Advertisement

ಗ್ರಾಪಂ ಗ್ರಂಥಾಲಯಗಳಿಗಿಲ್ಲ ಸ್ವಂತ ಕಟ್ಟಡ

07:52 PM Nov 06, 2019 | Naveen |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಅಕ್ಷರಜ್ಞಾನ ಮೂಡಿಸುತ್ತಿರುವ ಗ್ರಾಪಂ ಗ್ರಂಥಾಲಯಗಳು ಸ್ವಂತ ಕಟ್ಟಡದ ಸಮಸ್ಯೆ ಎದುರಿಸುತ್ತಿವೆ. ಬಹುತೇಕ ಗ್ರಂಥಾಲಯಗಳಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಓದಗರು ಪುಸ್ತಕಗಳನ್ನು ಮನೆಗೆ ಕೊಂಡೊಯ್ದರೆ, ಪತ್ರಿಕೆಗಳನ್ನು ಹೊರಗಡೆ ಕೂತು ಓದುವ ಪರಿಸ್ಥಿತಿ ಇದೆ. ಜತೆಗೆ ಹೈ.ಕ ಭಾಗದ ಗ್ರಾಪಂ ಗ್ರಂಥಾಲಯಗಳ ಡಿಜಿಟಲೀಕರಣದ ಕನಸು ಕನಸಾಗಿಯೇ ಉಳಿದಿದೆ.

Advertisement

ಗಣಿನಾಡು ಬಳ್ಳಾರಿ ಜಿಲ್ಲೆಯ 11 ತಾಲೂಕುಗಳ ಪೈಕಿ ಒಟ್ಟು 233 ಗ್ರಾಮ ಪಂಚಾಯಿತಿಗಳಲ್ಲಿ 233 ಗ್ರಂಥಾಲಯಗಳಿದ್ದು, ಕೇವಲ 28 ಗ್ರಂಥಾಲಯಗಳಿಗೆ ಮಾತ್ರ ಸ್ವಂತ ಕಟ್ಟಡವಿದೆ. ತಾಲೂಕು, ಪಪಂ ಕೇಂದ್ರ ಸ್ಥಾನದಲ್ಲಿ 10 ಶಾಖಾ ಗ್ರಂಥಾಲಯಗಳಲ್ಲಿ 8 ಸ್ವಯಂ ಕಟ್ಟಡಗಳಲ್ಲಿ ನಡೆಯುತ್ತಿವೆ. ಇನ್ನುಳಿದ ಎಲ್ಲ ಗ್ರಂಥಾಲಯಗಳು  ಸ್ವಂತ ಮತ್ತು ಸುಸಜ್ಜಿತ ಕಟ್ಟಡದ ಕೊರತೆ ಎದುರಿಸುತ್ತಿವೆ. ಬಹುತೇಕ ಗ್ರಂಥಾಲಯಗಳಿಗೆ ಸ್ಥಳೀಯ ಗ್ರಾಪಂ ನಿವೇಶನ ಒದಗಿಸುವಲ್ಲೇ ಮೀನಮೇಷ ಎಣಿಸುತ್ತಿವೆ. ಇದಕ್ಕೆ ಸ್ಥಳೀಯ ರಾಜಕಾರಣವೂ ಒಂದಾಗಿದೆ. ಹಾಗಾಗಿ ಗ್ರಾಪಂಗಳಲ್ಲಿನ ಗ್ರಂಥಾಲಯಗಳಿಗೆ ನಿವೇಶನ, ಸ್ವಂತ ಕಟ್ಟಡದ ಕೊರತೆ ಎದುರಾಗಿದೆ. ಇದರಿಂದ ಬಹುತೇಕ ಗ್ರಾಮಗಳಲ್ಲಿ ಓದುಗರಿಗೆ ಕೂರಲೂ ಆಸನ ಸೇರಿ ಇತರೆ ಮೂಲಸೌಲಭ್ಯಗಳೂ ಇಲ್ಲದಂತಹ ಇಕ್ಕಟ್ಟಾದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ಇಕ್ಕಟ್ಟಾದ ಗ್ರಂಥಾಲಯಗಳಿಗೆ ಬೆಳಗಿನ ಹೊತ್ತಲ್ಲಿ ಆಗಮಿಸುವ ಓದಗರು, ಕೂಡಲು ಆಸನದ ಕೊರತೆಯಿಂದಾಗಿ ಪತ್ರಿಕೆಗಳನ್ನು ಹೊರಗಡೆ ಕೊಂಡೊಯ್ದು ಓದಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಬಹುತೇಕ ಗ್ರಂಥಾಲಯಗಳು ಸಹ ಮಳೆಗೆ ಸೋರುತ್ತಿದ್ದು, ಪತ್ರಿಕೆ, ಪುಸ್ತಕಗಳು ಸಹ ಮಳೆ ನೀರಿಗೆ ನೆನೆದು ನಷ್ಟವಾಗಿರುವ ಹಲವು ಉದಾಹರಣೆಗಳು ಇವೆ. ಇರುವ ಬಾಡಿಗೆ ಕಟ್ಟಡಗಳು ಸಹ ಬಹುತೇಕ ಶಿಥಿಲಾವಸ್ಥೆ ತಲುಪಿವೆ.

ಪರಿಣಾಮ ಗ್ರಾಪಂಗಳಲ್ಲಿನ ಗ್ರಂಥಾಲಯಗಳಿಗೆ ಈ ಹಿಂದೆ ಆಗಮಿಸುತ್ತಿದ್ದ ಓದುಗರ ಸಂಖ್ಯೆ ಇಂದು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ತಾಲೂಕುವಾರು ಗ್ರಂಥಾಲಯಗಳು: ಗಣಿನಾಡು ಬಳ್ಳಾರಿ ತಾಲೂಕಲ್ಲಿ 40, ಹೊಸಪೇಟೆ ತಾಲೂಕು 25, ಕೂಡ್ಲಿಗಿ 35, ಸಿರುಗುಪ್ಪ 26, ಸಂಡೂರು 21, ಹ.ಬೊ. ಹಳ್ಳಿ 29, ಹಡಗಲಿ 25, ಹರಪನಹಳ್ಳಿ 37 ಸೇರಿ ಒಟ್ಟು 10 ತಾಲೂಕುಗಳಲ್ಲಿ 233 ಗ್ರಾಪಂ ಗ್ರಂಥಾಲಯಗಳು, ತಾಲೂಕು, ಪಟ್ಟಣ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ 10 ಶಾಖಾ ಗ್ರಂಥಾಲಯಗಳು ಇವೆ. ಜ್ಞಾನಾರ್ಜನೆ ವೃದ್ಧಿಸಿಕೊಳ್ಳುವಂತೆ ಸ್ಥಳೀಯ ಜನರನ್ನು, ಪುಸ್ತಕ ಪ್ರಿಯರನ್ನು ಕೈ ಬೀಸಿ ಕರೆಯಬೇಕಿದ್ದ ಗ್ರಂಥಾಲಯಗಳು ಅಗತ್ಯ ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಪುಸ್ತಕ ಪ್ರಿಯರು ಗ್ರಾಪಂ ಗ್ರಂಥಾಲಯಗಳಿಂದ ದೂರು ಉಳಿಯುವಂತೆ ಮಾಡಿದೆ.

ಡಿಜಿಟಲೀಕರಣ ಸೌಲಭ್ಯವಿಲ್ಲ: ಬಳ್ಳಾರಿ ಸೇರಿ ಹೈ.ಕ ಭಾಗದಲ್ಲಿರುವ 6 ಜಿಲ್ಲೆಗಳಲ್ಲಿನ ಗ್ರಾಪಂ ಗ್ರಂಥಾಲಯಗಳಿಗೆ ಅಂತರ್ಜಾಲ ಸೌಲಭ್ಯ ಕಲ್ಪಿಸವು ಕುರಿತು ಎಚ್‌ಕೆಡಿಬಿ ಹಿಂದಿನ ಆಯುಕ್ತರು ಚಿಂತನೆ ನಡೆಸಿದ್ದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ, ಉದ್ಯೋಗ ಸೇರಿ ಇನ್ನಿತರೆ ಅರ್ಜಿಗಳನ್ನು ಸಲ್ಲಿಸಲು ಅನುಕೂಲ ಕಲ್ಪಿಸಿಕೊಡುವುದು ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಅದರಂತೆ ಕಳೆದ 2015ರಲ್ಲಿ ಜಿಲ್ಲೆಯ ಬಳ್ಳಾರಿ ತಾಲೂಕಿನ 5 ಗ್ರಾಪಂ ಗ್ರಂಥಾಲಯ, ಹೊಸಪೇಟೆ 3, ಕೂಡ್ಲಿಗಿ 4, ಸಿರುಗುಪ್ಪ 3, ಸಂಡೂರು 4, ಹ.ಬೊ.ಹಳ್ಳಿ 4, ಹಡಗಲಿ ತಾಲೂಕಿನ ಆಯ್ದ 8 ಗ್ರಾಪಂ ಗ್ರಂಥಾಲಯಗಳಿಗೆ ಜೆರಾಕ್ಸ್‌ ಯಂತ್ರ, ಯುಪಿಎಸ್‌ಗಳನ್ನು ನೀಡಲಾಗಿದೆ ಹೊರತು, ಅಂತರ್ಜಾಲ ಸೌಲಭ್ಯಕ್ಕೆ ಮುಖ್ಯವಾಗಿ ಬೇಕಾಗಿದ್ದ ಕಂಪ್ಯೂಟರ್‌ಗಳನ್ನೇ ನೀಡಿಲ್ಲ. ಈ ಕುರಿತು ಎಚ್‌ಕೆಡಿಬಿ ಅಧಿಕಾರಿಗಳಿಗೆ ಹಲವು ಬಾರಿ ಗಮನ ಸೆಳೆದರೂ ಎಚ್ಚೆತ್ತುಕೊಂಡಿಲ್ಲ. ಹಾಗಾಗಿ ಯೋಜನೆಯ ಕನಸು ಈಡೇರದೆ ನನೆಗುದಿಗೆ ಬಿದ್ದಿದೆ.

Advertisement

ಮುಂದಿನ ದಿನಗಳಲ್ಲಾದರೂ ಕಂಪ್ಯೂಟರ್‌ಗಳು ಬರುತ್ತವೆ ಎಂಬ ನಿರೀಕ್ಷೆಯೂ ಇಲ್ಲ ಎಂದು ಇಲಾಖೆ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ. 400 ರೂ. ಅನುದಾನ: ಗ್ರಾಪಂಗಳಲ್ಲಿನ ಗ್ರಂಥಾಲಯಗಳಿಗೆ ಪತ್ರಿಕೆ ಖರೀದಿಗಾಗಿ ಪ್ರತಿ ತಿಂಗಳು 400 ರೂ. ನೀಡಲಾಗುತ್ತದೆ. ಇದರಲ್ಲಿ ಎರಡು ಕನ್ನಡ ದಿನಪತ್ರಿಕೆ, ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವ ಮಾಸ ಪತ್ರಿಕೆಗಳನ್ನು ಖರೀದಿಸಿ ಓದುಗರಿಗೆ ಕಲ್ಪಿಸಲಾಗುತ್ತಿದೆ. ಗಡಿಭಾಗದಲ್ಲಿನ ಓದುಗರ ಅಭಿರುಚಿ ಮೇರೆಗೆ ತೆಲುಗು ಪತ್ರಿಕೆ, ಇಂಗ್ಲಿಷ್‌ ಪತ್ರಿಗಳನ್ನು ಸಹ ಖರೀದಿಸಲಾಗುತ್ತಿದೆ.

ಸ್ವಂತ ಕಟ್ಟಡಗಳ ನಡುವೆಯೂ ನಡೆಯುತ್ತಿರುವ ಗ್ರಾಪಂ ಗ್ರಂಥಾಲಯಗಳಿಗೆ ಅಂತರ್ಜಾಲದೊಂದಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next