ರೇಣುಕಾಸ್ವಾಮಿ ಪ್ರಕರಣದಲ್ಲಿ (Renukaswamy case) ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಐಶಾರಾಮಿಯಾಗಿ ಕಾಲ ಕಳೆಯುತ್ತಿದ್ದ ಫೋಟೋ ವೈರಲ್ ಆಗುತ್ತಿದ್ದಂತೆಯೇ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಏತನ್ಮಧ್ಯೆ ಬ್ರಿಟಿಷ್ ಕಾಲದ ಬಳ್ಳಾರಿ ಜೈಲಿ(Bellary Jail)ನ ಹಿಂದೆ ರೋಚಕ ಇತಿಹಾಸವಿದೆ ಎಂಬುದು ಕುತೂಹಲದ ವಿಷಯ.
1800ರಲ್ಲಿ ಬಳ್ಳಾರಿಯನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ವಿಲೀನಗೊಳಿಸಿದ ನಂತರ ಬ್ರಿಟಿಷರು ಇಲ್ಲಿ ಮೂರು ಜೈಲುಗಳನ್ನು ಸ್ಥಾಪಿಸಲು ಇಚ್ಚಿಸಿದ್ದರು. ಆದರೆ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಆದರೆ ಇಲ್ಲಿದ್ದ ಬೃಹತ್ ಕಂಟೋನ್ಮೆಂಟ್ ನಿಂದ ಇಡೀ ಬ್ರಿಟಿಷ್ ಸೇನೆಗೆ ಭಾರೀ ದೊಡ್ಡ ಪ್ರಮಾಣದಲ್ಲಿ ಮದ್ದುಗುಂಡು ಸರಬರಾಜು ಮಾಡಲಾಗುತ್ತಿತ್ತು. ಈ ಕಂಟೋನ್ಮೆಂಟ್ ನಲ್ಲಿ ಸರ್ ಥಾಮಸ್ ಮುನ್ರೋ ಸಲಹೆ ಮೇರೆಗೆ ಡ್ಯೂಕ್ ಆಫ್ ವೆಲ್ಲಿಂಗ್ಟನ್ ಮತ್ತು ಎಡ್ವರ್ಡ್ ವಿಲಿಯಮ್ಸ್ (ಈತ ನಂತರ ಬ್ರಿಟಿಷ್ ಸೇನೆಯ ಮುಖ್ಯಸ್ಥನಾಗಿದ್ದ) ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದರು.
1872ರಲ್ಲಿ ಅಲಿಪೋರ್ ಜೈಲು, ಆರ್ಥರ್ ವೆಲ್ಲೆಸ್ಲಿ ಟಿಬಿ ಸ್ಯಾನಟೋರಿಯಂ ಜೈಲು ಮತ್ತು ಯುದ್ಧ ಕೈದಿಗಳ ಜೈಲು ಸ್ಥಾಪನೆಯಾಗಿತ್ತು.
ಬ್ಯಾರಕ್ ಟು ಮಿಲಿಟರಿ ಜೈಲಿನವರೆಗೆ:
ಬೃಹತ್ ಕಂಟೋನ್ಮೆಂಟ್(Bellary Cantonment) ಗಾಲ್ಫ್, ರೇಸ್ ಕೋರ್ಸ್ ಹಾಗೂ ಬೃಹತ್ ಸೇನಾ ಆಸ್ಪತ್ರೆಯನ್ನು ಹೊಂದಿತ್ತು. ಬ್ಯಾರಕ್ ಗಳು ಆರ್ಮಿಯ ಎಲ್ಲಾ ವಿಭಾಗಗಳನ್ನು ಹೊಂದಿತ್ತು ಎಂಬುದು ವಿಶೇಷ. ಕಂಟೋನ್ಮೆಂಟ್ ನ ಪದಾತಿಸೈನ್ಯದ ಬ್ಯಾರಕ್ ಗಳ ಒಂದು ಭಾಗವನ್ನು ಮಿಲಿಟರಿ ಜೈಲ್ ಆಗಿ ಪರಿವರ್ತಿಸಲಾಗಿತ್ತು. “ಇದನ್ನು ಅಲಿಪೋರ್ ಜೈಲು ಎಂದು ಕರೆಯುತ್ತಿದ್ದರು. ನಂತರ 19ನೇ ಶತಮಾನದ ಅಂತ್ಯದಲ್ಲಿ ಈ ಜೈಲಿನಲ್ಲಿ ಮೊದಲ ವಿಶ್ವಯುದ್ಧ(1914-1918)ದ ಕೈದಿಗಳನ್ನು ತಂದು ಇಲ್ಲಿಡಲಾಗುತ್ತಿತ್ತು.
