ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರು ಗುಣಮುಖರಾಗಿ ಮನೆ ಸೇರುತ್ತಿರುವ ಬೆನ್ನಲ್ಲೇ ನಗರದ ಕೌಲ್‌ಬಜಾರ್ ಪ್ರದೇಶದಲ್ಲಿ ಮತ್ತೂಂದು ಕೋವಿಡ್-19 ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, 8 ಜನರು ಗುಣಮುಖರಾಗಿ ಮನೆ ಸೇರಿದ್ದು, ಬಾಕಿ ಆರು ಜನರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದ ಕೌಲ್‌ಬಜಾರ್ ಪ್ರದೇಶದ 43 ವರ್ಷದ ವ್ಯಕ್ತಿಗೆ ಕೋವಿಡ್-19 ಸೋಂಕು ಪತ್ತೆಯಾಗಿದೆ. ಸೋಂಕಿತರು ಕಳೆದ ಮಾರ್ಚ್ ತಿಂಗಳಲ್ಲಿ ಕೌಲ್‌ಬಜಾರ್‌ನ 14, ನೆರೆಯ ಆಂಧ್ರದ ಅನಂತಪುರ ಜಿಲ್ಲೆಯ ಕಣೇಕಲ್ ಗ್ರಾಮದ 4 ಜನರು ಸೇರಿ ಒಟ್ಟು 18 ಜನರು ತೀರ್ಥ ಕ್ಷೇತ್ರಗಳಿಗೆ ತೆರಳಿದ್ದು, ಉತ್ತರಾಖಂಡ್ ರಾಜ್ಯದ ಲುಡಿಕಿ ಎಂಬ ಊರಲ್ಲಿ ಲಾಕ್‌ಡೌನ್ ಆಗಿದ್ದರು. 37 ದಿನಗಳ ಕಾಲ ಅಲ್ಲಿನ ಲಾಡ್ಜ್ ಒಂದರಲ್ಲಿ ತಂಗಿದ್ದ ಇವರು, ಬಳ್ಳಾರಿ ಶಾಸಕರು ಸೇರಿ ಹಲವು ದಾನಿಗಳು ಆರ್ಥಿಕ ಸಹಾಯ ಮಾಡಿದ್ದು, ಕಳೆದ ಮೇ 2 ರಂದು ಬಳ್ಳಾರಿಗೆ ಬಂದಿದ್ದಾರೆ. ಆಗ ಎಲ್ಲರನ್ನೂ ತಪಾಸಣೆಗೊಳಪಡಿಸಿ ಸ್ವ್ಯಾಬ್ ಪಡೆದು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಸೋಮವಾರ ವರದಿ ಬಂದಿದ್ದು, ಇವರಲ್ಲಿ ಬಳ್ಳಾರಿಯ ಕೌಲ್‌ಬಜಾರ್‌ನ 43 ವರ್ಷದ ನಿವಾಸಿಗೆ ಕೋವಿಡ್ -19 ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೋಂಕಿತರನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಇನ್ನುಳಿದ 13 ಜನರನ್ನು ಸರ್ಕಾರಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ವಿವರಿಸಿದರು.
1 ಕಿಮೀ ವ್ಯಾಪ್ತಿ ಕಂಟೇನ್ಮೆಂಟ್ ಜೋನ್: ಕೌಲ್ ಬಜಾರ್‌ನ ಪ್ರದೇಶವೊಂದರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರದೇಶದ ಸುತ್ತಲೂ ಒಂದು ಕಿಮೀ ವ್ಯಾಪ್ತಿಯನ್ನು ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಿ, ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಯಾರೊಬ್ಬರೂ ಆ ಪ್ರದೇಶದಿಂದ ಒಳಗೆ-ಹೊರಗೆ ಓಡಾಡುವಂತಿಲ್ಲ ಎಂದ ಡಿಸಿ ನಕುಲ್, ಕಂಟೇನ್ಮೆಂಟ್ ಜೋನ್‌ನಲ್ಲಿ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ಕಾರ್ಯ ಇಂದಿನಿಂದ ಆರಂಭಿಸಿದ್ದಾರೆ. ಜತೆಗೆ ಎಲ್ಲೆಡೆ ಫಾಗಿಂಗ್ ಮಾಡಲಾಗುತ್ತಿದೆ ಎಂದರು.
