪಡೆದು 17,480 ಮತಗಳ ಮುನ್ನಡೆ ಸಾಧಿಸಿದ್ದ ವಿ.ಎಸ್‌. ಉಗ್ರಪ್ಪ, ಬಳಿಕ 18 ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಂಡರು. ಅಂತಿಮವಾಗಿ 6,25,364 ಮತ ಪಡೆಯುವ ಮೂಲಕ 2,43,161 ಮತಗಳ ಭಾರೀ ಅಂತರದಿಂದ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ವಿರುದ್ಧ ಗೆಲುವು ಸಾಧಿಸಿದರು.

1971ರಲ್ಲಿ ಕಾಂಗ್ರೆಸ್‌ನ ವಿ.ಕೆ.ಆರ್‌.ವಿ.ರಾವ್‌ 1,52,860 ಮತಗಳ ಅಂತರದಿಂದ ಗೆಲುವು ಸಾಧಿಸಿದ ಬಳಿಕ ಈಗ ವಿ.ಎಸ್‌. ಉಗ್ರಪ್ಪನವರು 2,43,161 ಮತಗಳ ಭಾರೀ ಅಂತರದಿಂದ ಗೆದ್ದು ಜಿಲ್ಲೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ.  ಉಪ ಸಮರದ ಪ್ರಚಾರದ ವೇಳೆ ಮುನ್ನೆಲೆಯಲ್ಲಿದ್ದ ಉಗ್ರಪ್ಪ ಹೊರಗಿನವರು, ಜಿಲ್ಲೆಯಲ್ಲಿ ಅಡ್ರೆಸ್‌ ಇಲ್ಲದವರು ಎಂಬೆಲ್ಲ ಬಿಜೆಪಿಯವರ ಮಾತುಗಳಿಗೆ ಕಿವಿಗೊಡದ ಜಿಲ್ಲೆಯ ಮತದಾರರು ಮೈತ್ರಿಕೂಟದ ಅಭ್ಯರ್ಥಿಗೆ ಜೈಹೋ ಎಂದಿದ್ದಾರೆ.

ಬಳ್ಳಾರಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಮೆಲುಗೈ ಸಾಧಿಸಿದ್ದು, ಪ್ರತಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕಿಂತ ಸರಾಸರಿ 20 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಗಣಿಜಿಲ್ಲೆ ಬಳ್ಳಾರಿ ಪುನಃ ಕಾಂಗ್ರೆಸ್‌ ಭದ್ರಕೋಟೆಯನ್ನಾಗಿ ಮತ್ತೆ ಮರು ಸ್ಥಾಪಿಸಿಕೊಂಡಿದೆ.

ಒಟ್ಟು 18 ಸುತ್ತುಗಳ ಮತ ಎಣಿಕೆ ಕಾರ್ಯ ಪೂರ್ಣಗೊಂಡ ಬಳಿಕ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ 6,25,364, ಬಿಜೆಪಿಯ ಜೆ.ಶಾಂತಾ 3,85,204, ಪಕ್ಷೇತರ ಅಭ್ಯರ್ಥಿಗಳಾದ ವೈ.ಪಂಪಾಪತಿ 7697, ಡಾ| ಟಿ.ಆರ್‌.ಶ್ರೀನಿವಾಸ್‌ 13714 ಮತಗಳನ್ನು ಪಡೆದಿದ್ದಾರೆ.  ಕ್ಷೇತ್ರದ 12,413 ಮತದಾರರು ನೋಟಾ ಬಟನ್‌ ಒತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next