ಬಳ್ಳಾರಿ: ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಬಾರದು, ದೇಶನೂರು ಗ್ರಾಮದಲ್ಲಿ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ನಗರದ ಡಿಸಿ ಕಚೇರಿ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಎರಡನೇ ದಿನ ಗುರುವಾರವೂ ಮುಂದುವರೆಯಿತು.
ಸಂಘದ ನೂರಾರು ಪದಾಧಿ ಕಾರಿಗಳು ಹಾಗೂ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಕಚೇರಿ ಎದುರು ಅಡುಗೆ ತಯಾರಿಸಿ, ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ದೇಶನರೂರು ಗ್ರಾಮದ ಸುಮಾರು 83ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬಡ ರೈತರು, ಕೃಷಿ ಕೂಲಿಕಾರರು ಕಳೆದ 80 ವರ್ಷಗಳಿಂದ ತುಂಗಭದ್ರಾ ನದಿಯ ನಡುಗಡ್ಡೆಯ ಸ.ನಂ. 393ರಿಂದ 403ರ ಸರ್ಕಾರಿ ಬಂಜರು ಭೂಮಿಯಲ್ಲಿ ಫಲವತ್ತಾದ ನಾನಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಜಮೀನಿನ ಫಲವತ್ತೆಗಾಗಿ ಸಾಕಷ್ಟು ರೂ. ವೆಚ್ಚ ಮಾಡಿ ಉಳುಮೆ ಮಾಡುತ್ತಿದ್ದಾರೆ. ಬಂಜರು ಭೂಮಿಯ ಫಲವತ್ತತೆಗೆ ಕುಟುಂಬದ ಸದಸ್ಯರು ಸಾಕಷ್ಟು ಶ್ರಮಿಸಿದ್ದಾರೆ. ಬೆಳೆದ ಮುಳ್ಳುಕಂಟಿಗಳನ್ನು ಕಡಿದು, ತಗ್ಗು ದಿನ್ನೆಗಳನ್ನು ಸರಿಪಡಿಸಿ ಉಳುಮೆ ಮಾಡುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ತೆರಳಿ ರೈತರನ್ನು ಒಕ್ಕಲೆಬ್ಬಿಸುತ್ತಿರುವುದು ಸರಿಯಲ್ಲ. ಈಗಾಗಲೇ ಲಕ್ಷಾಂತರ ರೂ.ಬಂಡವಾಳ ಹಾಕಿ ಎರಡು ಬೆಳೆ ಕೊಡುವ ನೀರಾವರಿ ಪ್ರದೇಶವನ್ನಾಗಿಕೊಂಡಿದ್ದಾರೆ. ಈ ಕುರಿತು ಸರ್ಕಾರದ ಗಮನಸೆಳೆದು, ಉಳುಮೆ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರಗಳನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ರೈತ ಸಂಘ ಹಾಗೂ ರೈತರೊಂದಿಗೆ ಸಾಕಷ್ಟು ಬಾರಿ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಆದರೂ ಅಧಿಕಾರಿಗಳು ಈ ರೀತಿ ವರ್ತಿಸಲು ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ನಿರಂತರ ಹೋರಾಟಕ್ಕೆ ಈ ಹಿಂದಿನ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ, ರೈತರು ಅಭಿವೃದ್ಧಿಪಡಿಸಿದ ಜಮೀನುಗಳಿಗೆ ಹಕ್ಕುಪತ್ರಗಳನ್ನು ನೀಡಬೇಕು ಎಂದು ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಇಂಥ ಜಮೀನುಗಳ ಸಕ್ರಮಕ್ಕಾಗಿ ಹಾಗೂ ಹಕ್ಕು ಪತ್ರಗಳಿಗೆ ಫಾರಂ 57 ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಕರೆ ನೀಡಿದ್ದರು. ಅದರಂತೆ ಕಳೆದ ಫೆಬ್ರುವರಿ ತಿಂಗಳಲ್ಲಿ ಶಿರುಗುಪ್ಪ ತಹಸೀಲ್ದಾರ್ ಅವರಿಗೆ ಈ ರೈತರು ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ದಾಖಲಾತಿಗಳಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಇದು ಸರಿಯಲ್ಲ. ಕೂಡಲೇ ಈ ಕುರಿತು ಸಂಬಂಧಿ ಸಿದ ಇಲಾಖೆ ಮೇಲಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿ ರೈತರ ಹಿತ ಕಾಪಾಡಬೇಕು. ನಿರ್ಲಕ್ಷಿಸಿದರೆ ರಾಜ್ಯಾದ್ಯಂತ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ವಿ.ಎಸ್. ಶಿವಶಂಕರ್, ನಾಗಮ್ಮ, ಎಚ್. ವೀರೇಶ್, ಸುರೇಶ್, ಮಲ್ಲಿ, ಹುಲಗಪ್ಪ, ಮಾರೆಪ್ಪ, ಈರಮ್ಮ, ಹನುಮಂತಪ್ಪ ಇತರರಿದ್ದರು.