ಬಳ್ಳಾರಿ: ಕೋಳಿಮಾಂಸ ಸೇವನೆಯಿಂದ ಕೊರೊನಾ ವೈರಸ್ ಬರಲಿದೆ ಎಂಬ ವದಂತಿಯಿಂದ ಕುಕ್ಕುಟೋದ್ಯಮದ ಮೇಲೆ ತೀವ್ರ ಪರಿಣಾಮ ಬೀರಿರುವ ಬೆನ್ನಲ್ಲೇ ಇದೀಗ ಕೇರಳದ ಗಡಿಜಿಲ್ಲೆಗಳಲ್ಲಿ ಕೋಳಿಶೀತ ಜ್ವರ (ಎಚ್5ಎನ್1) ಕಾಣಿಸಿಕೊಂಡಿದ್ದು, ರಾಜ್ಯದ ಗಡಿಭಾಗದ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕೊರೊನಾ ವದಂತಿಯಿಂದಲೇ ಈಗಾಗಲೇ ನಷ್ಟದ ಸುಳಿಗೆ ಸಿಲುಕಿರುವ ಕುಕ್ಕುಟೋದ್ಯಮಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಚೀನಾ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಜಗತ್ತಿನ ಹಲವು ದೇಶಗಳೊಂದಿಗೆ ಭಾರತಕ್ಕೂ ಆವರಿಸಿದ್ದು, ದೇಶಾದ್ಯಂತ ಆತಂಕ ಸೃಷ್ಟಿಸಿದೆ.
ನಿಯಂತ್ರಣಕ್ಕೆ ಬಾರದ ಈ ಮಾರಣಾಂತಿಕ ಕಾಯಿಲೆ ಕೋಳಿ ಮಾಂಸ ಸೇವನೆಯಿಂದ ಬರಲಿದೆ ಎಂಬ ವದಂತಿ ಕೆಲ ದಿನಗಳಿಂದ ಹಬ್ಬಿರುವ ಕಾರಣ ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕುಕ್ಕುಟೋದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ. ಕೋಳಿಮಾಂಸ, ಮೊಟ್ಟೆ ಸೇವಿಸಲು ಜನರು ಹಿಂಜರಿಯುತ್ತಿರುವ ಕಾರಣ ಅವುಗಳ ಬೆಲೆ ಪ್ರಮಾಣದಲ್ಲಿ ಕುಸಿದಿದೆ. ಈ ವದಂತಿಯ ಗುಂಗಿನಿಂದ ಜನರನ್ನು ಹೊರ ತರಲು ಕುಕ್ಕುಟೋದ್ಯಮ ಮಾಲೀಕರು ಚಿಕನ್ ಬಿರ್ಯಾನಿ ಮೇಳವನ್ನು ಆಯೋಜಿಸಿದರೂ ಪ್ರಯೋಜನ ವಾಗಿಲ್ಲ. ಹೀಗಾಗಿ ಈಗಾಗಲೇ ನಷ್ಟದ ಸುಳಿಯಲ್ಲಿ ಸಿಲುಕಿರುವ ಕುಕ್ಕುಟೋದ್ಯಮಕ್ಕೆ ಇದೀಗ ಕೇರಳದಲ್ಲಿ ಕಾಣಿಸಿಕೊಂಡಿರುವ ಕೋಳಿಶೀತ ಜ್ವರ (ಎಚ್5ಎನ್1) ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಕೋಳಿಮಾಂಸ, ಮೊಟ್ಟೆ ಸೇವನೆಯಿಂದ ಜನರು ಮತ್ತಷ್ಟು ದೂರವಾಗುವ ಸಾಧ್ಯತೆಯಿದೆ.
ಕೇರಳ ರಾಜ್ಯದ ಗಡಿಭಾಗದ ವೆಸ್ಟ್ ಕೋಡ್ರಿಯತ್ತೂರು, ಕೋಜಿಕ್ಕೋಡ್ ಜಿಲ್ಲೆಯ ಖಾಸಗಿ ಕುಕ್ಕುಟ ಕ್ಷೇತ್ರಗಳಲ್ಲಿ (ಎಚ್5ಎನ್1) ಕೋಳಿಶೀತ ಜ್ವರ ಕಾಣಿಸಿಕೊಂಡಿದೆ. ಇದು ನೆರೆಯ ಗಡಿಜಿಲ್ಲೆಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಜತೆಗೆ ನೆರೆರಾಜ್ಯ ಕರ್ನಾಟಕದ ಗಡಿಭಾಗದ ಜಿಲ್ಲೆಗಳಿಗೂ ಆವರಿಸುವ ಸಾಧ್ಯತೆ ದಟ್ಟವಾಗಿದೆ. ಒಂದುವೇಳೆ ಕೋಳಿಶೀತಜ್ವರ ಕಾಣಿಸಿಕೊಂಡಿದ್ದೇ ರೋಗ ನಿರ್ವಹಣೆಗೆ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗಡಿಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿನ ಕನ್ನಡ, ಉಡುಪಿ ಸೇರಿ ಇತರೆ ಗಡಿ ಜಿಲ್ಲೆಗಳ ಪಶುಸಂಗೋಪನಾ ಇಲಾಖೆಗೆ ಆದೇಶ ಹೊರಡಿಸಿದೆ.
