Advertisement

28 ಕೋಟಿ ಅನುದಾನದಲ್ಲಿ ರಸ್ತೆ ನಿರ್ಮಾಣ

12:48 PM Mar 08, 2020 | Naveen |

ಬಳ್ಳಾರಿ: ನಗರದ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ. ಸೋಮಶೇಖರ ರೆಡ್ಡಿಯವರು ಭೂಮಿಪೂಜೆ ನೆರವೇರಿಸಿ ಶನಿವಾರ ಚಾಲನೆ ನೀಡಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಹೊರವಲಯದ ಎಚ್‌ ಎಲ್‌ಸಿ ಕಾಲುವೆಯ 14ನೇ ವಿತರಣಾ ಉಪಕಾಲುವೆ ಎಡದಂಡೆಯ ಮೇಲೆ ರಸ್ತೆ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಲೋಕೋಪಯೋಗಿ ಇಲಾಖೆಯ 28 ಕೋಟಿ ರೂ. ಅನುದಾನದಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗುತ್ತದೆ. ನಗರದ ಕೊಳಗಲ್ಲು ರಸ್ತೆಯಿಂದ ಮೋಕಾ ರಸ್ತೆವರೆಗಿನ ಕಾಲುವೆ ಮೇಲಿನ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದು ನಗರಕ್ಕೆ ಮಿನಿ ರಿಂಗ್‌ ರಸ್ತೆಯಾಗಿ ನಿರ್ಮಾಣವಾಗಲಿದೆ. ಈ ರಸ್ತೆಯಿಂದ ನಗರ ಹೊರವಲಯದಲ್ಲಿನ ಜನರಿಗೆ ಅನುಕೂಲವಾಗಲಿದೆ. ಮೇಲಾಗಿ ಕಾಲುವೆ ಮೇಲೆ ರಸ್ತೆ ನಿರ್ಮಿಸಲು ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯೂ ಅನುಮತಿ ನೀಡಿದೆ. ಬೃಹತ್‌ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಶಾಲಾ ಮಿನಿಬಸ್‌, ಬೈಕ್‌ ಸೇರಿ ಇನ್ನಿತರೆ ಲಘು ವಾಹನಗಳು ಸಂಚರಿಸಲು ಅನುಕೂಲವಾಗಲಿದೆ ಎಂದವರು ತಿಳಿಸಿದರು.

ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ 63 ನಿರ್ಮಾಣ ಕಾಮಗಾರಿ ಹಲವು ತಿಂಗಳುಗಳಿಂದ ನನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣವೇನೋ ಗೊತ್ತಿಲ್ಲ. 1200 ಕೋಟಿ ರೂ. ವೆಚ್ಚದಲ್ಲಿ ಆಗಬೇಕಿದ್ದ ಹೆದ್ದಾರಿ ಕಾಮಗಾರಿಗೆ ಗ್ಯಾಮನ್‌ ಇಂಡಿಯಾ ಕಂಪನಿಯವರು ಕೇವಲ 800 ಕೋಟಿ ರೂ.ಗೆ ಟೆಂಡರ್‌ ಹಾಕಿದ್ದಾರೆ. ಹಾಗಾಗಿ ನಷ್ಟವಾಗಿರಬಹುದು. ಆದರೂ, ಒಂದು ಭಾಗದ ರಸ್ತೆಯನ್ನು ಪೂರ್ಣಗೊಳಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದ್ದು, ಇದಕ್ಕಾಗಿ ಸಂಸದ ವೈ. ದೇವೇಂದ್ರಪ್ಪ, ಶಾಸಕ ನಾಗೇಂದ್ರ ಸೇರಿ ನಿಯೋಗದೊಂದಿಗೆ ದೆಹಲಿ ತೆರಳಿ ಹೆದ್ದಾರಿ ಸಚಿವ ನಿತೀನ್‌ ಗಡ್ಕರಿ ಅವರನ್ನು ಭೇಟಿಯಾಗಿ ಕಾಮಗಾರಿ ಪೂರ್ಣಗೊಳಿಸಲು ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ರಾಮಾಯಣವನ್ನು ವಾಲ್ಮೀಕಿ, ಸಂವಿಧಾನವನ್ನು ಅಂಬೇಡ್ಕರ್‌ ಬರೆದಿದ್ದಾರೆ. ಇಂಥಹ ಮಹಾನ್‌ ಗ್ರಂಥಗಳನ್ನು ಎಸ್ಸಿ, ಎಸ್ಟಿ ಸಮುದಾಯದವರು ಬರೆದಿದ್ದು, ಅವರನ್ನು ನಾವು ಇಂದು ದೂರ ಇಡುತ್ತಿದ್ದೇವೆ. ಎಲ್ಲಾರೂ ಹೊಂದಿಕೊಂಡು ಹೋಗಬೇಕು ಎಂಬ ಅರ್ಥದಲ್ಲಿ ಯತ್ನಾಳ್‌ ಹೇಳಿದ್ದಾರೆ. ಇದನ್ನು ಅಪಾರ್ಥ ಮಾಡಿಕೊಳ್ಳುವುದು ಬೇಡ ಎಂದು ಶಾಸಕ ಸೋಮಶೇಖರ ರೆಡ್ಡಿ ಯತ್ನಾಳ್‌ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಬಳ್ಳಾರಿ ನಗರಾಭಿವೃದ್ಧಿ ಅಧ್ಯಕ್ಷ ಸ್ಥಾನಕ್ಕೆ ಇನ್ನು ಯಾರನ್ನೂ ಆಯ್ಕೆ ಮಾಡಿಲ್ಲ. ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ, ಸಚಿವರಾದ ಆನಂದ್‌ಸಿಂಗ್‌, ಬಿ. ಶ್ರೀರಾಮುಲು, ನಾನು ಎಲ್ಲರೂ ಸೇರಿ ಚರ್ಚೆ ಮಾಡಿ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆ. ಯಾವುದೇ ಹೆಸರನ್ನು ಫೈನಲ್‌ ಆಗಿಲ್ಲ. ದಮ್ಮೂರು ಶೇಖರ್‌ ಅವರ ಹೆಸರನ್ನು ಸಹ ಅಂತಿಮಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಬಳ್ಳಾರಿಯಲ್ಲಿ ಶಂಕಿತ ಕೊರೊನಾ ವೈರಸ್‌ ಪತ್ತೆಯಾಗಿದೆ. ಇಬ್ಬರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಜತೆಗೆ ಅವರಿಗೆ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಯಾವುದೇ ಫ್ಯಾಕ್ಟರಿಗೆ ಬಂದವರಾಗಿದ್ದಾರೆ ಎಂಬ ಮಾಹಿತಿ ಇದೆ. ಇದರಿಂದ ಯಾವುದೇ ಆತಂಕವಿಲ್ಲ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಮಲ್ಲನಗೌಡ, ಮೋತ್ಕರ್‌ ಶ್ರೀನಿವಾಸ್‌, ಕೆಎಂಎಫ್‌ ನಿರ್ದೇಶಕ ವೀರಶೇಖರರೆಡ್ಡಿ, ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next