ಟರ್ಕಿಯ ರಾಜಕುಮಾರ ಇಲ್ಲೇ ಕೊನೆಯುಸಿರೆಳೆದಿದ್ದ!
ಈ ಅಲಿಪೋರ್ ಜೈಲಿನಲ್ಲಿ ಫ್ರಾನ್ಸ್, ಡೆನ್ಮಾರ್ಕ್ ಮತ್ತು ಟರ್ಕಿ ದೇಶದ ಕೈದಿಗಳನ್ನು ತಂದು ಕೂಡಿ ಹಾಕಲಾಗುತ್ತಿತ್ತು. ಅಂದು ಟರ್ಕಿಯ ರಾಜಕುಮಾರ ಕೂಡಾ ಕೈದಿಯಾಗಿ ಈ ಜೈಲಿನಲ್ಲಿದ್ದ. ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಜಕುಮಾರ ಇಲ್ಲೇ ಕೊನೆಯುಸಿರೆಳೆದಿದ್ದು, ಬಳ್ಳಾರಿಯ ಅಲಿಪೋರ್ ಜೈಲಿನಲ್ಲಿದ್ದ ಟರ್ಕಿಯ ಹುತಾತ್ಮರ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.!
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಘಟಾನುಘಟಿಗಳು ಈ ಜೈಲಿನಲ್ಲಿದ್ರು!
ಭಾರತದ ಕ್ವಿಟ್ ಇಂಡಿಯಾ ಚಳವಳಿ(Quit India Movement) ಸಂದರ್ಭದಲ್ಲಿ ಈ ಜೈಲಿನಲ್ಲಿ ಸ್ವಾತಂತ್ರ್ಯ ಹೋರಾಟದ ಘಟಾನುಘಟಿಗಳನ್ನು ಕೈದಿಗಳನ್ನಾಗಿ ಇರಿಸಲಾಗಿತ್ತು. 1920ರಲ್ಲಿ ಮೊದಲ ಬಾರಿಗೆ ತಿರುವಾಂಕೂರ್ ರಾಜ್ಯದ 2,000ಕ್ಕೂ ಅಧಿಕ ನಾಗರಿಕರನ್ನು ಕೈದಿಗಳನ್ನಾಗಿ ಈ ಜೈಲಿನಲ್ಲಿಇರಿಸಲಾಗಿತ್ತು. ಬಳಿಕ ಮಿಲಿಟರಿ ಜೈಲಿನ ಒಂದು ಭಾಗ ಬಳ್ಳಾರಿ ಸೆಂಟ್ರಲ್ ಜೈಲಾಗಿ ಪರಿವರ್ತನೆಗೊಂಡಿತ್ತು.
ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದ ರಾಜಾಜಿ, ಕಾಮರಾಜ್ ನಾಡಾರ್, ಪೊಟ್ಟಿ ಶ್ರೀರಾಮುಲು, ಸಂಜೀವ್ ರೆಡ್ಡಿ, ಬೆಂಝವಾಡಾ ಗೋಪಾಲ್ ರೆಡ್ಡಿ, ಇ.ವಿ.ರಾಮಸ್ವಾಮಿ ನಾಯಕರ್(ದ್ರಾವಿಡ ಚಳವಳಿಯ ಪೆರಿಯಾರ್), ಒವಿ ಅಳಗೇಶನ್, ತೇಕೂರ್ ಸುಬ್ರಹ್ಮಣ್ಯಂ, ಸಂಬಾ ಮೂರ್ತಿ, ಘಂಟಸಾಲಾ ವೆಂಕಟೇಶ್ವರ ರಾವ್ ಸೇರಿದಂತೆ ಹಲವು ಘಟಾನುಘಟಿಗಳು ಐತಿಹಾಸಿಕ ಅಲಿಪೋರ್ ಜೈಲಿನಲ್ಲಿ ಕೈದಿಗಳಾಗಿದ್ದರು.
ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಿಸಿದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಕೂಡಾ ಬಳ್ಳಾರಿ ಜೈಲುವಾಸ ಅನುಭವಿಸಿದ್ದರು. ಎರಡು ಬಾರಿ ಮಹಾತ್ಮ ಗಾಂಧಿ ಈ ಜೈಲಿಗೆ ಭೇಟಿ ನೀಡಿದ್ದರು.
ಸ್ವಾತಂತ್ರ್ಯ ನಂತರ ಜೈಲು ಬಂದ್!
ಭಾರತ ಸ್ವತಂತ್ರಗೊಂಡ ನಂತರ ಈ ಜೈಲನ್ನು ಬಂದ್ ಮಾಡಲಾಗಿತ್ತು. ಪೋರ್ಟ್ ಬ್ಲೇರ್ ನಲ್ಲಿರುವ ಸೆಲ್ಯುಲರ್ ಜೈಲನ್ನು ಹೊರತುಪಡಿಸಿ, ಅಧಿಕಾರಿಗಳು ಉಪ ಖಂಡದಲ್ಲಿ ಮುಚ್ಚಿದ್ದ ಏಕೈಕ ಜೈಲು ಅಲಿಪೋರ್ ಜೈಲಾಗಿತ್ತು! ಆದರೆ ಈಗ ಅಂಡಮಾನ್ ನ ಸೆಲ್ಯುಲರ್ ಜೈಲನ್ನು ಪ್ರವಾಸಿಗರ ಆಕರ್ಷಣೆಗಾಗಿ ನ್ಯಾಷನಲ್ ಹೆರಿಟೇಜ್ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ.
14ಕ್ಕೂ ಹೆಚ್ಚು ಜೈಲ್ ಬ್ಲಾಕ್ಸ್ ಗಳನ್ನು ಹೊಂದಿದ್ದ ಇಡೀ ಅಲಿಪೋರ್ ಜೈಲ್ ಅನ್ನು ನ್ಯಾಷನಲ್ ಹೆರಿಟೇಜ್ ಮ್ಯೂಸಿಯಂ ಆಗಿ ಪರಿವರ್ತಿಸಬೇಕೆಂಬ ಶಿಫಾರಸ್ಸನ್ನು ಅಧಿಕಾರಿಗಳು ಒಪ್ಪಿಕೊಂಡಿಲ್ಲವಾಗಿತ್ತುಮೂರು ಜೈಲುಗಳಲ್ಲಿ ಈಗ ಎರಡು ಆಸ್ಪತ್ರೆಯಾಗಿ ಮಾರ್ಪಟ್ಟಿದ್ದು, ಬಳ್ಳಾರಿ ಸೆಂಟ್ರಲ್ ಜೈಲು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ವಿದ್ಯುತ್ ತಂತಿ ಬೇಲಿಯನ್ನು ಹೊಂದಿರುವ ಬಿಗಿ ಭದ್ರತೆಯ ಕಾರಾಗೃಹ ಇದಾಗಿದೆ. (ಈ ಜೈಲು ಬ್ಲಾಕ್ ಗಳನ್ನು ಮೆಡಿಕಲ್ ಕಾಲೇಜಿಗೆ ನಿಯೋಜಿಸಲಾಗಿತ್ತು. ಇದರಲ್ಲಿ ಒಂದು ಬ್ಲಾಕ್ ಅನ್ನು ಹೊರತುಪಡಿಸಿ ಎಲ್ಲಾ ಬ್ಲಾಕ್ ಗಳನ್ನು ಪ್ರಯೋಗಾಲಯಗಳು ಮತ್ತು ಹಾಸ್ಟೆಲ್ ಗಳಾಗಿ ಪರಿವರ್ತಿಸಲಾಗಿದೆ). ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ನನ್ನು ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ.