Advertisement

ಗ್ರಾಪಂ ವ್ಯಾಪ್ತಿಯಲ್ಲೂ ಕಸ ಸಂಗ್ರಹದ ಗುರಿ

01:34 PM Dec 13, 2019 | Naveen |

ಬಳ್ಳಾರಿ: ಜಿಲ್ಲೆಯಲ್ಲಿರುವ 237 ಗ್ರಾಪಂಗಳಲ್ಲಿ ಮುಂದಿನ ಒಂದು ವರ್ಷದೊಳಗೆ ನಗರದಲ್ಲಿದ್ದಂತೆ ಗ್ರಾಪಂಗಳಲ್ಲಿಯೂ ಮನೆ-ಮನೆಗಳಿಂದ ಕಸ ಸಂಗ್ರಹಿಸುವ ಗುರಿಯನ್ನು ಬಳ್ಳಾರಿ ಜಿಪಂ ಹಾಕಿಕೊಂಡಿದೆ. ಮೊದಲ ಹಂತವಾಗಿ 16 ಗ್ರಾಪಂಗಳಲ್ಲಿ ಇದನ್ನು ಕಾರ್ಯಾರಂಭ ಮಾಡಲಾಗುತ್ತಿದ್ದು, ಎರಡನೇ ಹಂತದಲ್ಲಿ 54 ಗ್ರಾಪಂಗಳಲ್ಲಿ ಪ್ರಾರಂಭಿಸುವುದಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಜಿಪಂ ಸಿಇಒ ಕೆ.ನಿತೀಶ್‌ ತಿಳಿಸಿದರು.

Advertisement

ನಗರದ ಜಿಪಂ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ 16 ಗ್ರಾಪಂಗಳಿಗೆ ಘನತ್ಯಾಜ್ಯ ವಿಲೇವಾರಿ ವಾಹನಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಪಂ ಪ್ರದೇಶಗಳನ್ನು ಕಸಮುಕ್ತ ಮತ್ತು ವೈಜ್ಞಾನಿಕ ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 16 ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಘನತ್ಯಾಜ್ಯ ವಾಹನಗಳು ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸಿ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು. ಜನರಿಗೆ ಹಸಿ ಮತ್ತು ಒಣ ಕಸ ವಿಂಗಡಿಸಿ ಸಂಗ್ರಹಿಸಿ ವಾಹನಕ್ಕೆ ಹಾಕುವುದಕ್ಕಾಗಿ ಸ್ವಚ್ಛ ಭಾರತ ಮಿಶನ್‌ ಮುಖಾಂತರವೇ ಎರಡು ಡಬ್ಬಿಗಳನ್ನು ನೀಡಲಾಗುತ್ತಿದೆ ಎಂದರು.

ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಈ ಗ್ರಾಪಂಗಳ ಅಧ್ಯಕ್ಷರು, ಪಿಡಿಒಗಳಿಗೆ ಯಶಸ್ವಿ ಘನತ್ಯಾಜ್ಯ ವಿಲೇವಾರಿ ನಿರ್ವಹಣೆ ಮಾಡುತ್ತಿರುವ ದಕ್ಷಿಣ ಕನ್ನಡ ಮತ್ತು ಉಡುಪಿಗಳಲ್ಲಿ ಕಳೆದ ಒಂದು ವಾರದ ಹಿಂದೆ ತರಬೇತಿ ಕೊಡಿಸಿ ಮಾಹಿತಿ ನೀಡಲಾಗಿದೆ. ಸ್ಥಳೀಯ ಗ್ರಾಪಂಗಳಲ್ಲಿ ಈ ಕುರಿತು ಸಾಕಷ್ಟು ಅರಿವು ಮೂಡಿಸಲಾಗಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಮಾತನಾಡಿ, ಸ್ವಚ್ಛ ಭಾರತ್‌ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ವ್ಯವಸ್ಥೆಯು ಮಾನವನ ಮೂಲಭೂತ ಹಕ್ಕಾಗಿದ್ದು, ಉತ್ತಮ ಆರೋಗ್ಯ ಹೊಂದಿ ಗೌರವಯುತ ಜೀವನ ನಡೆಸಲು ಅಗತ್ಯವಾಗಿದೆ. ನೈರ್ಮಲ್ಯ ವ್ಯವಸ್ಥೆಯು ಸುವ್ಯವಸ್ಥಿತವಾಗಿರದೆ ಅಸುರಕ್ಷತೆಯಿಂದ ಕೂಡಿದ್ದರೆ, ಅದು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ವಚ್ಛ ಸುಂದರ ಕರ್ನಾಟಕವನ್ನಾಗಿಸುವ ವಿಶಾಲ ದೃಷ್ಟಿಕೋನವನ್ನು ಸಾಧಿಸಲು ಜಿಲ್ಲೆಯ ಎಲ್ಲಾ ಗ್ರಾಮೀಣ ಕುಟುಂಬಗಳಲ್ಲಿ ಘನತ್ಯಾಜ್ಯವನ್ನು ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕಾದ ಅಗತ್ಯತೆಯಿದೆ. ಆದ್ದರಿಂದ ಗ್ರಾಮಗಳಲ್ಲಿ ವ್ಯವಸ್ಥಿತ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆಯನ್ನು ಕಲ್ಪಿಸಿದರೆ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ಸ್ವಚ್ಛ -ಸ್ವಸ್ಥ ಗ್ರಾಮಗಳನ್ನು ರೂಪಿಸಿ ಸದೃಢ ಸಮಾಜ ರೂಪಿಸಬಹುದಾಗಿದೆ ಎಂದರು.

ಬಳಿಕ ಮೊದಲ ಹಂತದಲ್ಲಿ ಜಿಲ್ಲೆಯ ಕೊರ್ಲಗುಂದಿ, ರೂಪನಗುಡಿ, ಹಗರನೂರು, ಹಿರೇಹಡಗಲಿ, ಅಲಬೂರು, ಹಂಪಸಾಗರ, ಹುರಳಿಹಳ್ಳ, ಹ್ಯಾಳ್ಯಾ , ತುಲಹಳ್ಳಿ, ಹೊಸೂರು, ನಾಗೇನಹಳ್ಳಿ, ಮಲಪನಗುಡಿ, ನಂ. 10 ಮುದ್ದಾಪುರ, ಉಪ್ಪಾರ ಹೊಸಹಳ್ಳಿ, ಚೋರನೂರು ಗ್ರಾಪಂಗಳಿಗೆ ಘನತ್ಯಾಜ್ಯ ವಿಲೇವಾರಿ ವಾಹನಗಳನ್ನು ವಿತರಿಸಲಾಯಿತು.

Advertisement

ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಜಾನಕಿರಾಮ್‌, ಜಿಪಂ ಮುಖ್ಯ ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ, ತಾಪಂ ಇಒ ಎಂ.ಬಸಪ್ಪ ಸೇರಿದಂತೆ ಜಿಪಂನ ವಿವಿಧ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು ಹಾಗೂ ವಿವಿಧ ಗ್ರಾಪಂಗಳ ಪಿಡಿಒಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next