ರಾಜ್ಯದ ಗಡಿಜಿಲ್ಲೆಗಳಲ್ಲಿ 24/7 ಅಧಿಕಾರಿ/ಸಿಬ್ಬಂದಿಯನ್ನು ನಿಯೋಜಿಸಿ ಈ ಕುರಿತು ಕಟ್ಟೆಚ್ಚರ ವಹಿಸಬೇಕು. ಕೋವಂತಕೋಳಿ/ಮಾಂಸ ಮಾರಾಟ ಕೇಂದ್ರಗಳ ಮತ್ತು ಕೋಳಿ ಸಾಗಾಣಿಕೆ ವಾಹನಗಳ ಚಲನವಲನದ ಬಗ್ಗೆ ನಿಗಾ ವಹಿಸಬೇಕು. ಸಂದರ್ಭಾನುಸಾರ ಸೂಕ್ತ ಕ್ರಮಕೈಗೊಂಡು ದೈನಂದಿನ ವರದಿ ಸಲ್ಲಿಸಬೇಕು. ಕೋಳಿ ಸಾಕಾಣಿಕೆದಾರರು, ಫಾರಂ ಮಾಲೀಕರಿಗೆ, ಕೆಲಸಗಾರರು, ಪಕ್ಷಿಧಾಮಗಳ ಹತ್ತಿರದಲ್ಲಿರುವ ಸಾರ್ವಜನಿಕರು, ರೈತರಿಗೆ ಹಕ್ಕಿ ಜ್ವರದ ಮಾಹಿತಿ ನೀಡಿ, ಮುಂಜಾಗ್ರತಾ ಕ್ರಮ ವಹಿಸಿ ತಿಳುವಳಿಕೆ ಮೂಡಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ: ಕೋಳಿಶೀತ ಜ್ವರದ ರೋಗ ಹೆಚ್ಚಾಗಿ ಕಾಣಿಸಿಕೊಂಡಲ್ಲಿ ಅದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಅಗತ್ಯವಿರುವ ಎಲ್ಲ ಪರಿಕರಗಳನ್ನು (ಲಾಜಿಸ್ಟಿಕ್ಸ್, ಪಿಪಿಇ ಕಿಟ್, ಗೋಣಿ ಚೀಲ, ಸೋಡಿಯಂ ಹೈಪೊಕ್ಲೋರೈಡ್ ಸೊಲ್ಯೂಷನ್, ಫಾರ್ಮಾಲೈನ್, ಎಲ್ ಪಿಜಿ ಸಿಲಿಂಡರ್, ಪೊಟ್ಯಾಶಿಯಂ ಇತರೆ) ಸರಬರಾಜುದಾರರ ಸಂಪೂರ್ಣ ವಿಳಾಸವನ್ನು ಕಚೇರಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಜತೆಗೆ ಬೆಂಗಳೂರಿನ ಹೆಬ್ಟಾಳದಲ್ಲಿರುವ ಕೋಳಿರೋಗ ನಿರ್ಣಯ ಪ್ರಯೋಗಾಲಯದ ಉಪನಿರ್ದೇಶಕರಿಗೆ ವರದಿ ಸಲ್ಲಿಸಬೇಕು. ಅಲ್ಲದೇ ಜಿಲ್ಲೆಯಲ್ಲಿರುವ ಪಕ್ಷಿಧಾಮ, ನೀರು ಸಂಗ್ರಹಾಗಾರ (ಕೆರೆ, ಕುಂಟೆ, ಹೊಂಡ ಇತ್ಯಾದಿ)ಗಳ ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ಕಡ್ಡಾಯವಾಗಿ ಸೂಚಿಸಲಾಗಿದೆ.
ವೆಂಕೋಬಿ ಸಂಗನಕಲ್ಲು