ಬಳ್ಳಾರಿ: ಕಳೆದ ಎರಡ್ಮೂರು ದಿನಗಳಿಂದ ಗಣಿನಗರಿಯಲ್ಲಿ ಆಗೊಮ್ಮೆ ಈಗೊಮ್ಮೆ ಜಿಟಿಜಿಟಿಯಾಗಿ ಸುರಿಯುತ್ತಿದ್ದ ಮಳೆ, ಬುಧವಾರ ಮಧ್ಯರಾತ್ರಿ ಮತ್ತು ಗುರುವಾರ ಧಾರಾಕಾರವಾಗಿ ಸುರಿದಿದ್ದು, ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಸಾಂಖ್ಯೀಕ (ಅಂಕಿ- ಸಂಖ್ಯೆಗಳ) ಇಲಾಖೆ ಕಚೇರಿಗೆ, ತಹಸೀಲ್ದಾರ್ ಕಚೇರಿ, ಕರ್ನಾಟಕ ಪಬ್ಲಿಕ್ ಸ್ಕೂಲ್ಗೆ ನೀರು ನುಗ್ಗಿದ್ದು, ರೈಲ್ವೆ ಕೆಳಸೇತುವೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಬಳ್ಳಾರಿಯ ರಾಯಲ್ ಕಾಲೋನಿಯಲ್ಲಂತೂ ಗುಡಿಸಲು ಮನೆಗೂ ಈ ಮಳೆ ನೀರು ನುಗ್ಗಿವೆ. ಗುಡಿಸಲು ನಿವಾಸಿಗಳು ತಗ್ಗು ಪ್ರದೇಶದಲ್ಲಿ ವಾಸವಿದ್ದರಿಂದ ಕೂರಲು, ನಿಲ್ಲಲು ಜಾಗ ಕೂಡ ಇಲ್ಲದಂತಾಗಿದೆ. ಮನೆಗಳ ಮುಂದೆಯೂ ಕೂಡ ಮಳೆಯ ನೀರು ಜಲಾವೃತಗೊಂಡಿದೆ. ಅದರೊಳಗೆ ಒಳಚರಂಡಿ ನೀರು ಮಿಶ್ರಿತಗೊಂಡ ಪರಿಣಾಮ ಕಾಲೋನಿಯೆಲ್ಲಾ ದುರ್ವಾಸನೆ ಹಬ್ಬಿದೆ. ಪ್ರತಿಬಾರಿ ಮಳೆ ಸುರಿದಾಗಲೆಲ್ಲಾ ಈ ಕಾಲೋನಿ ನಿವಾಸಿಗಳು ಈ ಸಮಸ್ಯೆಯನ್ನು ಎದುರಿಸುತ್ತಿರೋದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.
ಸೇತುವೆಗಳು ಜಲಾವೃತ, ಸಂಚಾರ ವ್ಯವಸ್ಥೆ ಬಂದ್: ನಗರದ ಕನಕದುರ್ಗಮ್ಮ ದೇಗುಲ ರಸ್ತೆಯ ಕೆಳಸೇತುವೆ, ಸತ್ಯನಾರಾಯಣ ಪೇಟೆ ಕೆಳಸೇತುವೆ ಹಾಗೂ ಡಾ| ಜೋಳದರಾಶಿ ದೊಡ್ಡನಗೌಡ ರಂಗ ಮಂದಿರ ರಸ್ತೆಯ ಕೆಳಸೇತುವೆಯಲ್ಲಿ ಮಳೆ ನೀರು ಜಲಾವೃತಗೊಂಡಿದೆ. ಎಸ್ಪಿ ವೃತ್ತದಿಂದ ಕನಕದುರ್ಗಮ್ಮ ದೇಗುಲ ರಸ್ತೆಯ ಮಾರ್ಗ, ಗಾಂಧಿನಗರದಿಂದ ಸತ್ಯನಾರಾಯಣ ಪೇಟೆ ಕೆಳಸೇತುವೆ ರಸ್ತೆ ಮಾರ್ಗ ಮತ್ತು ಖಾಸಗಿ ಬಸ್ ನಿಲ್ದಾಣದ ರಸ್ತೆಯ ಮಾರ್ಗ ಸಂಚಾರ ಸ್ಥಗಿತಗೊಂಡಿತ್ತು. ನಗರದ ಬಹುತೇಕ ಖಾಸಗಿ ಸಂಸ್ಥೆಗಳ ಕಚೇರಿಗಳು ಹಾಗೂ ಅಂಗಡಿಮುಂಗಟ್ಟುಗಳು ಈ ಮಳೆ ಸುರಿದ ಕಾರಣ ಸ್ವಯಂಪ್ರೇರಿತವಾಗಿ ಬಂದ್ ಆಗಿದ್ದವು.
ಮಳೆ ಎಲ್ಲೆಲ್ಲಿ-ಎಷ್ಟೆಷ್ಟು: ಬಳ್ಳಾರಿಯಲ್ಲಿ ಶೇ. 60ಮಿಮೀ, ಹಡಗಲಿಯಲ್ಲಿ ಶೇ.30.6ಮಿಮೀ, ಹಗರಿಬೊಮ್ಮನಹಳ್ಳಿಯಲ್ಲಿ ಶೇ. 59.4ಮಿಮೀ, ಹೊಸಪೇಟೆಯಲ್ಲಿ 34.0 ಮಿಮೀ, ಕೂಡ್ಲಿಗಿಯಲ್ಲಿ ಶೇ.38.9 ಮಿಮೀ, ಸಂಡೂರಿನಲ್ಲಿ ಶೇ. 92.8 ಮಿಮೀ, ಸಿರುಗುಪ್ಪಾದಲ್ಲಿ ಶೇ. 62.8 ಮಿಮೀ, ಹರಪನಹಳ್ಳಿಯಲ್ಲಿ ಶೇ. 21.6 ಮಿಮೀನಷ್ಟು ಮಳೆಯು ಸುರಿದಿದೆ.
ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕಚೇರಿ ಹಾಗೂ ಖಾಸಗಿ ಕಂಪನಿಗಳ ನೌಕರರು ಮನೆಯಿಂದ ಹೊರಗಡೆ ಹೋಗಲು ಅತೀವ ತೊಂದರೆ ಅನುಭವಿಸಿದರು. ಇನ್ನು ಮಳೆ ಆರಂಭಕ್ಕೂ ಮುನ್ನವೇ ಮನೆಯಿಂದ ಹೊರಗಡೆ ಹೋದವರು ಮಳೆಯಿಂದ ತಪ್ಪಿಸಿಕೊಳ್ಳಲು ವಿವಿಧೆಡೆ ಆಶ್ರಯ ಪಡೆದುಕೊಂಡರು.
ಇಲ್ಲಿನ ಕನಕದುರ್ಗಮ್ಮ ದೇಗುಲ ರಸ್ತೆ ಕೆಳಸೇತುವೆ ಹಾಗೂ ಸತ್ಯನಾರಾಯಣ ಪೇಟೆ ರಸ್ತೆಯ ಕೆಳಸೇತುವೆ ಮತ್ತು ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದ ರಸ್ತೆಯ ಕೆಳಸೇತುವೆಯಲ್ಲಿ ಮಳೆ ನೀರು ವಿಪರೀತ ಸಂಗ್ರಹಗೊಂಡಿದ್ದರಿಂದ ಸಾರ್ವಜನಿಕ ಸಂಚಾರಕ್ಕೆ ಅಡೆತಡೆ ಉಂಟಾಯಿತು.