ಕೋವಿಡ್-19 ಸೋಂಕಿತರಿಗೆ ಈಗಾಗಲೇ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಸೋಂಕಿತರ ಮಗಳು, ಅಳಿಯ ಸೇರಿ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 22 ಜನರನ್ನು ಸಹ ಸಾಂಸ್ಥಿಕ ಪ್ರತ್ಯೇಕ ವಾಸದಲ್ಲಿಡಲಾಗಿದೆ. ಸೋಂಕಿತರು ಉತ್ತರಾಖಂಡದಿಂದ ಬಂದ ನಂತರ ಕೌಲ್‌ಬಜಾರ್‌ನ ಕೆಲ ಸ್ಥಳಗಳಲ್ಲಿ ತಿರುಗಾಡಿದ್ದಾನೆ ಎಂಬ ಮಾಹಿತಿ ಲಭ್ಯವಿದೆ. ಕೆಲವರು ಸ್ವಯಂ ಪ್ರೇರಣೆಯಿಂದ ತಪಾಸಣೆಗೆ ಒಳಗಾಗುತ್ತಿದ್ದಾರೆ. ಇನ್ನು ಕೆಲವರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.
ಅಂತಾರಾಜ್ಯದಿಂದ ಬಂದರೆ ಕ್ವಾರಂಟೈನ್ ಕಡ್ಡಾಯ: ನೆರೆಯ ಆಂಧ್ರಪ್ರದೇಶ, ತೆಲಂಗಾಣ ಸೇರಿ ಅನ್ಯ ರಾಜ್ಯಗಳಿಂದ ಜಿಲ್ಲೆಗೆ ಯಾರೇ ಬಂದರೂ ಅಂತಹವರನ್ನು 14 ದಿನಗಳ ಕಾಲ ಸಾಂಸ್ಥಿಕ ಪ್ರತ್ಯೇಕ ವಾಸದಲ್ಲಿ ಇಡುವುದು ಕಡ್ಡಾಯ. ಒಂದು ವೇಳೆ ಅನಾರೋಗ್ಯದ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಮ್ಸ್‌ಗೆ ಬರುವವರು ಅಲ್ಲಿನ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಆಂಬ್ಯುಲೆನ್ಸ್‌ನಲ್ಲಿ ಮಾತ್ರ ಬರುವವರಿಗೆ ಅವಕಾಶ ನೀಡಲಾಗುವುದು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಜಿಲ್ಲೆಗೆ ಬಂದರೆ ಅಂತಹವರನ್ನು 14 ದಿನಗಳ ಕಾಲ ಸಾಂಸ್ಥಿಕ ಪ್ರತ್ಯೇಕ ವಾಸದಲ್ಲಿಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಎಸ್‌ಪಿ ಸಿ.ಕೆ.ಬಾಬಾ ಮಾತನಾಡಿ, ನೆರೆ ರಾಜ್ಯದಿಂದ ಜನರು ನುಸುಳದಂತೆ ತೀವ್ರ ನಿಗಾ ವಹಿಸಲಾಗಿದ್ದು, ಮುಖ್ಯ ರಸ್ತೆ ಬಿಟ್ಟು, ಕಾಲುವೆ ದಾರಿ, ಹೊಲಗಳ ಮೂಲಕ ಬರುವವರ ಮೇಲೂ ಸಹ ಕಣ್ಣಿಡಲಾಗಿದೆ. ಆಂಧ್ರದೊಂದಿಗೆ ಗಡಿ ಸಂಪರ್ಕ ಹೊಂದಿರುವ ಸಂಡೂರು, ಬಳ್ಳಾರಿ ಮತ್ತು ಸಿರಗುಪ್ಪದ 65 ಹಳ್ಳಿಗಳಲ್ಲಿ ಪ್ರತಿನಿತ್ಯ ಮೂರು ಗಸ್ತು ವಾಹನಗಳು ನಿರಂತರವಾಗಿ ಸಂಚರಿಸುತ್ತಿವೆ. ಜನರು ನುಸುಳದಂತೆ ನಿಗಾವಹಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರತಿ ತಾಲೂಕಿಗೆ ಒಬ್ಬರನ್ನು ನೋಡಲ್ ಅಧಿಕಾರಿಗಳನ್ನ ನೇಮಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಕೆ.ನಿತೀಶ್, ಅಪರ ಜಿಲ್ಲಾಧಿಕಾರಿ ಮಂಜುನಾಥ ಮತ್ತಿತರರು ಇದ್ದರು.