Advertisement

ಫೆ.1,2ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

12:15 PM Dec 27, 2019 | Naveen |

ಬಳ್ಳಾರಿ: ಮುಂಬರುವ 2020ರ ಫೆಬ್ರವರಿ 1 ಮತ್ತು 2ರಂದು ಎರಡು ದಿನಗಳ ಕಾಲ ಬಳ್ಳಾರಿ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದ ಡಾ| ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ತಿಳಿಸಿದ್ದಾರೆ.

Advertisement

ನಗರದ ಸಾಂಸ್ಕೃತಿಕ ಸಮುಚ್ಚಯ ಆವರಣದ ಕನ್ನಡ ಭವನದಲ್ಲಿ ನಡೆದ ಪರಿಷತ್ತಿನ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಬಳ್ಳಾರಿ ನಗರದಲ್ಲಿ ಈ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಯೋಜಿಸುವ ಸಲುವಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು. ಇದಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಲಾಗುವುದು. ಜಿಲ್ಲೆಯ ಗಡಿಭಾಗದಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಎಲ್ಲಾ ಕನ್ನಡಪರ ಸಂಘಟನೆಗಳು, ವಿವಿಧ ವೃತ್ತಿ ಸಂಘಟನೆಗಳು, ಸಾಂಸ್ಕೃತಿಕ ಸಂಘಟನೆಗಳು, ಕಲಾ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು, ಸಾಹಿತಿಗಳು, ಕಲಾವಿದರು ಸಹಕಾರ ನೀಡಬೇಕು ಎಂದು ಕೋರಿದರು.

ಆಂಧ್ರದ ಗಡಿಭಾಗದಲ್ಲಿರುವ ಬಳ್ಳಾರಿ ನಗರದಲ್ಲಿ ಇನ್ನೂ ಕನ್ನಡ ಭಾಷೆಯ ಬಳಕೆ ಸಂಪೂರ್ಣವಾಗಿ ಆಗದಿರುವುದು ವಿಷಾದನೀಯ. ಕನ್ನಡ ಭಾಷೆ, ನಾಡು, ನುಡಿ, ಕವಿ, ಕಲಾವಿದರು, ಸಾಹಿತಿಗಳ ಕುರಿತು ಬಳ್ಳಾರಿ ಜಿಲ್ಲೆಯ ಜನತೆಗೆ ತಿಳಿಸಿಕೊಟ್ಟು ಅವರಲ್ಲಿ ಸಾಹಿತ್ಯದ ಪ್ರಜ್ಞೆ, ಭಾಷೆಯ ಮಹತ್ವ, ಜನಪದ, ಕಲೆ, ಬಳ್ಳಾರಿಯ ಇತಿಹಾಸ, ಔದ್ಯೋಗಿಕ ಬೆಳವಣಿಗೆ, ಜಿಲ್ಲೆ ಎದುರಿಸುತ್ತಿರುವ ಶೈಕ್ಷಣಿಕ, ಕೈಗಾರಿಕೆ, ಪರಿಸರ ಸಮಸ್ಯೆಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದರು.

ಶೀಘ್ರದಲ್ಲಿಯೇ ಸಾಹಿತ್ಯಾಸಕ್ತರ, ಕನ್ನಡ ಅಭಿಮಾನಿಗಳ, ಕನ್ನಡ ಪರ ಸಂಘಟನೆಗಳ ಸಮಾಲೋಚನೆ ಸಭೆಯನ್ನು ಕರೆದು ಅವರ ಸಲಹೆ, ಸೂಚನೆಗಳನ್ನು ಪಡೆದು ಅತ್ಯಂತ ಯಶಸ್ವಿಯಾಗಿ ಸಮ್ಮೇಳನವನ್ನು ಸಂಘಟಿಸಲಾಗುವುದು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್‌ ರಂಗಣ್ಣನವರ್‌ ಮಾತನಾಡಿ, ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

Advertisement

ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ರಮೇಶ್‌ಗೌಡ ಪಾಟೀಲ್‌, ಗೌರವ ಕಾರ್ಯದರ್ಶಿ ವೀರೇಶ್‌ ಕರಡಕಲ್‌, ಕೋಳೂರು ಚಂದ್ರಶೇಖರಗೌಡ, ಎಸ್‌. ಎಂ. ನಾಗರಾಜಸ್ವಾಮಿ, ಕರೂರು ವಿರುಪಾಕ್ಷಗೌಡ, ವಿನೋದ ಕರಣಂ, ದಮ್ಮೂರು ಮಲ್ಲಿಕಾರ್ಜುನ, ವೀರೇಂದ್ರ ರಾವಿಹಾಳ್‌, ಮಂಜುನಾಥ ಕಮ್ಮರಚೇಡು, ಸೋಮಶೇಖರ್‌, ಶ್ರೀನಿವಾಸ ಯಾದವ್‌, ಪ್ರಕಾಶ್‌ ಅಕ್ಕಿ, ಸರೋಜ ಬ್ಯಾತನಾಳ್‌, ಕಾರ್ತಿಕ್‌ ಮರಿಸ್ವಾಮಿಮಠ, ರಮಣಪ್ಪ, ಎಚ್‌. ಕೆ. ಗೌರಿಶಂಕರ್‌, ಕುಮಾರಸ್ವಾಮಿ, ಡಾ| ಕೆ.ಬಸಪ್ಪ, ಶಿವಾನಂದ ಕತಕನಹಳ್ಳಿ, ಸುರೇಶ್‌ಹೂಗಾರ್‌, ದಿವಾಕರ ನಾರಾಯಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next