Advertisement

ಗೃಹರಕ್ಷಕರ ಸೇವೆ ಶ್ಲಾಘನೀಯ

06:28 PM Feb 21, 2020 | Naveen |

ಬಳ್ಳಾರಿ: ಜಿಲ್ಲೆಯಲ್ಲಿ ಅಲ್ಲದೇ ವಿವಿಧ ಜಿಲ್ಲೆಗಳಲ್ಲಿಯು ಸಹ ಪ್ರವಾಹ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿರುವ ಗೃಹರಕ್ಷಕರ ಸೇವೆ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಹೇಳಿದರು.

Advertisement

ನಗರದ ಜಿಲ್ಲಾ ಗೃಹರಕ್ಷಕದಳ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಗೃಹರಕ್ಷಕರ ವಾರ್ಷಿಕೋತ್ಸವ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗೃಹರಕ್ಷಕರ ತಂಡ ಕಾಲುವೆ ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿರುವ ಜನರ ಮೃತದೇಹಗಳನ್ನು ಶೋಧನೆ ಮಾಡಿ ಪತ್ತೆ ಹಚ್ಚಿ ಅದರ ವಾರಸುದಾರರಿಗೆ ಒಪ್ಪಿಸುವ ಸೇವೆಯನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಸಿರುಗುಪ್ಪ ತಾಲೂಕಿನಲ್ಲಿ ಉಂಟಾದ ಪ್ರವಾಹದಲ್ಲಿ ಸಿಲುಕಿದ 6 ಜನ ಕುರಿಗಾಹಿಗಳನ್ನು ಮತ್ತು 600ಕ್ಕೂ ಹೆಚ್ಚು ಕುರಿಗಳನ್ನು ರಕ್ಷಣೆ ಮಾಡುವ ಕಾರ್ಯ ಮಾಡಿದ್ದು, ಚುನಾವಣೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿರುವುದನ್ನು ಶ್ಲಾಘಿಸಿದರು. ವಾರ್ಷಿಕೋತ್ಸವ ದಿನಾಚರಣೆ ಅಂಗವಾಗಿ ಅತಿ ಹೆಚ್ಚು ರಕ್ಷಣಾ ಕಾರ್ಯಾಚರಣೆ, ರಕ್ತದಾನ ಶಿಬಿರ, ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಘಟಕದ ಉತ್ತಮ ಅಧಿಕಾರಿ, ಪರಿಸರ ಕಾರ್ಯಕ್ರಮ, ಸಾಮಾಜಿಕ ಕಾರ್ಯಕ್ರಮ, ಚುನಾವಣಾ ಹಾಗೂ ಕಾನೂನು ಸುವ್ಯವಸ್ಥೆ ಕರ್ತವ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕರ ನಿಯೋಜನೆ ಮಾಡಿರುವ ಘಟಕಗಳಿಗೆ ಬಹುಮಾನಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಗೃಹರಕ್ಷಕರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನಸಳೆಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳ ಮತ್ತು ಮುಖ್ಯ ಮಂತ್ರಿಗಳ ಪದಕ ಪುರಸ್ಕೃತರಿಗೆ ಸನ್ಮಾನಿಸಲಾಯಿತು. ಗೃಹರಕ್ಷಕದಳದ ಸಮಾದೇಷ್ಟ ಎಂ.ಎ. ಷಕೀಬ್‌, ಇಲಾಖೆ ನಿವೃತ್ತ ಅಧಿಕಾರಿಗಳು, ಗೃಹರಕ್ಷಕ ಅಧಿಕಾರಿಗಳು, ಗೃಹರಕ್ಷಕರು ಮತ್ತು ಅವರ ಕುಟುಂಬದ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next