Advertisement

ಹಂಪಿ ಉತ್ಸವಕ್ಕೆ  ಭರದ ಸಿದ್ಧತೆ: ನಕುಲ್‌

05:33 PM Jan 01, 2020 | Naveen |

ಬಳ್ಳಾರಿ: ಈ ಬಾರಿಯ ಹಂಪಿ ಉತ್ಸವಕ್ಕೆ ಬರುವ ಪ್ರವಾಸಿಗರು, ವೀಕ್ಷಕರು, ಪ್ರೇಕ್ಷಕರು, ಶ್ರೋತೃಗಳಿಗೆ ಮುಂಗಾರು ಮಳೆ ಖ್ಯಾತಿಯ ಸಂಗೀತಗಾರ ಮನೋಮೂರ್ತಿ ಅವರ ಸಂಗೀತ ಸುಧೆ, ಮುಂಬೈನ ಖ್ಯಾತ ಹಿನ್ನಲೆ ಗಾಯಕಿ ನೀತಿ ಮೋಹನ್‌ ತಂಡ ಹಾಗೂ ಸುಪ್ರಿಯ ಲೋಹಿತ್‌ ಬೆಂಗಳೂರು ತಂಡ ಹಾಡುಗಾರಿಕೆ, ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶರ ಹಾಸ್ಯದ ಹೊನಲು, ಚಿತ್ರಸಂತೆ, ಫಿಶ್‌ ಅಕ್ವೇರಿಯಾ ಟೂನಲ್‌, ಮತ್ಸ್ಯ ಮೇಳ, ಹಂಪಿ ಬೈ ಸ್ಕೈ ಸೇರಿದಂತೆ ಇತರೆ ಕಾರ್ಯಕ್ರಮಗಳು ಮನೋರಂಜನೆ ನೀಡಲಿವೆ.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ಅವರು ಹಂಪಿ ಉತ್ಸವದ ಸಿದ್ಧತೆಗಳು, ಪ್ರಮುಖ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಹಂಪಿ ಉತ್ಸವ ಜನವರಿ 10 ಮತ್ತು 11ರಂದು ಎರಡು ದಿನಗಳ ಕಾಲ ಒಟ್ಟು 4 ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಶ್ರೀ ಕೃಷ್ಣದೇವರಾಯ ವೇದಿಕೆ (ಗಾಯಿತ್ರಿ ಪೀಠದ ಹತ್ತಿರ), ಮುಖ್ಯ ವೇದಿಕೆ ಎದುರು ಬಸವಣ್ಣ ಹತ್ತಿರ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆ, ಸಾಸಿವೆ ಕಾಳು ಗಣಪ ವೇದಿಕೆಗಳಲ್ಲಿ ವಿಜಯನಗರ ವೈಭವವೇ ಅನಾವರಣಗೊಳ್ಳಲಿದೆ ಎಂದರು.

ಗಾಯತ್ರಿ ಪೀಠದ ಮೈದಾನದ ಬಳಿ ಮುಖ್ಯ ವೇದಿಕೆ ರಚಿಸಲಾಗಿದ್ದು, ಇದಕ್ಕೆ ಶ್ರೀಕೃಷ್ಣದೇವರಾಯ ವೇದಿಕೆ ಎಂದು ಹೆಸರಿಡಲಾಗಿದೆ. ಇಲ್ಲಿಯೇ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಉತ್ಸವವನ್ನು ಜ.10ರಂದು ಸಂಜೆ 7.30ಕ್ಕೆ ಉದ್ಘಾಟಿಸಲಿದ್ದಾರೆ.

ಜ.11ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಕೇಂದ್ರ ಸರಕಾರದ ಸಂಸ್ಕೃತಿ ಸಚಿವರು ಆಗಮಿಸಲಿದ್ದಾರೆ. ಇವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ, ಇನ್ನಿತರ ಸಚಿವರುಗಳು, ಶಾಸಕರು, ಸಂಸದರು ಭಾಗವಹಿಸಲಿದ್ದಾರೆ ಎಂದರು. ಎದುರು ಬಸವಣ್ಣ ಬಳಿ ವೇದಿಕೆ, ವಿರೂಪಾಕ್ಷ ದೇವಸ್ಥಾನ ವೇದಿಕೆ ಹಾಗೂ ಸಾಸಿವೆ ಕಾಳು ಗಣಪ ಬಳಿ ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

Advertisement

ಜ.10ರಂದು ಮುಖ್ಯ ವೇದಿಕೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಇವರ ತಂಡದ ಅನುರಾಧ ಭಟ್‌, ತಿಮ್ಮಯ್ಯ, ಚೇತನ್‌ ಇತರರು ಗೀತೆಗಳ ಗಾಯನ ಮಾಡಲಿದ್ದಾರೆ. ಅಲ್ಲದೇ ಇದೇ ವೇದಿಕೆಯಲ್ಲಿ ಗಂಗಾವತಿ ಪ್ರಾಣೇಶ್‌ ಅವರ ಹಾಸ್ಯ ಕಾರ್ಯಕ್ರಮವನ್ನು ನೀಡಲಿದ್ದಾರೆ.

ಜ.11ರಂದು ಬಾಲಿವುಡ್‌ನ‌ ಖ್ಯಾತ ಗಾಯಕಿ ನೀತಿಮೋಹನ್‌ ಮತ್ತು ಅವರ ತಂಡದಿಂದ ಸಂಗೀತ ಸಂಜೆ ನಡೆಯಲಿದೆ. ಇದಲ್ಲದೆ ಪ್ರವೀಣ್‌ ಗೋಡ್‌ಕಿಂಡಿ ಅವರಿಂದ ಕೊಳಲು ವಾದನ, 5,6,7,8 ಡ್ಯಾನ್ಸ್‌ ತಂಡ ಬೆಂಗಳೂರು ಇವರಿಂದ ನೃತ್ಯ ಪ್ರದರ್ಶನ ನೀಡಲಿದ್ದಾರೆ ಎಂದರು.

ಮಂಗಳಮುಖೀಯರಿಗೆ ವಿಶೇಷ ಅವಕಾಶ: ಈ ಬಾರಿಯ ಹಂಪಿ ಉತ್ಸವದಲ್ಲಿ ಮಂಗಳಮುಖೀಯರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಅವರು ಒಂದು ನಾಟಕ, ಮತ್ತೂಂದು ಜೋಗತಿ ಕುಣಿತ, ಮಗದೊಂದು ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನೀಡಲಿದ್ದಾರೆ.

ಅಲ್ಲದೇ ವಿಕಲಚೇತನರಿಗೆ ಸಮೂಹ ನೃತ್ಯ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಸದ ವೈ. ದೇವೆಂದ್ರಪ್ಪ, ಶಾಸಕರಾದ ಕರುಣಾಕರೆಡ್ಡಿ, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಎಸ್ಪಿ ಸಿ.ಕೆ. ಬಾಬಾ, ಅಪರ ಜಿಲ್ಲಾಧಿಕಾರಿ ಮಂಜುನಾಥ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ. ರಾಮಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next